ಬೆಂಗಳೂರು (ಜೂ.09): ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಅನ್‌ಲಾಕ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಿದೆ. ಮುಖ್ಯಮಂತ್ರಿ ಅವರು ಆದಷ್ಟು ಬೇಗ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನ ದೇವಯ್ಯ ಪಾರ್ಕಲ್ಲಿ ಬಿಜೆಪಿ ಮುಖಂಡ ನಾಗೇಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಜ್ಯ ಅನ್‌ಲಾಕ್ ಬಗ್ಗೆ ಮಾತನಾಡಿದರು.
undefined
ಅನ್‌ಲಾಕ್‌ಗೆ ಸಿಂಗಾಪುರ್ ಮಾದರಿ ಅನುಸರಿಸಲು ತಜ್ಞರ ಸಲಹೆ .
ಕೆಲ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಕಡೆ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಸಂಪರ್ಕ ಕೊಂಡಿ ಕಟ್ ಆಗಿರುವ ಕಾರಣ ವೈರಸ್ ಭಾರೀ ಪ್ರಮಾಣದಲ್ಲಿ ಹತೋಟಿಗೆ ಬಂದಿದೆ. ಹೀಗಾಗಿ ಯಾವ ಕ್ಷೇತ್ರಗಳಲ್ಲಿ ಅನ್‌ಲಾಕ್ ಮಾಡಬೇಕು? ಯಾವ ಕ್ಷೇತ್ರದಲ್ಲಿ ಮಾಡಬಾರದು? ಎಂಬ ಬಗ್ಗೆ ಈಗಾಗಲೇ ಸಿಎಂ ತಜ್ಞರು, ಅಧಿಕಾರಿಗಳು ಹಾಗೂ ಸಚಿವರಿಂದ ಸಲಹೆ ಪಡೆಯುತ್ತಿದ್ದಾರೆ ಎಂದು ಡಿಸಿಎಂ ತಿಳಿಸಿದರು.
ಉಳಿದಂತೆ, ಸೋಂಕು ಕಡಿಮೆಯಾದರೂ ಜನರು ಎಚ್ಚರ ತಪ್ಪಬಾರದು. ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಈಗಾಗಲೇ 18-44 ವಯಸ್ಸಿನ ಮುಂಚೂಣೀ ಕಾರ್ಯಕರ್ತರಿಗೆ ಯಶಸ್ವಿಯಾಗಿ ಲಸಿಕೆ ಹಾಕಲಾಗುತ್ತಿದೆ. ಅದೇ ರೀತಿ 45 ವರ್ಷಕ್ಕೂ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೇ ಬಂದು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಡಿಸಿಎಂ ಮನವಿ ಮಾಡಿದರು.
ಪೌರ ಕಾರ್ಮಿಕರು ಮಾತ್ರವಲ್ಲದೆ, ಬಡವರು, ಕಾರ್ಮಿಕರು, ಆರ್ಥಿಕ ದುರ್ಬಲರಿಗೆ ಫುಡ್ ಕಿಟ್ ವಿತರಣೆ ಮಾಡಿದರು. ನಾಗೇಶ್ ಸೇರಿದಂತೆ ಪಕ್ಷದ ವಿವಿಧ ಮುಖಂಡರು ಕಾರ್ಯಕರ್ತರು ಹಾಜರಿದ್ದರು.