ಕರುನಾಡ ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ: ವಿಶ್ವೇಶ್ವರ ಹೆಗಡೆ ಕಾಗೇರಿ

By Govindaraj SFirst Published Dec 26, 2022, 8:06 PM IST
Highlights

ಸಂಕಲ್ಪ ಉತ್ಸವದ ಮೂಲಕ ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತಿತರ ಸಂಗತಿಗಳನ್ನು ಇಡೀ ದೇಶ, ರಾಜ್ಯಕ್ಕೆ ಪರಿಚಯಿಸಿದ ಪ್ರಮೋದ ಹೆಗಡೆ ಈ ನಾಡಿನ ನೈಜ ಸಾಂಸ್ಕೃತಿಕ ರಾಯಭಾರಿ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. 

ಯಲ್ಲಾಪುರ (ಡಿ.26): ಸಂಕಲ್ಪ ಉತ್ಸವದ ಮೂಲಕ ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತಿತರ ಸಂಗತಿಗಳನ್ನು ಇಡೀ ದೇಶ, ರಾಜ್ಯಕ್ಕೆ ಪರಿಚಯಿಸಿದ ಪ್ರಮೋದ ಹೆಗಡೆ ಈ ನಾಡಿನ ನೈಜ ಸಾಂಸ್ಕೃತಿಕ ರಾಯಭಾರಿ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. ಪಟ್ಟಣದ ಎಪಿಎಂಸಿ ಆವಾರದ ರೈತ ಸಭಾಭವನದಲ್ಲಿ ನಿರ್ಮಿಸಿದ್ದ ರಾಮಕೃಷ್ಣ ಹೆಗಡೆ ದೊಡ್ಮನೆ ವೇದಿಕೆಯಲ್ಲಿ ಪ್ರಮೋದ ಹೆಗಡೆ ಅಭಿನಂದನಾ ಸಮಿತಿಯವರು ಭಾನುವಾರ ಹಮ್ಮಿಕೊಂಡಿದ್ದ ಪ್ರಮೋದ ಹೆಗಡೆಯವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಪ್ರಮೋದ ಹೆಗಡೆ ವ್ಯಕ್ತಿತ್ವವೆಂಬುದು ತುಂಬಿದ ಕೊಡ. ಬಂಗಾರಕ್ಕೆ ಬಂಗಾರವೆನ್ನದೇ ಬೇರೇನು ಹೇಳಲು ಸಾಧ್ಯ? ಸಭೆಯಲ್ಲಿ ನೆರೆದಿರುವ ಅಪಾರ ಸಂಖ್ಯೆಯ ಪ್ರಜ್ಞಾವಂತ ಅಭಿಮಾನಿಗಳ ಸಂಖ್ಯೆಯೇ ಅವರ ಶ್ರೇಷ್ಠತ್ವಕ್ಕೆ ಸಾಕ್ಷಿ. ಪಂಚಾಯತ್‌ ರಾಜ್‌ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ ದಿನದಿಂದ ಆ ಹುದ್ದೆಯ ಯಶಸ್ಸಿಗೆ ಪ್ರಾಮಾಣಿಕ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

Ramanagara: ಕ್ಷೇತ್ರಕ್ಕೆ ಉತ್ಸವ ಮೂರ್ತಿಯಂತೆ ಬರುವ ಎಚ್ಡಿಕೆ: ಯೋಗೇಶ್ವರ್‌ ಆರೋಪ

ದ್ವೇಷವಿರದ ಬದುಕು: ಸಮಾರಂಭ ಉದ್ಘಾಟಿಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ರಾಜಕಾರಣದ ನಡುವೆಯೂ, ಸದ್ದುಗದ್ದಲವಿಲ್ಲದೇ ದ್ವೇಷವಿರದ ಬದುಕನ್ನು ಸಾಗಿಸುತ್ತಿರುವ ಪ್ರಮೋದ ಹೆಗಡೆ ಶತ್ರುಗಳನ್ನೂ ಮಿತ್ರರನ್ನಾಗಿ ಕಾಣುವ ವಿಶೇಷ ಗುಣ ಅನುಪಮವಾಗಿದೆ. ನಮ್ಮೆಲ್ಲರ ನಡುವಿನ ಸೌಹಾರ್ದದ ಸಂದರ್ಭಗಳಿಗೆ ಪ್ರಮೋದ ಹೆಗಡೆ ಮತ್ತು ನಮ್ಮ ಮಧ್ಯದ ಗೆಳೆತನ ಉದಾಹರಣೆಯಾಗಿದೆ ಎಂದರು. ಆರ್ಥಿಕವಲ್ಲದಿದ್ದರೂ ಬೌದ್ಧಿಕವಾಗಿ ಅತ್ಯಂತ ಹಿರಿತನ ಗಳಿಸಿದ ಪ್ರಮೋದ ಹೆಗಡೆ ಅವರಿಗೆ ಮಾಡಿದ ಸನ್ಮಾನ ಇಡೀ ಸಮಾಜದ ಗೌರವವನ್ನು ಇಮ್ಮಡಿಗೊಳಿಸಿದೆ ಎಂದರು.

ಪಕ್ಷಾತೀತ ವ್ಯಕ್ತಿ: ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಅನೇಕ ವರ್ಷಗಳಿಂದ ಪ್ರಮೋದ ಹೆಗಡೆ ಸ್ನೇಹಿತ. ಅವರೊಬ್ಬ ಪಕ್ಷಾತೀತ ವ್ಯಕ್ತಿತ್ವ ಹೊಂದಿದವರು. ನಾನು ಮತ್ತು ಎಚ್‌.ಕೆ. ಪಾಟೀಲ್‌ ಈರ್ವರೂ ಹೊಂದಾಣಿಕೆ ರಾಜಕಾರಣದಲ್ಲಿ ಬೆಳೆದಿದ್ದೇವೆ. ಆದರೆ ಇಂದು ಮೌಲ್ಯಯುತ ರಾಜಕಾರಣಕ್ಕೆ ಬೆಲೆ ಇಲ್ಲ. ಪ್ರಮೋದ ಹೆಗಡೆ ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಎಲ್ಲ ಕ್ಷೇತ್ರಗಳಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ ಎಂದರು. ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದ ಗದಗದ ಶಾಸಕ ಎಚ್‌.ಕೆ. ಪಾಟೀಲ್‌ ಮಾತನಾಡಿ, ವೈಯಕ್ತಿಕವಾಗಿ ಎಲ್ಲರನ್ನೂ ಸಮಾನ ಮನೋಭಾವದಿಂದ ಪ್ರೀತಿಸುವ ಗುಣ ಹೊಂದಿದ ಪ್ರಮೋದ ಹೆಗಡೆ ಅವರ ಹಿರಿತನವೇ ಇಂದಿನ ಸಮಾರಂಭಕ್ಕೆ ಸಾಕ್ಷಿಯಾಗಿದೆ. 

ಅಧಿಕಾರ ಪಡೆಯುವ ಜಾಣ್ಮೆಯೊಂದನ್ನು ಹೊರತುಪಡಿಸಿ, ಉಳಿದೆಲ್ಲ ತತ್ವ, ಆದರ್ಶಗಳನ್ನು ಅರಿತಿರುವ ಪ್ರಮೋದರ ಸಂಕಲ್ಪ, ಸಿದ್ಧಿ ಮತ್ತು ಸಾಧನೆಗಳೇ ಅವರನ್ನು ಎತ್ತರಕ್ಕೇರಿಸಲು ಪ್ರಮುಖ ಕಾರಣವಾಗಿವೆ ಎಂದರು. ವೇದಿಕೆಯಲ್ಲಿ ಸಮಿತಿಯಿಂದ ಪ್ರಮೋದ ಹೆಗಡೆ, ಅವರ ಧರ್ಮಪತ್ನಿ ಪದ್ಮಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ವಿದ್ಯಾ ವಾಚಸ್ಪತಿ ಉಮಾಕಾಂತ ಭಟ್ಟಕೆರೆಕೈ ಅಭಿನಂದನಾ ನುಡಿಗಳನ್ನಾಡಿ, ಪ್ರಪಂಚವನ್ನು ಓರ್ವ ಯಾತ್ರಿಯಾಗಿ ವೀಕ್ಷಿಸದಿದ್ದರೂ ವಿಶ್ವವನ್ನೇ ಮನೆಯಂಗಳಕ್ಕೆ ತಂದಿರುವ ಮಹತ್ವಾಕಾಂಕ್ಷೆ ಹೆಗಡೆ ಅವರದ್ದು. 

ಯಲ್ಲಾಪುರದ ಚಿಕ್ಕ ವಿಶ್ವದಲ್ಲಿಯೇ ಸಂಕಲ್ಪ ಸಿದ್ದಿ ಸಾಧಿಸಿರುವುದು ಪ್ರಮೋದರ ಹಿರಿಮೆ ಗರಿಮೆಗೆ ಸಾಕ್ಷಿಯಾಗಿದೆ. ಯಾವುದೇ ಆಸ್ತಿ ಮಾಡದಿದ್ದರೂ ಅವರು ಜಿಲ್ಲೆಯ ಆಸ್ತಿಯಾಗಿದ್ದಾರೆ ಎಂದರು. ಅಭಿನಂದನಾ ಗ್ರಂಥದ ಕುರಿತಾಗಿ ಸಂಪಾದಕ ಕಾಶ್ಯಪ ಪರ್ಣಕುಟಿ ಮಾತನಾಡಿದರು. ಇದೇ ವೇದಿಕೆಯಲ್ಲಿ ಕಾರ್ಯಕ್ರಮದ ಪ್ರಯುಕ್ತ ಹೊರತಂದ ‘ಕನ್ನಡಪ್ರಭ ವಿಶೇಷ ಪುರವಣಿ’ಯನ್ನು ಅನಾವರಣಗೊಳಿಸಲಾಯಿತು. ಅಭಿನಂದನೆ ಸ್ವೀಕರಿಸಿದ ಪ್ರಮೋದ ಹೆಗಡೆಯವರ ಪರವಾಗಿ ಸಂಕಲ್ಪ ಸಂಚಾಲಕ ಪ್ರಸಾದ ಹೆಗಡೆ ಅವರ ಸಿದ್ದ ಭಾಷಣವನ್ನು ವಾಚಿಸಿದರು. ವಿಧಾನಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ, ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿದರು.

ಸರ್ಕಾರ ಅಭಿವೃದ್ಧಿ ಪರವಾಗಿದ್ದರೆ ಹೆಚ್ಚು ಅನುದಾನ: ವಿಧಾನಸಭಾಧ್ಯಕ್ಷ ಕಾಗೇರಿ

ಗಣಪತಿ ಭಟ್ಟಕೋಲಿಬೇಣ, ಸಂಗಡಿಗರ ವೇದಘೋಷ ಮತ್ತು ಮುಕ್ತಾ ಶಂಕರ ವಿರಚಿತ ಸಂಕಲ್ಪ ಗೀತೆಯ ವಾಣಿ ಹೆಗಡೆಯವರ ಗಾಯನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಎಸ್‌.ಪಿ. ಶೆಟ್ಟಿಸ್ವಾಗತಿಸಿದರು. ಸಮಿತಿ ಗೌರವಾಧ್ಯಕ್ಷ ವಿಜಯ ಹೆಗಡೆ ದೊಡ್ಮನೆ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಡಿ. ಶಂಕರ ಭಟ್ಟವಂದಿಸಿದರು. ನಾಗರಾಜ ಹೆಗಡೆ ಕವಲಕ್ಕಿ ನಿರ್ವಹಿಸಿದರು. ಅಭಿನಂದನಾ ಸಮಿತಿ ಕಾರ್ಯದರ್ಶಿ ಪಿ.ಜಿ. ಹೆಗಡೆ ಕಳಚೆ ಮತ್ತಿತರರು ಇದ್ದರು.

click me!