
ಮಂಗಳೂರು: ಯಶವಂತಪುರ–ಕಾರವಾರ (16515) ಎಕ್ಸ್ಪ್ರೆಸ್ ರೈಲು ಗುರುವಾರ ಮೊದಲ ಬಾರಿಗೆ ವಿದ್ಯುತ್ ಎಂಜಿನ್ನೊಂದಿಗೆ ಸಂಚರಿಸಿದೆ. ರೈಲಿಗೆ ಯಶವಂತಪುರದಿಂದ ಸುಬ್ರಹ್ಮಣ್ಯ ರೋಡ್ (ಎಸ್ಬಿಎಚ್ಆರ್) ನಿಲ್ದಾಣದವರೆಗೆ ವಿದ್ಯುತ್ ಎಂಜಿನ್ ಅಳವಡಿಸಲಾಗಿತ್ತು. ಕೆಜೆಎಂ ಮೂಲದ ಡಬ್ಲ್ಯುಎಜಿ-9 ಎಚ್ಸಿ ಮಾದರಿಯ 34110 ಮತ್ತು 44258 ಸಂಖ್ಯೆಯ ಎರಡು ವಿದ್ಯುತ್ ಎಂಜಿನ್ಗಳನ್ನು ಜೋಡಿಸಲಾಗಿತ್ತು. ಇದರೊಂದಿಗೆ ಡಬ್ಲ್ಯುಎಪಿ-7 ಮಾದರಿಯ 39418 ಸಂಖ್ಯೆಯ ಎಂಜಿನ್ ನ್ನು ಎಸ್ಬಿಎಚ್ಆರ್ ನಿಲ್ದಾಣದವರೆಗೆ ಕಾರ್ಯನಿರ್ವಹಿಸದ ಸ್ಥಿತಿಯಲ್ಲಿ (ಡೆಡ್ ಎಂಜಿನ್) ಜೋಡಿಸಲಾಗಿತ್ತು.
ಯಶವಂತಪುರದಿಂದ ಸುಬ್ರಹ್ಮಣ್ಯ ರೋಡ್ವರೆಗೆ ವಿದ್ಯುತ್ ಎಂಜಿನ್ ಬಳಕೆಯೊಂದಿಗೆ ರೈಲಿನ ಮೊದಲ ವಿದ್ಯುತ್ ರೈಲು ಸಂಚಾರ ನಡೆದಿದ್ದು, ರೈಲ್ವೆ ಕಾರ್ಯಾಚರಣೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಘಾಟ್ ವಿಭಾಗದಲ್ಲಿ ಇನ್ನು ಮುಂದೆ ವಿದ್ಯುತ್ ಎಂಜಿನ್ ಬಳಕೆಯ ಕಾರ್ಯವೈಖರಿ ಹೇಗಿರಲಿದೆ ಎಂಬುದು ಗಮನಾರ್ಹವಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೈಲ್ವೆಯು ಯಶವಂತಪುರ-ಮಡಗಾಂವ್ ಹಾಗೂ ಮಡಗಾಂವ್-ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಎರಡೂ ಮಾರ್ಗಗಳಲ್ಲಿ ತಲಾ ಒಂದು ಟ್ರಿಪ್ ಸಂಚರಿಸಲಿದ್ದು, ಕರಾವಳಿ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ರೈಲು ವಯಾ ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದೆ. ರೈಲು ಸಂಖ್ಯೆ 06591 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್ಪ್ರೆಸ್ ನವೆಂಬರ್ 6 ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು, ನವೆಂಬರ್ 7 ರಂದು ಸಂಜೆ 6.10ಕ್ಕೆ ಮಡಗಾಂವ್ ತಲುಪಲಿದೆ.
ಹಿಂತಿರುಗುವ ಪ್ರಯಾಣದಲ್ಲಿ ರೈಲು ಸಂಖ್ಯೆ 06592 ಮಡಗಾಂವ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್ಪ್ರೆಸ್ ನವೆಂಬರ್ 8 ರಂದು ಬೆಳಗ್ಗೆ 11 ಗಂಟೆಗೆ ಮಡಗಾಂವ್ನಿಂದ ಹೊರಟು, ಮರುದಿನ ಬೆಳಗ್ಗೆ 5.20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಈ ರೈಲುಗಳು ಎರಡೂ ಮಾರ್ಗಗಳಲ್ಲಿ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ-ಪುತ್ತೂರು, ಬಂಟ್ವಾಳ, ಮಂಗಳೂರು ಜಂಕ್ಷನ್, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ಹಾಗೂ ಕಾಣಕೋಣ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.
ಆದರೆ ಮಡಗಾಂವ್ನಿಂದ ಬೆಂಗಳೂರಿಗೆ ಮರಳುವ ರೈಲು ಸಂಖ್ಯೆ 06592 ಯಶವಂತಪುರದಲ್ಲಿ ನಿಲುಗಡೆ ಹೊಂದಿರುವುದಿಲ್ಲ. ಬದಲಾಗಿ ಎಸ್ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ನಿಲುಗಡೆ ನೀಡಲಾಗಿದೆ.
ಒಟ್ಟು 19 ಬೋಗಿಗಳನ್ನು ಹೊಂದಿರುವ ಈ ವಿಶೇಷ ರೈಲಿನಲ್ಲಿ ಎಸಿ, ಸ್ಲೀಪರ್ ಹಾಗೂ ಸಾಮಾನ್ಯ ದರ್ಜೆಯ ಬೋಗಿಗಳಿರಲಿವೆ. ಇದರೊಂದಿಗೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಮತ್ತು ದಿವ್ಯಾಂಗಚೇತನ ಪ್ರಯಾಣಿಕರಿಗಾಗಿ ಮೀಸಲಾದ ಬೋಗಿಯೂ ಇರಲಿದೆ.
ದೀಪಾವಳಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಓಡಾಟ ನಡೆಸುವಂತೆ ಕೋರಿ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿ ಮಂಗಳೂರು ಜಂಕ್ಷನ್ ಮೂಲಕ ವಿಶೇಷ ರೈಲು ಸಂಚಾರ ಏರ್ಪಡಿಸಲಾಗಿದೆ.