ಕೊಟ್ಟೂರಲ್ಲಿ 'ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆಗೆ ಗ್ರೀನ್‌ ಸಿಗ್ನಲ್‌..!

By Kannadaprabha News  |  First Published Jun 9, 2021, 3:38 PM IST

* ಡಿಎಂಎಫ್‌ ಅನುದಾನದಲ್ಲಿ 20 ಕೋಟಿ ಮೀಸಲು
* ಕೊಟ್ಟೂರಿನ ಜನರ ದಶಕಗಳ ಬೇಡಿಕೆಗೆ ಅಸ್ತು
* ತಾಲೂಕು ಸೇರಿದಂತೆ ಸುತ್ತಮುತ್ತಲಿನ ಜನತೆಗೆ ಉತ್ತಮ ಆರೋಗ್ಯ ಸೇವೆ ದೊರಕಲಿದೆ 
 


ಜಿ. ಸೋಮಶೇಖರ

ಕೊಟ್ಟೂರು(ಜೂ.09): ಕೊಟ್ಟೂರಿನಲ್ಲಿ ‘ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆ ನಿರ್ಮಿಸಬೇಕು ಎಂಬ ಸಾರ್ವಜನಿಕರ ದಶಕಗಳ ಬೇಡಿಕೆಗೆ ‘ಹಸಿರು ನಿಶಾನೆ’ ದೊರೆತ್ತಿದ್ದು ಆರೋಗ್ಯ ಸೇವೆಯಿಂದ ವಂಚಿತರಾಗಿದ್ದ ಜನರಲ್ಲಿ ಹೊಸ ಆಶಾಭಾವನೆ ಮೂಡಿದೆ. ಶಾಸಕ ಎಸ್‌. ಭೀಮಾನಾಯ್ಕ ಒತ್ತಾಸೆಯಂತೆ ಜಿಲ್ಲಾಡಳಿತ ಡಿಎಂಎಫ್‌ (ಜಿಲ್ಲಾ ಖನಿಜ ನಿಧಿ) ಅನುದಾನದಲ್ಲಿ 20 ಕೋಟಿ ಮೀಸಲಿಡುವ ಮೂಲಕ ಆಸ್ಪತ್ರೆ ನಿರ್ಮಾಣಕ್ಕೆ ಮುನ್ನುಡಿ ಬರೆದಿದೆ.

Latest Videos

undefined

ಕೊಟ್ಟೂರು ತಾಲೂಕು ಕೇಂದ್ರವಾಗಿ ಮೂರು ವರ್ಷಗಳ ನಂತರ ತಾಲೂಕು ಮತ್ತು ಸುತ್ತಮುತ್ತಲಿನ ಜನರಿಗೆ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗುವ ಜತೆಗೆ ಉತ್ತಮ ದೊರೆಯಲಿದೆ. ಪಟ್ಟಣದಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹಲವು ವರ್ಷಗಳ ಹಿಂದೆ ಸರ್ಕಾರ ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಘೋಷಿಸಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ದಾಖಲೆಗೆ ಸೀಮಿತವಾಯಿತು.

ಕೇವಲ ಹತ್ತಾರು ಬೆಡ್‌ಗಳಿರುವ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಉತ್ತಮ ಸೇವೆ ಸಿಗದೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಯಿತು. ಪಟ್ಟಣದಲ್ಲಿ 100 ಬೆಡ್‌ಗಳ ‘ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆ ನಿರ್ಮಿಸಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿ ಬಂದಿತ್ತು. ಆದರೆ, ಈ ಕೂಗು ಜಿಲ್ಲಾಡಳಿತಕ್ಕೆ ಕೇಳಿರಲಿಲ್ಲ. ಇದರ ಮಧ್ಯೆ ಕೊರೋನಾ ವ್ಯಾಪಿಸಿ ಚಿಕಿತ್ಸೆ ಸಿಗದೆ ಹಲವರು ಉಸಿರು ಚೆಲ್ಲಿದರು. ಆಗ ಶಾಸಕ ಭೀಮಾನಾಯ್ಕ ಪಟ್ಟಣದಲ್ಲಿ ‘ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆ ನಿರ್ಮಾಣವಾಗಿದ್ದರೆ ಜನರಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಅವರ ಗಮನ ಸೆಳೆದರು. ಆಗ ಸಚಿವರು ಜಿಲ್ಲಾ ಖನಿಜ ನಿಧಿಯಲ್ಲಿ ಆಸ್ಪತ್ರೆ ನಿರ್ಮಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು. ಆಗ ಜಿಲ್ಲಾಡಳಿತ ಡಿಎಂಎಫ್‌ ಅನುದಾನದಲ್ಲಿ ಕೊಟ್ಟೂರಿನಲ್ಲಿ 20 ಕೋಟಿ ವೆಚ್ಚದಲ್ಲಿ ‘ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆ ನಿರ್ಮಿಸುವ ನಿರ್ಧಾರ ಪ್ರಕಟಿಸಿತು. ಇದರನ್ವಯ ವಿಶಾಲ ಜಮೀನನ್ನು ಹುಡುಕುವ ಕಾರ್ಯವನ್ನು ಕೂಡಲೇ ಕೈಗೊಳ್ಳುವಂತೆ ಶಾಸಕ ಎಸ್‌. ಭೀಮಾನಾಯ್ಕ ಸೂಚಿಸಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಕೊಟ್ಟೂರು ಹೊರವಲಯದ ಮಲ್ಲನಾಯಕನಹಳ್ಳಿಯಲ್ಲಿರುವ 3 ಎಕರೆ 34 ಸೆಣ್‌ ಜಮೀನನ್ನು ಗುರುತಿಸಿದೆ.

ಮಕ್ಕಳ ಅಪೌಷ್ಠಿಕತೆ ಸಮಸ್ಯೆಗೆ ಬಳ್ಳಾರಿ ಜಿಲ್ಲಾಡಳಿತ ಹೈಅಲರ್ಟ್‌..!

ಸೌಲಭ್ಯ:

ಜನರಲ್‌ ವೈದ್ಯರಲ್ಲದೆ ಸರ್ಜರಿ, ಕಣ್ಣು, ಕಿವಿ, ಮೂಗು ತಜ್ಞರು, ಹೆರಿಗೆ, ಅನಸ್ತೇಶಿಯಾ, ಮಕ್ಕಳ ತಜ್ಞರು, ಅರ್ಥೋಪೆಡಿಕ್‌ ತಜ್ಞರು ನೂತನ ‘ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ತಾಲೂಕು ಆಡಳಿತ ಗುರುತಿಸಿರುವ ಜಮೀನನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವೀಕ್ಷಿಸಿ ಒಪ್ಪಿಗೆ ಸೂಚಿಸಿದರೆ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.

ಶಾಸಕರ ಸೂಚನೆಯಂತೆ ಕೊಟ್ಟೂರಿನಲ್ಲಿ ‘ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆ ನಿರ್ಮಿಸಲು ಜಮೀನು ಗುರುತಿಸಲಾಗಿದೆ. ವಿವಿಧ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಟ್ಟಡ ಕಾಮಗಾರಿಗೆ ಅನುಮತಿ ನೀಡಿದರೆ ಮುಂದಿನ ಕಾರ್ಯಕ್ಕೆ ಚಾಲನೆ ಸಿಗಲಿದೆ ಎಂದು ಕೊಟ್ಟೂರು ತಾಲೂಕು ತಹಸೀಲ್ದಾರ್‌ ಜಿ. ಅನಿಲ್‌ಕುಮಾರ ಹೇಳಿದ್ದಾರೆ. 

ಕೊಟ್ಟೂರಿನಲ್ಲಿ ‘ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಜಿಲ್ಲಾಡಳಿತ 20 ಕೋಟಿ ಅನುದಾನ ಘೋಷಿಸಿ ತೆಗೆದಿರಿಸಿದೆ. ಇಂತಹ ದೊಡ್ಡ ಪ್ರಮಾಣದ ಆಸ್ಪತ್ರೆ ನಿರ್ಮಾಣದಿಂದ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಜನತೆಗೆ ಉತ್ತಮ ಆರೋಗ್ಯ ಸೇವೆ ದೊರಕಲಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಷಣ್ಮುಖ ನಾಯ್ಕ ತಿಳಿಸಿದ್ದಾರೆ. 
 

click me!