
ಮೈಸೂರು: ಸಂಕ್ರಾಂತಿ/ ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೆಚ್ಚು ಜನರು ಪ್ರಯಾಣಿಸುವುದರಿಂದ ಅವರಿಗೆ ಸೌಲಭ್ಯ ಕಲ್ಪಿಸಲು ವಿಶೇಷ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ತಿಳಿಸಿದ್ದಾರೆ.
ನೈಋತ್ಯ ರೈಲ್ವೆ ವತಿಯಿಂದ ಮೈಸೂರು ಮತ್ತು ಟ್ಯುಟಿಕಾರನ್ ನಡುವೆ ಎರಡು ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಿಶೇಷ ರೈಲುಗಳ ವಿವರ- 06283 ಮೈಸೂರು– ಟ್ಯುಟಿಕಾರನ್ ಎಕ್ಸ್ ಪ್ರೆಸ್ ವಿಶೇಷ ರೈಲುಗಳು ಇದೇ ಜ.13 ರಂದು ಮೈಸೂರಿನಿಂದ ಸಂಜೆ 6:35ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 11ಕ್ಕೆ ಟ್ಯುಟಿಕಾರನ್ ತಲುಪಲಿದೆ. 06284 ಟ್ಯುಟಿಕಾರನ್– ಮೈಸೂರು ಎಕ್ಸ್ ಪ್ರೆಸ್ ವಿಶೇಷ ರೈಲು ಜ.10 ಮತ್ತು 14 ರಂದು ಟ್ಯುಟಿಕಾರನ್ ನಿಂದ ಮಧ್ಯಾಹ್ನ 2 ಗಂಟೆಗೆ ಹೊರಡಲಿದ್ದು, ಮರುದಿನ ಬೆಳಗ್ಗೆ 7:45ಕ್ಕೆ ಮೈಸೂರು ತಲುಪಲಿದೆ ಎಂದು ಹೇಳಿದ್ದಾರೆ.
ಈ ರೈಲುಗಳು ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಹೊಸೂರು, ಧರ್ಮಪುರಿ, ಸೇಲಂ ಜಂಕ್ಷನ್, ನಾಮಕ್ಕಲ್, ಕರೂರು ಜಂಕ್ಷನ್, ದಿಂಡಿಗಲ್ ಜಂಕ್ಷನ್, ಮಧುರೈ ಜಂಕ್ಷನ್, ವಿರುದ್ಧನಗರ ಜಂಕ್ಷನ್, ಸತೂರು, ಕೋವಿಲ್ ಪಟ್ಟಿ ಮತ್ತು ಟುಟಿಮೇಲೂರ್ ನಿಲ್ದಾಣಗಳಲ್ಲಿ ಸ್ಟಾಪ್ ಕೊಡಲಿದೆ. ಈ ವಿಶೇಷ ರೈಲು ಒಟ್ಟು 19 ಕೋಚ್ ಗಳನ್ನು ಹೊಂದಿದ್ದು, ಎಸಿ ಟು ಟೈಯರ್– 3, ಎಸಿ ತ್ರಿಟೈಯರ್– 6, ಸ್ಲೀಪರ್ ಕ್ಲಾಸ್– 8, ಎಸ್ಎಲ್ಆರ್/ಡಿ– 2 ಬೋಗಿಗಳು ಇವೆ ಎಂದು ಅವರು ವಿವರಿಸಿದ್ದಾರೆ.
ಮಂಗಳೂರು: ಪಶ್ಚಿಮ ಕರಾವಳಿ ರೈಲು ಯಾತ್ರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್ ಹಾಗೂ ಕಾರ್ಯದರ್ಶಿ ಅನಿಲ್ ಹೆಗ್ಡೆ ಅವರು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಜೇಶ್ ಚೌಟ ಅವರನ್ನು ಭೇಟಿ ಮಾಡಿ, ಮಂಗಳೂರು ಭಾಗದ ರೈಲ್ವೆ ಸಂಬಂಧಿತ ವಿವಿಧ ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಕಳೆದ ಕೆಲವು ದಿನಗಳಿಂದ ಬೆಂಗಳೂರು–ಕಣ್ಣೂರು ರೈಲು ನಿರಂತರವಾಗಿ ವಿಳಂಬವಾಗಿ ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ರೈಲಿನ ಸಮಯ ಪಾಲನೆ ಸುಧಾರಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಮಿತಿಯಿಂದ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಸ್ತಾವಿತ ಮಂಗಳೂರು–ರಾಮೇಶ್ವರ ಸಾಪ್ತಾಹಿಕ ರೈಲನ್ನು ಶೀಘ್ರ ಆರಂಭಿಸಬೇಕು ಹಾಗೂ ಇದೇ ರೈಲಿನ ಬೋಗಿಗಳನ್ನು ಉಪಯೋಗಿಸಿ ವಾರಕ್ಕೆ ಒಂದು ಬಾರಿ ಮಂಗಳೂರು– ಭಾವನಗರ ರೈಲು ಸೇವೆಯನ್ನು ಪ್ರಾರಂಭಿಸಬೇಕೆಂದು ಸಂಸದರ ಗಮನಕ್ಕೆ ತರಲಾಯಿತು.
ಪ್ರಸ್ತಾವಿತ ಮಂಗಳೂರು– ಬೆಂಗಳೂರು ವಂದೇ ಭಾರತ್ ರೈಲನ್ನು ಆರಂಭಿಸುವಾಗ, ಈಗ ಬೆಂಗಳೂರು–ಮಂಗಳೂರು ನಡುವೆ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಮಾರ್ಪಾಡು ಮಾಡದೆ ಹಾಗೂ ಅವುಗಳ ಓಡಾಟಕ್ಕೆ ವ್ಯತ್ಯಯವಾಗದಂತೆ ಹೊಸ ರೈಲಿನ ವೇಳಾಪಟ್ಟಿಯನ್ನು ರೂಪಿಸಬೇಕೆಂದು ಸಮಿತಿ ಆಗ್ರಹಿಸಿತು.
ಮಂಗಳೂರು ಸೆಂಟ್ರಲ್ ಮುಖಾಂತರ ಸಂಚರಿಸುತ್ತಿರುವ ಬೆಂಗಳೂರು–ಕಣ್ಣೂರು ಹಾಗೂ ಬೆಂಗಳೂರು– ಮುರುಡೇಶ್ವರ ರೈಲುಗಳ ಇಂದಿನ ಮಾರ್ಗ ಮತ್ತು ಪ್ರಯಾಣಿಕ ಸ್ನೇಹಿ ವೇಳಾಪಟ್ಟಿಯನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದೆಂದು ಸಂಸದರೊಂದಿಗೆ ವಿನಂತಿಸಲಾಯಿತು.
ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಹೊಸ ಸ್ಟೇಬ್ಲಿಂಗ್ ಲೈನ್ (ರೈಲುಗಳು ತಂಗಲು ಹಳಿ) ಕಾಮಗಾರಿ ಹಾಗೂ ಮಂಗಳೂರು ಸೆಂಟ್ರಲ್–ಮಂಗಳೂರು ಜಂಕ್ಷನ್ ನಡುವೆ ಬಾಕಿ ಇರುವ 1.6 ಕಿ. ಮೀ. ಹೊಸ ಜೋಡಿ ಹಳಿಗಳ ನಿರ್ಮಾಣದ ವಿಚಾರವನ್ನು ಸಂಸದರ ಗಮನಕ್ಕೆ ತಂದಾಗ, ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕ್ಯಾ. ಬ್ರಜೇಶ್ ಚೌಟ ಅವರು, ಪ್ರಸ್ತಾವಿತ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ವಿಶ್ವ ದರ್ಜೆ ಮಟ್ಟದ ನಿಲ್ದಾಣವಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.