ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಲೋಹದ ಹಕ್ಕಿಯ ಹಾರಾಟ ಆರಂಭ ಯಾವಾಗ?

Published : Jan 17, 2026, 07:21 AM IST
Airport

ಸಾರಾಂಶ

ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಮಾರ್ಚ್ ತಿಂಗಳಲ್ಲಿ ವಿಮಾನ ಹಾರಾಟ ಆರಂಭಿಸುವ ನಿರೀಕ್ಷೆಯಿದೆ. ಸದ್ಯ ಪರಿಸರ ಮಾಲಿನ್ಯ ಇಲಾಖೆಯ ಅನುಮತಿಗಾಗಿ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯಲಾಗುತ್ತಿದ್ದು, ಶೀಘ್ರದಲ್ಲೇ ಪರವಾನಗಿ ಸಿಗುವ ಭರವಸೆಯಿದೆ.

ವಿಜಯಪುರ:  ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ 100ಕ್ಕೆ 100ರಷ್ಟು ಮುಗಿದಿದ್ದು, ಮಾರ್ಚ್ ತಿಂಗಳಲ್ಲಿ ಜಿಲ್ಲೆಯಲ್ಲಿ ಲೋಹದ ಹಕ್ಕಿಯನ್ನು ಹಾರಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ಹೊಸ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಬುರಣಾಪುರದಲ್ಲಿರುವ ವಿಮಾನ‌ ನಿಲ್ದಾಣಕ್ಕೆ ನಾನು ಇದೀಗ ಎರಡನೇ ಬಾರಿ ಭೇಟಿ ನೀಡಿ ವಿಮಾನ‌ ನಿಲ್ದಾಣವನ್ನು ಪರಿಶೀಲಿಸಿದ್ದೇನೆ. ಎಲ್ಲ ಪ್ರಮುಖ ಕಾಮಗಾರಿಗಳು ಮುಗಿದಿದ್ದು, ಕೇವಲ ಪರಿಸರ ಮಾಲಿನ್ಯದ ಕುರಿತು ಅನುಮತಿ ಬರುವುದೊಂದೆ ಬಾಕಿಯಿದೆ. ಆರಂಭದಲ್ಲೇ ಪರಿಸರ ಮಾಲಿನ್ಯ ಇಲಾಖೆಯಿಂದ ಅನುಮತಿ ಪಡೆಯದ ಕಾರಣ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಬಲವಾಗಿ ವಾದ ಮಂಡಿಸಿದ್ದು, ಇದೀಗ ತೀರ್ಪು ಮಾತ್ರ ಬಾಕಿಯಿದ್ದು, ಈ ತಿಂಗಳೊಳಗಾಗಿ ನಿರ್ಣಯವೂ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.

ಬುರಣಾಪುರದಲ್ಲಿ 727 ಎಕರೆ ಜಾಗ

ನಾವು ಪರವಾನಗಿಗಾಗಿ ಜ.6ರಂದು ಏರೋಡ್ರೋಮ್ ಅಥಾರಿಟಿಗೆ ಪತ್ರ ಬರೆದಿದ್ದೇವೆ. ಅವರೂ ಸಹ ಶೀಘ್ರದಲ್ಲೇ ಪರವಾನಗಿ ನೀಡಲಿದ್ದಾರೆ. ಕಪಿಲ್ ಸಿಬಲ್‌ ಅವರು ಬಲವಾಗಿ ವಾದ ಮಂಡಿಸಿದ್ದಾರೆ. ಬುರಣಾಪುರದಲ್ಲಿ 727 ಎಕರೆ ಜಾಗೆಯಲ್ಲಿ ಸಕಲ ತಯಾರಿಯಾಗಿದ್ದು, ಮಾರ್ಚ್ ತಿಂಗಳಿನಲ್ಲಿ ವಿಮಾನ ಹಾರಿಸುವ ಭರವಸೆ ಇದೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ ಆಗುವುದರಿಂದ ಪ್ರವಾಸೋದ್ಯಮವೂ ಬೆಳೆಯಲಿದೆ. ಪಕ್ಕದ ಬಾಗಲಕೋಟೆಗೂ ಪ್ರವಾಸೋದ್ಯಮಕ್ಕೆ ಸಹಾಯವಾಗಲಿದೆ ಎಂದರು.

ರಾತ್ರಿ ವಿಮಾನ ಲ್ಯಾಂಡಿಂಗ್ ಮಾಡುವ ಯೋಜನೆಯೂ ಜಾರಿಯಲ್ಲಿದೆ. ಇದೇ ವಿಚಾರವಾಗಿ ಭೂ ಸ್ವಾಧೀನ ಮಾಡಿಕೊಂಡ ಜಮೀನು ಕೆಐಎಡಿಬಿಯಿಂದ ನಮ್ಮ ಇಲಾಖೆಗೆ ಬರಬೇಕಿದೆ. ಬಂದರೆ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಇನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಸಿಂದಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು 2.65 ಕಿಮೀ ಅಂತರದ ರಸ್ತೆಯನ್ನು ಬುರಣಾಪುರ ಮದಭಾವಿ ಮಧ್ಯದಲ್ಲಿ ನಿರ್ಮಿಸಲಾಗುವುದು ಎಂದರು.

ಬಜೆಟ್ ನಂತರ ಸಿಎಂ ಬದಲಾವಣೆ ಆಗಬಹುದು

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಡಿ‌.ಕೆ‌.ಶಿವಕುಮಾರ ಆಪ್ತರಾಗಿರುವ ಶಾಸಕ ಶಿವಗಂಗಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ ಅವರಿಗೆ ಸಿಎಂ ಆಗುವ ಅರ್ಹತೆ ಇದೆ. ಅವರು ಈಗಾಗಲೇ ಡಿಸಿಎಂ ಆಗಿದ್ದಾರೆ. ಆದರೆ, ಎಲ್ಲದಕ್ಕೂ ಹೈಕಮಾಂಡ್ ತೀರ್ಮಾನವೇ ಅಂತಿಮ. ಆದರೆ, ಈಗ ಬಜೆಟ್ ಇರುವ ಕಾರಣ ಬದಲಾವಣೆ ಆಗಲಿಕ್ಕಿಲ್ಲ. ಈಗ ಬದಲಾವಣೆ ಮಾಡಿದರೇ ಆಡಳಿತ ಮತ್ತು ಬಜೆಟ್ ಮೇಲೆ ಸಮಸ್ಯೆ ಆಗಬಹುದು. ಬಜೆಟ್ ನಂತರ ಸಿಎಂ ಬದಲಾವಣೆ ಆಗಬಹುದು. 

ಎಐಸಿಸಿ ತೀರ್ಮಾನ ಮಾಡಿದರೇ ಈಗಲೇ ಡಿ.ಕೆ.ಶಿವಕುಮಾರ ಸಿಎಂ ಆಗಬಹುದು. ಬಜೆಟ್ ಕಾಪಿ ರೆಡಿ ಇರುತ್ತದೆ. ಡಿ.ಕೆ.ಶಿವಕುಮಾರ ಬಂದು ಓದಬಹುದು. ಎಲ್ಲವೂ ಎಐಸಿಸಿ ಕೈಯಲ್ಲಿದೆ. ಸಿಎಂ ಬದಲಾವಣೆ ಬಗ್ಗೆ ಮಾತನಾಡುವುದರಿಂದ ಜನರಿಗೆ ರಾಜಕೀಯ ಮನರಂಜನೆ ಕೊಟ್ಟಂತಾಗುತ್ತದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಯಾರೂ ಕೂಡ ಮಾತನಾಡಬಾರದು ಎಂದು ತಿಳಿಸಿದರು.

PREV
Read more Articles on
click me!

Recommended Stories

ಉತ್ಖನನ ವೇಳೆ ನಿಧಿ ದೊರೆತರೆ ಲಕ್ಕುಂಡಿ ಗ್ರಾಮವೇ ಸ್ಥಳಾಂತರ?
Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!