ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಶೀಘ್ರದಲ್ಲೇ ಸರ್ಕಾರಿ ಗೋಶಾಲೆ ನಿರ್ಮಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಘೋಷಿಸಿದರು. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಚರ್ಮಗಂಟು ರೋಗಪೀಡಿತ ಜಾನುವಾರುಗಳ ಪರಿಶೀಲನೆ ನಡೆಸಿದರು
ಬೆಳಗಾವಿ (ಡಿ.28) : ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಶೀಘ್ರದಲ್ಲೇ ಸರ್ಕಾರಿ ಗೋಶಾಲೆ ನಿರ್ಮಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಘೋಷಿಸಿದರು. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಚರ್ಮಗಂಟು ರೋಗಪೀಡಿತ ಜಾನುವಾರುಗಳ ಪರಿಶೀಲನೆ ನಡೆಸಿ, ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಗೋಶಾಲೆ ನಿರ್ಮಿಸುವಂತೆ ರೈತರು ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ಈ ಘೋಷಣೆ ಮಾಡಿದರು.
ಈ ಭಾಗದ ರೈತರು ದೇವರಿಗೆ ಹರಕೆ ಹೊತ್ತು ತಂದುಬಿಡುವ ಜಾನುವಾರುಗಳ ರಕ್ಷಣೆ, ಪಾಲನೆ ಮತ್ತು ಪೋಷಣೆ ಮಾಡುವುದು ಹಾಗೂ ಯಲ್ಲಮ್ಮನ ಗುಡ್ಡದಲ್ಲಿ ದನಗಳ ಜಾತ್ರೆ ನಡೆಯುವುದನ್ನು ಗಮನದಲ್ಲಿಟ್ಟುಕೊಂಡು ಸವದತ್ತಿಯಲ್ಲಿ ಸರ್ಕಾರದಿಂದಲೇ ಗೋಶಾಲೆ ನಿರ್ಮಿಸಲಾಗುವುದು ಎಂದರು.
ಗೋ ರಕ್ಷಣೆಗಾಗಿ ಗೋಶಾಲೆ ಸ್ಥಾಪನೆ: ಸಚಿವ ಪ್ರಭು ಚವ್ಹಾಣ್
ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಜಿಲ್ಲಾಡಳಿತದೊಂದಿಗೆ ಈ ಬಗ್ಗೆ ಸಮನ್ವಯ ಸಾಧಿಸಿ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಪಶುಸಂಗೋಪನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ರಾಜು ಕುರ್ಲೆ ಅವರಿಗೆ ಸೂಚನೆ ನೀಡಿದರು.
ಹತೋಟಿಯಲ್ಲಿದೆ ಚರ್ಮಗಂಟು: ಬೆಳಗಾವಿ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಹತೋಟಿಯಲ್ಲಿದೆ. ರಾಜಸ್ಥಾನ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ರಾಜ್ಯಗಳಲ್ಲಿ ಚರ್ಮಗಂಟು ರೋಗ ಹೆಚ್ಚಾಗಿದೆ. ನಮ್ಮಲ್ಲಿ ರೋಗ ಕಡಿಮೆ ಆಗುತ್ತಿದೆ. ಸರ್ಕಾರ ಸದಾ ನಿಮ್ಮೊಂದಿಗಿದೆ. ಈ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರು ವಿಶ್ವಾಸ ತುಂಬಿದರು.
ಚರ್ಮಗಂಟು ರೋಗದಿಂದ ಸಾವಿಗೀಡಾದ ಜಾನುವಾರುಗಳ ಮಾಲೀಕರ ನಷ್ಟಭರಿಸಲು ಕ್ರಮವಹಿಸಲಾಗಿದೆ. ಚರ್ಮಗಂಟು ರೋಗ ಹತೋಟಿಗೆ ತರಲಾಗುತ್ತಿದೆ. ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಜಾನುವಾರುಗಳ ಮಾಲೀಕರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರಧನ ವರ್ಗಾವಣೆ ಮಾಡಲಾಗುತ್ತಿದೆ. ಜಾನುವಾರುಗಳ ಚಿಕಿತ್ಸೆಗೂ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 13 ಲಕ್ಷ ರಾಸುಗಳಿಗೆ ಲಸಿಕೆ ನೀಡಲಾಗಿದೆ. ಒಂದು ಲಕ್ಷ ಡೋಸ್ ಲಸಿಕೆ ಸಂಗ್ರಹಣೆಯಲ್ಲಿದೆ. ರೈತರಲ್ಲಿ ಈ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಲಾಗುತ್ತಿದೆ. ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡುಬಂದ ತಕ್ಷಣ ಗೋಪ್ರೇಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಆಸಕ್ತಿ ವಹಿಸಿ ತಕ್ಷಣವೇ ಪರಿಹಾರಧನ ವಿತರಿಸಿದ್ದಾರೆ ಎಂದು ಹೇಳಿದರು.
ಪಶು ವೈದ್ಯರಿಗೆ ಎಚ್ಚರಿಕೆ: ಇದೇ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯಿಂದ ಕೈಗೊಂಡ ಔಷಧೋಪಚಾರ, ಚಿಕಿತ್ಸೆ ಮತ್ತು ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದ ಸಚಿವರು, ರೈತರಿಂದ ಜಾನುವಾರುಗಳ ಆರೋಗ್ಯ ಸಮಸ್ಯೆ ಕುರಿತು ಕರೆಬಂದ ತಕ್ಷಣ ಕೂಡಲೇ ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿ ಪಶು ಸಂಜೀವಿನಿ ಆಂಬ್ಯುಲೆನ್ಸ್ ಮೂಲಕ ತೆರಳಿ ತುರ್ತುಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ಪಶು ವೈದ್ಯಾಧಿಕಾರಿಗಳ ಮೊಬೈಲ್ ಸ್ವಿಚ್‌್ಡಆಫ್ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ರೈತರಿಂದ ದೂರು ಬರದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದವರನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಖಾಸಗಿ ಗೋ ಶಾಲೆಗಳಿಗೆ ಆರ್ಥಿಕ ನೆರವು: ಪ್ರಭು ಚೌವ್ಹಾಣ್
ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾದರೆ ರೈತರು ಆತಂಕಕ್ಕೊಳಗಾಗದೇ ಸಹಾಯವಾಣಿ 1962ಗೆ ಕರೆ ಮಾಡಬೇಕು. ಆಗ ಪಶುವೈದ್ಯಕೀಯ ಸಿಬ್ಬಂದಿ ಪಶು ಸಂಜೀವಿನಿ ಆಂಬ್ಯುಲೆ®್ಸ…ನೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಾರೆ. ರೈತರು ಜಾನುವಾರುಗಳ ರಕ್ಷಣೆಗಾಗಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ರಾಜು ಕುರ್ಲೆ, ಸವದತ್ತಿ ಸಹಾಯಕ ನಿರ್ದೇಶಕ ಡಾ.ಅನೀಲ… ಮರಿಲಿಂಗಣ್ಣ, ಯರಗಟ್ಟಿತಾಲೂಕು ಸಹಾಯಕ ನಿರ್ದೇಶಕ ಡಾ.ಎಂ.ವಿ.ಪಾಟೀಲ ಸ್ಥಳೀಯರಾದ ವಿರೂಪಾಕ್ಷಪ್ಪ ಮಾಮನಿ ಸೇರಿ ಹಲವರಿದ್ದರು. ಸಚಿವರು ಸವದತ್ತಿಯ ರೈತ ರಮೇಶ್ ತುಪ್ಪದ್ ಅವರ ಜಾನುವಾರುಗಳನ್ನು ಪರಿಶೀಲಿಸಿ, ಅವರ ನಿವಾಸಕ್ಕೆ ಭೇಟಿ ನೀಡಿದರು.