ನೈಋತ್ಯ ರೈಲ್ವೆಯ ಇತಿಹಾಸದಲ್ಲೇ ಅಚ್ಚರಿಯ ದಾಖಲೆ! ಒಂದೇ ತಿಂಗಳಲ್ಲೇ ₹928 ಕೋಟಿ ಆದಾಯ, 5.5 ಮಿಲಿಯನ್ ಟನ್ ಸರಕು ಸಾಗಣೆ!

Gowthami K   | Kannada Prabha
Published : Nov 04, 2026, 10:28 AM IST
Railway Station

ಸಾರಾಂಶ

ನೈಋತ್ಯ ರೈಲ್ವೆಯು ಅಕ್ಟೋಬರ್‌ನಲ್ಲಿ 5.5 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇದರಿಂದ ಒಂದೇ ತಿಂಗಳಲ್ಲಿ ಒಟ್ಟು ₹928 ಕೋಟಿ ಆದಾಯ ಗಳಿಸಿದ್ದು, ಕಲ್ಲಿದ್ದಲು ಮತ್ತು ಉಕ್ಕಿನ ಸಾಗಣೆಯಲ್ಲಿ ಗಣನೀಯ ಪ್ರಗತಿ ಕಂಡಿದೆ.

ಹುಬ್ಬಳ್ಳಿ: ನೈಋತ್ಯ ರೈಲ್ವೆಯು 2026ರ ಅಕ್ಟೋಬರ್‌ನಲ್ಲಿ ಈ ವರೆಗಿನ ಸಾರ್ವಕಾಲಿಕ ದಾಖಲೆಯ 5.5 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಇದರೊಂದಿಗೆ ಒಂದೇ ತಿಂಗಳಲ್ಲಿ ಸರಕು ಸಾಗಣೆಯಿಂದ ₹524 ಕೋಟಿ ಹಾಗೂ ಪ್ರಯಾಣಿಕರ ಸಂಚಾರದಿಂದ ₹358 aಕೋಟಿ ಸೇರಿದಂತೆ ಒಟ್ಟು ₹928 ಕೋಟಿ ಆದಾಯ ಗಳಿಸಿದೆ.

ಶೇ. 31ರಷ್ಟು ಬೆಳವಣಿಗೆ

ಕಳೆದ ವರ್ಷದ ಅಕ್ಟೋಬರ್‌ನಲ್ಲಿ 4.2 ಮಿಲಿಯನ್ ಟನ್ ಸರಕು ಸಾಗಣೆ ಮಾಡಲಾಗಿತ್ತು. ಈ ಬಾರಿ ಶೇ. 31ರಷ್ಟು ಬೆಳವಣಿಗೆ ದಾಖಲಾಗಿದೆ. ರೈಲ್ವೆ ವಲಯ ಸ್ಥಾಪನೆಯಾದ ಬಳಿಕ ಒಂದೇ ತಿಂಗಳಲ್ಲಿ ದಾಖಲಾದ ಅತ್ಯಧಿಕ ಸರಕು ಸಾಗಣೆ ಇದಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಮುಖ ಸರಕುಗಳ ಸಾಗಣೆಯಲ್ಲಿಯೂ ಗಣನೀಯ ಪ್ರಗತಿ ಕಂಡುಬಂದಿದೆ. ಕಲ್ಲಿದ್ದಲು ಸಾಗಣೆ ಶೇ. 71ರಷ್ಟು ಹೆಚ್ಚಳದೊಂದಿಗೆ 1.37 ಮಿಲಿಯನ್ ಟನ್‌ಗೆ ತಲುಪಿದ್ದು, ಸಾರ್ವಕಾಲಿಕ ಮಾಸಿಕ ದಾಖಲೆ ನಿರ್ಮಿಸಿದೆ. ಕಬ್ಬಿಣ ಮತ್ತು ಸಿದ್ಧ ಉಕ್ಕಿನ ಸಾಗಣೆ ಶೇ. 23.9ರಷ್ಟು ಹೆಚ್ಚಳವಾಗಿ 1.10 ಮಿಲಿಯನ್ ಟನ್, ಖನಿಜ ತೈಲ ಶೇ. 40.4ರಷ್ಟು ಹೆಚ್ಚಳವಾಗಿ 0.23 ಮಿಲಿಯನ್ ಟನ್, ರಸಗೊಬ್ಬರ ಶೇ. 26.9ರಷ್ಟು ಹೆಚ್ಚಳವಾಗಿ 0.15 ಮಿಲಿಯನ್ ಟನ್ ಹಾಗೂ ಕಂಟೇನರ್ ಸಾಗಣೆ ಶೇ. 43.1ರಷ್ಟು ಹೆಚ್ಚಳವಾಗಿ 0.10 ಮಿಲಿಯನ್ ಟನ್‌ಗೆ ತಲುಪಿದೆ.

ನೈಋತ್ಯ ರೈಲ್ವೆಯ ಗರಿಷ್ಠ ಸಾಧನೆ

ಏಪ್ರಿಲ್‌ನಿಂದ ಅಕ್ಟೋಬರ್‌ ವರೆಗಿನ ಏಳು ತಿಂಗಳಲ್ಲಿ ಒಟ್ಟು 31.56 ಮಿಲಿಯನ್ ಟನ್ ಸರಕು ಸಾಗಿಸಲಾಗಿದೆ. ಹಿಂದಿನ ವರ್ಷದ ಇದೇ ಅವಧಿಯ 28.82 ಮಿಲಿಯನ್ ಟನ್‌ಗೆ ಹೋಲಿಸಿದರೆ ಶೇ. 9.5ರಷ್ಟು ಬೆಳವಣಿಗೆಯಾಗಿದೆ. ಇದು ಈ ಅವಧಿಯಲ್ಲಿಯೂ ನೈಋತ್ಯ ರೈಲ್ವೆಯ ಗರಿಷ್ಠ ಸಾಧನೆಯಾಗಿದೆ.

ಆದಾಯ ಗಳಿಕೆಯಲ್ಲಿಯೂ ರೈಲ್ವೆ ಉತ್ತಮ ಪ್ರಗತಿ ದಾಖಲಿಸಿದೆ. ಅಕ್ಟೋಬರ್‌ನಲ್ಲಿ ₹ 928 ಕೋಟಿ ಆದಾಯ ಗಳಿಸಿದ್ದು, ಕಳೆದ ವರ್ಷದ ಇದೇ ತಿಂಗಳಿನ ₹ 773 ಕೋಟಿಗೆ ಹೋಲಿಸಿದರೆ ಶೇ. 20ರಷ್ಟು ಹೆಚ್ಚಳವಾಗಿದೆ. ನಿಗದಿತ ₹ 895 ಕೋಟಿ ಗುರಿಯನ್ನೂ ಶೇ. 3.7ರಷ್ಟು ಮೀರಿದೆ. ಪಾರ್ಸೆಲ್ ಆದಾಯ ಶೇ. 21ರಷ್ಟು ಹೆಚ್ಚಳದೊಂದಿಗೆ ₹17 ಕೋಟಿಗೆ ತಲುಪಿದೆ.

ಇನ್ನು ಏಪ್ರಿಲ್‌ನಿಂದ ಅಕ್ಟೋಬರ್‌ ವರೆಗೆ ಒಟ್ಟು ಆದಾಯ ₹5,620 ಕೋಟಿಗೆ ಏರಿಕೆಯಾಗಿದೆ. ಹಿಂದಿನ ವರ್ಷದ ₹ 5,282 ಕೋಟಿಗೆ ಹೋಲಿಸಿದರೆ ಶೇ. 6.4ರಷ್ಟು ಪ್ರಗತಿ ಸಾಧಿಸಿದೆ. ಈ ಅವಧಿಯಲ್ಲಿ 10.9 ಕೋಟಿ ಪ್ರಯಾಣಿಕರು ರೈಲಿನಲ್ಲಿ ಸಂಚರಿಸಿದ್ದು, ಪ್ರಯಾಣಿಕರ ಆದಾಯ ₹2,263 ಕೋಟಿಯಾಗಿದೆ.

ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ಈ ಸಾಧನೆಗೆ ಕಾರಣರಾದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

PREV
Read more Articles on
click me!

Recommended Stories

Hassan: ಹಾಸನಾಂಬೆ ದರ್ಶನಕ್ಕೆ 5 ದಿನವಷ್ಟೇ ಬಾಕಿ, ಟಿಕೆಟ್-ಲಾಡು ಮಾರಾಟದಿಂದ ಕೋಟಿ ಕೋಟಿ ಆದಾಯ
ಮಗು ಖಾಸಗಿ ಆಸ್ಪತ್ರೆಗೆ, ತಾಯಿ ಸರ್ಕಾರಿ ಆಸ್ಪತ್ರೆಲಿ..! 14 ತಿಂಗಳಿಂದ ಇಲ್ಲಿ ವೈದ್ಯರೇ ಇಲ್ಲ!