
ಎಚ್.ಡಿ.ರಂಗಸ್ವಾಮಿ
ನಂಜನಗೂಡು: ಆಧ್ಯಾತ್ಮಿಕತೆ ಭಾರತ ದೇಶದ ಆತ್ಮ, ನಮ್ಮ ದೇಶದ ಸಂಸ್ಕೃತಿ ಮತ್ತು ಧರ್ಮ ಆಚಾರ, ವಿಚಾರವನ್ನು ಸಂರಕ್ಷಿಸುತ್ತಿರುವ ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ರಾಜ್ಯಮಟ್ಟದ ಭಜನಾಮೇಳ ಮತ್ತು ದೇಶಿ ಆಟಗಳು ಸೋಬಾನೆ ಪದ ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಅಸ್ತಿತ್ವವಿರುವುದು ಆಧ್ಯಾತ್ಮಿಕತೆಯಲ್ಲಿ, ಆಧ್ಯಾತ್ಮಿಕತೆ ಇಲ್ಲದೆ ಭಾರತವಿಲ್ಲ, ನಮ್ಮ ಸಂಸ್ಕೃತಿ, ಧರ್ಮ, ಆಚಾರ, ವಿಚಾರ, ನಮ್ಮ ದೇವಾಲಯಗಳಲ್ಲಿದೆ, ದೇಶದಲ್ಲಿ ಶಾಂತಿ ನೆಲೆಸಲು ಆಧ್ಯಾತ್ಮಿಕತೆಯಿಂದ ಮಾತ್ರ ಸಾಧ್ಯ, ದೇಶದಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಬೆಳೆಸುವ ದೊಡ್ಡ ಕೆಲಸವನ್ನು ಮಠಮಾನ್ಯಗಳು ನಿರ್ವಹಿಸುತ್ತಿವೆ, ಪುಸ್ತಕದ ಶಿಕ್ಷಣದ ಜೊತೆಗೆ ಜನರಿಗೆ ಮೌಲ್ಯದ ಶಿಕ್ಷಣವನ್ನು ನೀಡುತ್ತಿವೆ, ಆದ್ದರಿಂದ ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯುತ್ತದೆ, ದೇಶದ ಉಳಿವಿನ ಜೊತೆಗೆ ನಮ್ಮ ಆಚಾರ ವಿಚಾರಗಳನ್ನು ಉಳಿಸಿಕೊಳ್ಳಬೇಕಿದೆ, ನಮ್ಮ ಮುಂಬರುವ ಪೀಳಿಗೆಗೂ ಸಹ ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ತಿಳಿಸುವ ಕೆಲಸ ಮಾಡಬೇಕಿದೆ ಎಂದರು.
ಸುತ್ತೂರು ಜಾತ್ರೆಗೆ ಬರುವುದೇ ಖುಷಿಯ ಸಂಗತಿ ಮತ್ತು ಹೆಮ್ಮೆಯಾಗಿದೆ. ಸುತ್ತೂರು ಜಾತ್ರೆ ಖರೀದಿಯ ಜೊತೆಗೆ ಬುದ್ದಿಯನ್ನು ಕೊಂಡೊಯ್ಯುವ ಯಾತ್ರೆಯಾಗಿದೆ, ಶ್ರೀ ಮಠವು ಧಾರ್ಮಿಕ ಕೈಂಕರ್ಯದ ಜೊತೆಗೆ ಈ ಭಾಗದ ಗ್ರಾಮೀಣ ಭಾಗದ ಜನರಿಗೆ ಅವಶ್ಯವಿರುವ ಜ್ಞಾನವನ್ನು ಹಂಚುವ ಕೆಲಸವನ್ನು ಶ್ರೀ ಮಠವು ನಡೆಸುತ್ತಿದೆ ಎಂದು ಹೇಳಿದರು.
ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸುತ್ತೂರು ಮಠವು ಶಿಕ್ಷಣ ದಾಸೋಹ ಆಧ್ಯಾತ್ಮಿಕತೆಯನ್ನು ಮೀರಿ ದೇಶಕ್ಕೆ ಅನ್ನ ಕೊಡುವ ರೈತರಿಗೆ ನೀರು ಒದಗಿಸುವ ಕೆಲಸವನ್ನು ಮಾಡಿದೆ, ಶ್ರೀಗಳ ದೂರ ದೃಷ್ಟಿಯ ಫಲವಾಗಿ ನಾನು ನೀರಾವರಿ ಸಚಿವನಾಗಿದ್ದ ವೇಳೆ ಸುತ್ತೂರು ಶ್ರೀಗಳ ಸಲಹೆಯಂತೆ ಚಾಮರಾಜನಗರ ಭಾಗದ ಕೆರೆಗಳನ್ನು ತುಂಬಿಸುವ ಕೆಲಸವನ್ನು ಮಾಡಿದ್ದೇನೆ.
ಅಭಿವೃದ್ಧಿ ಮತ್ತು ಪರಂಪರೆ ಒಂದೇ ಸ್ಥಳದಲ್ಲಿರುವುದು ಸುತ್ತೂರು ಮಠದಲ್ಲಿ ಮಾತ್ರ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ವರ್ಷದಿಂದ ವರ್ಷಕ್ಕೆ ಪರಂಪರೆಯನ್ನು ಶ್ರೀಮಂತಗೊಳಿಸುವ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನುಷ್ಯನಿಗೆ ಧ್ಯಾನ ಮತ್ತು ಜ್ಞಾನವಿದ್ದರೆ ಅವರ ಸಾಧನೆ ಶಾಶ್ವತವಾಗಿ ಉಳಿಯುತ್ತದೆ, ಯಶಸ್ಸು ತಾತ್ಕಾಲಿಕ ಮಾತ್ರ, ಯಶಸ್ಸಿನ ಹಿಂದೆ ಹೋಗದೆ ಬದುಕಿನ ಸಾಕ್ಷಾತ್ಕಾರದ ಕಡೆಗೆ ಹಾಗಿದಾಗ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ ಎಂದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಒಂದು ಮಠ ಯಾವ ಆಯಾಮಗಳಲ್ಲಿ ಸೇವೆ ಸಲ್ಲಿಸಬಹುದು, ಎಂಬುದಕ್ಕೆ ಸುತ್ತೂರು ಮಠ ನಿದರ್ಶನವಾಗಿದೆ, ಸುತ್ತಮುತ್ತಲ ರೈತರಿಗೆ ಅನುಕೂಲವಾಗುವಂತೆ ಕೆರೆಕಟ್ಟೆಗಳನ್ನು ತುಂಬಿಸಿದ ಕೀರ್ತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗೆ ಸಲ್ಲುತ್ತದೆ ಎಂದರು.
ಮಠಮಾನ್ಯಗಳು ಸಾತ್ವಿಕತೆಯ ಜೊತೆಗೆ ಯಾವ ರೀತಿ ಸಂಘಟನೆ ಮಾಡಬಹುದು ಎಂಬುದಕ್ಕೆ ಸುತ್ತೂರು ಮಠ ಸಾಕ್ಷಿಯಾಗಿದೆ, ಅಲ್ಲದೆ ಭಾರತದ ಸಂಸ್ಕೃತಿಯನ್ನು ವಿದೇಶಗಳಲ್ಲಿ ಪಸರಿಸುವ ಸಲುವಾಗಿ ಮುಸ್ಲಿಂ ಬಾಹುಳ್ಯಯುಳ್ಳ ದುಬೈ ಮತ್ತು ಅಮೆರಿಕದಲ್ಲೂ ಸಹ ಸುತ್ತೂರು ಮಠ ದೇವಾಲಯಗಳನ್ನು ನಿರ್ಮಿಸಿರುವುದು ಸನಾತನ ಧರ್ಮದ ವಿಜಯದ ಸಂಕೇತವಾಗಿದೆ.
ಅಲ್ಲದೇ, ನಶ್ವರ ಸ್ಥಿತಿಯಲ್ಲಿರುವ ಗ್ರಾಮೀಣ ದೇಸೀ ಆಟಗಳನ್ನು ಉಳಿಸಿ ಬೆಳೆಸುವ ಸಲುವಾಗಿ ದೇಸೀಯ ಆಟಗಳಿಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಕಾರ್ಯಕ್ರಮದಲ್ಲಿ ರಾಗಿ ಬೀಸುವ ಮೂಲಕ ರಾಗಿ ಬೀಸುವ ಸ್ಪರ್ಧೆಯನ್ನು ಹಾಗೂ ಚೌಕಬಾರ ಆಟ ಆಡುವ ಮೂಲಕ ದೇಶಿ ಆಟಗಳ ಸ್ಪರ್ಧೆಯನ್ನು ಉದ್ಘಾಟಿಸಲಾಯಿತು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಡುಪಿಯ ಸೋದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀ ಪಾದಂಗಳು, ಸಾನಿಧ್ಯ ವಹಿಸಿದ್ದರು.
ಊಟಿ ಶಾಸಕ ಆರ್. ಗಣೇಶ್, ಸಿಎಫ್.ಟಿಆರ್ಐ ನಿರ್ದೇಶಕ ಡಾ. ಗಿರಿಧರ್ ಪಾರ್ವತಂ, ಎಂಸಿಸಿಐ ಮೈಸೂರಿನ ಅಧ್ಯಕ್ಷ ಕೆ.ಬಿ. ಲಿಂಗರಾಜು, ಉದ್ಯಮಿ ರಾಘವೇಂದ್ರರಾವ್, ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಇದ್ದರು.