ನಗರದಲ್ಲಿ ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ 25 ಲಕ್ಷ ರು. ದೇಣಿಗೆ ನೀಡುತ್ತೇನೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ಹೊಸಕೋಟೆ (ಡಿ.26): ನಗರದಲ್ಲಿ ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ 25 ಲಕ್ಷ ರು. ದೇಣಿಗೆ ನೀಡುತ್ತೇನೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ತಾಲೂಕು ಗಾಣಿಗರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿರುವ ಹಲವಾರು ಹಿಂದುಳಿದ ವರ್ಗಗಳ ಸಮುದಾಯಗಳ ಪೈಕಿ ಗಾಣಿಗ ಸಮುದಾಯವೂ ಒಂದಾಗಿದೆ. ಸಮಾಜದಲ್ಲಿ ಗಾಣಿಗ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಮಾಜದಲ್ಲಿ ಸಾಕಷ್ಟುಪ್ರಾತಿನಿಧ್ಯ ದಕ್ಕುತ್ತಿಲ್ಲ. ಆದ್ದರಿಂದ ಗಾಣಿಗ ಸಮಾಜದವರು ಒಗ್ಗಟ್ಟಾಗಿ ಸಂಘಟಿತರಾಗುವ ಕೆಲಸ ಆಗಬೇಕು.
ತಾಲೂಕಿನಲ್ಲಿ ಸಮುದಾಯವನ್ನು ಸಂಘಟಿಸಿ ಭವನ ನಿರ್ಮಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಆದ್ದರಿಂದ ನನ್ನ ವೈಯಕ್ತಿಕ ದೇಣಿಗೆ ಮತ್ತು ಲಿಖಿತ ಮನವಿ ಸಲ್ಲಿಸಿದರೆ ಸರ್ಕಾರದಿಂದಲೂ ಅನುದಾನ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ತೈಲಗೆರೆ ಶ್ರೀ ತೈಲೇಶ್ವರ ಗಾಣಿಗ ಮಹಾ ಸಂಸ್ಥಾನ ಮಠದ ಪೀಠಾಪತಿ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಮಾತನಾಡಿ, ಗಾಣಿಗ ಸಮುದಾಯದ ಅಭಿವೃದ್ಧಿಯಾಗಬೇಕಾದರೆ ಹಾಗೂ ಸರ್ಕಾರದಿಂದ ಅಗತ್ಯ ಸವಲತ್ತುಗಳನ್ನು ಪಡೆಯಬೇಕಾದರೆ ಸಮುದಾಯ ಸಂಘಟಿತರಾಗಿ, ಒಗ್ಗಟ್ಟಾಗಿ, ಪಕ್ಷಾತೀತವಾಗಿ ಹೋರಾಟ ಮಾಡಬೇಕು.
ನಾವು ಮಲಗಿಕೊಂಡಿದ್ದರೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಸಚಿವ ಎಂಟಿಬಿ ನಾಗರಾಜ್
ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ನಾನು ರಾಜಕಾರಣ ಬಿಟ್ಟು ಖಾವಿ ತೊಟ್ಟಿದ್ದೇನೆ. ಸಮುದಾಯವನ್ನು ಮುಂಚೂಣಿಗೆ ತರುವ ಹೋರಾಟಕ್ಕೆ ಕೈ ಜೋಡಿಸುತ್ತೇನೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ನಮ್ಮ ಸಮುದಾಯವನ್ನು ಗುರುತಿಸಿ ನೆಲಮಂಗಲ ಬಳಿ ಸಮುದಾಯಕ್ಕೆ ನಾಲ್ಕು ಎಕರೆ ಜಮೀನು ನೀಡಿ, ಮಠ ಸ್ಥಾಪನೆಗೆ ಶ್ರಮಿಸಿದರೆಂದು ಸ್ಮರಿಸಿದರು. ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಗಾಣಿಗ ಸಮುದಾಯ ಅಭಿವೃದ್ಧಿಗೆ ಸಮುದಾಯದ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಅಭಿವೃದ್ಧಿ ಕಾರ‍್ಯಕಗಳ ಕುರಿತು ಚರ್ಚಿಸಬೇಕು.
ಆರ್ಥಿಕ ಸದೃಢತೆಗೆ ಸ್ವದೇಶಿ ಉತ್ಪನ್ನ ಬಳಕೆ ಹೆಚ್ಚಾಗಬೇಕು: ಸಚಿವ ಎಂಟಿಬಿ ನಾಗರಾಜ್
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ವಿತರಿಸುವ ಕೆಲಸ ಮಾಡಬೇಕು. ಶಿಕ್ಷಣ ಸಂಸ್ಥೆ, ವಸತಿ ನಿಲಯ ಸ್ಥಾಪನೆಯಿಂದ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಈ ವೇಳೆ ನಗರಸಭೆ ಸದಸ್ಯರಾದ ರಾಮಾಂಜಿನಿ, ಸಿಪಿಎನ್ ನವೀನ್, ಗಾಣಿಗ ಸಂಘದ ತಾಲೂಕು ಅಧ್ಯಕ್ಷ ಎಚ್.ವಿ.ರಾಘವೇಂದ್ರ, ಅನುಗೊಂಡಹಳ್ಳಿ ಹೋಬಳಿ ಅಧ್ಯಕ್ಷ ಪಾಪಯ್ಯ, ನಂದಗುಡಿ ಹೋಬಳಿ ಅಧ್ಯಕ್ಷ ಬಿ.ಮಂಜುನಾಥ್, ಸೂಲಿಬೆಲೆ ಹೋಬಳಿ ಅಧ್ಯಕ್ಷ ಎಸ್.ಎನ್.ಸೋಮಶೇಖರ್, ಜಡಿಗೇನಹಳ್ಳಿ ಹೋಬಳಿ ಅಧ್ಯಕ್ಷ ವೆಂಕಟೇಶ್ ಇತರರಿದ್ದರು.