ಕಾಸರಗೋಡು ಪ್ರಯಾಣಿಕರ ಗಡಿ ದಾಟಿಸಲು ವಿಶೇಷ ಬಸ್‌

By Kannadaprabha News  |  First Published Mar 20, 2020, 10:41 AM IST

ದಿನದಿಂದ ದಿನಕ್ಕೆ ಕೊರೋನಾ ವೈರಸ್‌ ಸೋಂಕು ಹರಡುತ್ತಿರುವುದರಿಂದ ಮಂಗಳೂರು ಅಂತಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್‌ ವಹಿಸಲಾಗದ್ದು, ವಿಮಾನದ ಮೂಲಕ ಆಗಮಿಸುವ ಕಾಸರಗೋಡು ಪ್ರಯಾಣಿಕರನ್ನು ಕೇರಳ ತಲುಪಿಸಲು ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ.


ಮಂಗಳೂರು[ಮಾ.20]: ದಿನದಿಂದ ದಿನಕ್ಕೆ ಕೊರೋನಾ ವೈರಸ್‌ ಸೋಂಕು ಹರಡುತ್ತಿರುವುದರಿಂದ ಮಂಗಳೂರು ಅಂತಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್‌ ವಹಿಸಲಾಗದ್ದು, ವಿಮಾನದ ಮೂಲಕ ಆಗಮಿಸುವ ಕಾಸರಗೋಡು ಪ್ರಯಾಣಿಕರನ್ನು ಕೇರಳ ತಲುಪಿಸಲು ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಸು ಕೇರಳ ಪ್ರಯಾಣಿಕರನ್ನು ದ.ಕ. ಗಡಿ ಭಾಗವಾದ ತಲಪಾಡಿವರೆಗೆ ಕೊಂಡೊಯ್ದು ಬಿಡುತ್ತಿದೆ. ಈ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ತುರ್ತು ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಕಾಸರಗೋಡು ನಿವಾಸಿಯೊಬ್ಬರಲ್ಲಿ ಇತ್ತೀಚೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Tap to resize

Latest Videos

ಅಮೆರಿಕದ ಸಮುದ್ರ ಮಧ್ಯೆ ಹಡಗಲ್ಲಿ 131 ಭಾರತೀಯರ ದಿಗ್ಬಂಧನ

ಮಂಗಳೂರು ಏರ್‌ಪೋರ್ಟ್‌ ಮೂಲಕ ಆಗಮಿಸುವವರಲ್ಲಿ ಶೇ.50-60ರಷ್ಟುಮಂದಿ ಕಾಸರಗೋಡಿನವರು ಇರುವುದರಿಂದ ಅಲ್ಲಿನ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಬಿಟ್ಟು ಬರಲು ವಿಶೇಷ ಬಸ್‌ ವ್ಯವಸ್ಥೆ ಮಾಡಿದ್ದೇವೆ. ಅಲ್ಲಿಂದ ಕಾಸರಗೋಡು ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ಎ,ಬಿ,ಸಿ ವರ್ಗೀಕರಣ:

ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಆಗಮಿಸುವ ಪ್ರಯಾಣಿಕರನ್ನು ಸರ್ಕಾರದ ಸೂಚನೆ ಮೇರೆಗೆ ಎ,ಬಿ,ಸಿ ವರ್ಗೀಕರಣ ಮಾಡಲಾಗುತ್ತಿದೆ. ಬಂದ ಎಲ್ಲರನ್ನೂ ಸ್ಕ್ರೀನಿಂಗ್‌ ನಡೆಸಲಾಗುತ್ತಿದ್ದು, ಅವರಲ್ಲಿ ಸೋಂಕಿನ ಲಕ್ಷಣ ಇದ್ದವರನ್ನು ‘ಎ’ ಕ್ಯಾಟಗರಿ ಎಂದು ನಮೂದಿಸಿ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಸೋಂಕಿನ ಲಕ್ಷಣ ಇಲ್ಲದಿದ್ದರೂ 60 ವರ್ಷ ವಯಸ್ಸು ಮೇಲ್ಪಟ್ಟಹಾಗೂ ಬಿಪಿ, ಡಯಾಬಿಟೀಸ್‌, ಆಸ್ತಮಾ ತೊಂದರೆ ಇರುವವರು ‘ಬಿ’ ಕ್ಯಾಟಗರಿ ಆಗಿದ್ದು, ಅವರನ್ನು ಇಎಸ್‌ಐ ಆಸ್ಪತ್ರೆಗೆ ಕೊಂಡಯ್ದು 14 ದಿನಗಳ ವೈದ್ಯಕೀಯ ನಿಗಾದಲ್ಲಿ ಇರಿಸಲಾಗುವುದು. ಸೋಂಕಿನ ಯಾವುದೇ ಲಕ್ಷಣ ಇಲ್ಲದ 60 ವರ್ಷ ವಯೋಮಾನಕ್ಕಿಂತ ಕೆಳಗಿನವರು ‘ಸಿ’ ವರ್ಗದಲ್ಲಿ ಸೇರುತ್ತಾರೆ, ಅವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಪಡುವಂತೆ ಸೂಚಿಸಲಾಗುವುದು. ಅಲ್ಲದೆ ಎಲ್ಲ ವಿಮಾನ ಪ್ರಯಾಣಿಕರ ಕೈಗೆ ಅಳಿಸಲಾಗದ ಶಾಯಿಯ ಸೀಲು ಹಾಕುವ ಕಾರ್ಯವೂ ಚಾಲನೆಗೊಂಡಿದೆ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

51 ಮಂದಿ ನಿಗಾದಲ್ಲಿ:

ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಕಾಸರಗೋಡು ಪ್ರಯಾಣಿಕನಲ್ಲಿ ಇತ್ತೀಚೆಗೆ ಕೊರೋನಾ ಪಾಸಿಟಿವ್‌ ವರದಿ ಬಂದಿರುವುದರಿಂದ ಆ ವಿಮಾನದ ಮೂಲಕ ಆಗಮಿಸಿದ ಎಲ್ಲ 51 ಮಂದಿಯ ಮೇಲೆ ನಿಗಾ ವಹಿಸಲಾಗಿದೆ. ಎಲ್ಲರನ್ನು ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದ್ದು, ಆರೋಗ್ಯ ಇಲಾಖೆಯ ಮೂಲಕ ಪ್ರತಿಯೊಬ್ಬರನ್ನೂ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಗಡಿ ಭಾಗದಲ್ಲಿ ತಪಾಸಣೆ:

ಕೊಡಗು ಹಾಗೂ ಪಕ್ಕದ ರಾಜ್ಯ ಕೇರಳದಿಂದ ದ.ಕ. ಜಿಲ್ಲೆಗೆ ಸೋಂಕು ಹರಡುವುದನ್ನು ತಪ್ಪಿಸಲು ಚೆಕ್‌ಪೋಸ್ಟ್‌ಗಳಲ್ಲಿ ತಂಡಗಳನ್ನು ನಿಯೋಜಿಸಿ ಸ್ಕ್ರೀನಿಂಗ್‌ ನಡೆಸಲಾಗುತ್ತಿದೆ. ಜಿಲ್ಲೆಗೆ ಬರುವ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್‌ಗೆ ಒಳಪಡಿಸಿಯೇ ಬಿಡಲಾಗುತ್ತಿದೆ. ಗುರುವಾರದಿಂದಲೇ ಇದು ಆರಂಭವಾಗಿದೆ. ಬಸ್‌ ಹಾಗೂ ಖಾಸಗಿ ವಾಹನದಲ್ಲಿ ಬರುವವರನ್ನೂ ತಪಾಸಣೆ ಮಾಡಲಾಗುತ್ತಿದೆ. ತಲಪಾಡಿ ಮಾತ್ರವಲ್ಲದೆ, ಸುಳ್ಯದ ಜಾಲ್ಸೂರು ಮತ್ತು ಕಲ್ಲುಗುಂಡಿಯಲ್ಲೂ ತಪಾಸಣೆ ಕೈಗೊಳ್ಳಲಾಗಿದೆ. ಕೊರೋನಾ ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ಮಂಗಳೂರಿನ ಆಸ್ಪತ್ರೆಗೆ ರವಾಸಲಾಗುವುದು ಎಂದರು.

click me!