ಗಮನಿಸಿ KSRTC ಯಲ್ಲಿ ಆರಂಭವಾಗುತ್ತಿದೆ ಹೊಸ ವ್ಯವಸ್ಥೆ : ಏನದು..?

Kannadaprabha News   | Asianet News
Published : Jan 20, 2021, 07:22 AM IST
ಗಮನಿಸಿ  KSRTC ಯಲ್ಲಿ ಆರಂಭವಾಗುತ್ತಿದೆ ಹೊಸ ವ್ಯವಸ್ಥೆ : ಏನದು..?

ಸಾರಾಂಶ

ಕೆಎಸ್‌ಆರ್‌ಟಿಸಿ ಪ್ರಯಾಣಿಕರು ಅಥವಾ ಉದ್ಯೋಗಿಗಳು ಗಮನಿಸಿ. ಇನ್ಮುಂದೆ ಹೊಸ ವ್ಯವಸ್ಥೆಯೊಂದು ಆರಂಭವಾಗುತ್ತಿದೆ. ಏನದು ಹೊಸ ವ್ಯವಸ್ಥೆ..?

 ಮಂಗಳೂರು (ಜ.20):  ಟಿಕೆಟ್‌ ತಪಾಸಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಟಿಕೆಟ್‌ ಪರೀಕ್ಷಕರಿಗೆ(ಚೆಕ್ಕಿಂಗ್‌ ಮಾಡುವವರು) ರಾಜ್ಯ ಸಾರಿಗೆ ಸಂಸ್ಥೆ ಬಾಡಿ ಕ್ಯಾಮರಾ ನೀಡುತ್ತಿದ್ದು, ಇನ್ಮೇಲೆ ಪಕ್ಷಪಾತಿ ಧೋರಣೆಗೆ ಮತ್ತು ಪರಸ್ಪರ ಆರೋಪಗಳಿಗೆ ಬ್ರೇಕ್‌ ಬೀಳಲಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಬಿಎಂಟಿಸಿಯಲ್ಲಿ ಜಾರಿಯಲ್ಲಿದ್ದ ಬಾಡಿ ಕ್ಯಾಮರಾ ವ್ಯವಸ್ಥೆ ಈಗ ರಾಜ್ಯಾದ್ಯಂತ ಜಾರಿಗೆ ಬರುತ್ತಿದೆ. ಕೆಎಸ್‌ಆರ್‌ಟಿಸಿ, ಈಶಾನ್ಯ ಕರ್ನಾಟಕ ಸಾರಿಗೆ ಹಾಗೂ ವಾಯುವ್ಯ ಸಾರಿಗೆಗಳಲ್ಲಿ ಜನವರಿಯಿಂದಲೇ ಹಂತ ಹಂತವಾಗಿ ಅನುಷ್ಠಾನಗೊಳ್ಳುತ್ತಿದೆ.

ಕ್ಯಾಮರಾ ಫೋಕಸ್‌ ಹೇಗೆ?: 

ಟಿಕೆಟ್‌ ತಪಾಸಣಾ ಕ್ರಮದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದರೆ, ಟಿಕೆಟ್‌ ತಪಾಸಣೆ ನಡೆಸುವವರು ತಮ್ಮ ಅಂಗಿ ಕಿಸೆಗೆ ಬಾಡಿ ಕ್ಯಾಮರಾವನ್ನು ಅಳವಡಿಸಿಕೊಂಡೇ ಬಸ್‌ನೊಳಗೆ ಧಾವಿಸುತ್ತಾರೆ. ಟಿಕೆಟ್‌ ತಪಾಸಣೆ ನಡೆಸಿ ಬಸ್‌ ಇಳಿದಾಗಲೇ ಈ ಕ್ಯಾಮರಾ ಆಫ್‌ ಮಾಡುತ್ತಾರೆ. ಅಲ್ಲಿವರೆಗೆ ಬಸ್‌ನಲ್ಲಿ ಟಿಕೆಟ್‌ ತಪಾಸಣೆ ನಡೆಸುವಾಗಿನ ಎಲ್ಲ ವಿದ್ಯಮಾನಗಳು ಈ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿರುತ್ತದೆ. ಬಳಿಕ ಇದನ್ನು ಪರಿಶೀಲನೆ ನಡೆಸುತ್ತಾರೆ. ಒಂದು ಬಾರಿಗೆ ರೆಕಾರ್ಡ್‌ ಮಾಡಿರುವುದು ಒಂದು ತಿಂಗಳು ವರೆಗೆ ಸ್ಟೋರ್‌ ಆಗಿರುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಕೆಎಸ್​ಆರ್​ಟಿಸಿಯ ಈ ಬಸ್‌ಗಳ​ ಪ್ರಯಾಣ ದರ ಇಳಿಕೆ..! .

ಪ್ರಯಾಣಿಕರ ಟಿಕೆಟ್‌ ತಪಾಸಣೆ, ಟಿಕೆಟ್‌ ನೀಡಿದ ಬಗ್ಗೆ ಯಂತ್ರದ ತಪಾಸಣೆ ಸೇರಿದಂತೆ ಎಲ್ಲ ಆಗುಹೋಗುಗಳೂ ಕ್ಯಾಮರಾದಲ್ಲಿ ದಾಖಲಾಗುತ್ತದೆ. ಟಿಕೆಟ್‌ ಹೊಂದಿಲ್ಲದಿದ್ದರೆ ಪ್ರಯಾಣಿಕರಿಗೆ ಸ್ಥಳದಲ್ಲೇ ರಸೀದಿ ಸಹಿತ ಗರಿಷ್ಠ 500 ರು. ದಂಡ ವಿಧಿಸಬಹುದು. ಈ ವೇಳೆ ಪ್ರಯಾಣಿಕರು ಅಥವಾ ನಿರ್ವಾಹಕರು ಏನೇ ತಕರಾರು ತೆಗೆದರೂ ಅದು ಕ್ಯಾಮರಾದಲ್ಲಿ ದಾಖಲಾಗುತ್ತದೆ. ಒಂದು ವೇಳೆ ಟಿಕೆಟ್‌ ನೀಡದೆ ನಿರ್ವಾಹಕ ತಪ್ಪು ಎಸಗಿದ್ದರೆ, ಆತನ ವಿರುದ್ಧ ಕ್ರಮಕ್ಕೆ ಟಿಕೆಟ್‌ ಪರೀಕ್ಷಕರು ಶಿಫಾರಸು ಮಾಡುತ್ತಾರೆ.

ಯಾಕಾಗಿ ಬಾಡಿ ಕ್ಯಾಮರಾ?:

ಇದುವರೆಗೆ ಸಾರಿಗೆ ಬಸ್‌ಗಳಲ್ಲಿ ಟಿಕೆಟ್‌ ತಪಾಸಣೆ ನಡೆಸುವ ವಿಧಾನದ ಬಗ್ಗೆ ಸಾಕಷ್ಟುಆರೋಪಗಳು ಕೇಳಿಬರುತ್ತಿತ್ತು. ಮುಖ್ಯವಾಗಿ ಟಿಕೆಟ್‌ ಪರೀಕ್ಷಕರು ಸರಿಯಾಗಿ ತಪಾಸಣೆ ನಡೆಸುತ್ತಿಲ್ಲ. ಕೆಲವು ಕಡೆಗಳಲ್ಲಿ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ. ವಿನಾ ಕಾರಣ ನಿರ್ವಾಹಕರ ವಿರುದ್ಧ ಕೇಸು ದಾಖಲಿಸುತ್ತಾರೆ. ಕೈಬಿಸಿ ಮಾಡಿದರೆ, ಅಂತಹವರ ವಿರುದ್ಧ ಕೇಸು ದಾಖಲಿಸುವುದೇ ಇಲ್ಲ ಇತ್ಯಾದಿ ಆರೋಪಗಳು ವ್ಯಕ್ತಗೊಳ್ಳುತ್ತಿತ್ತು. ಪ್ರಯಾಣಿಕರಲ್ಲೂ ಕೆಲವರು ಹಣ ನೀಡದೆಯೇ, ಹಣ ನೀಡಿದರೂ ಟಿಕೆಟ್‌ ನೀಡಿಲ್ಲ ಎಂದು ನಿರ್ವಾಹಕರ ಮೇಲೆ ಆರೋಪ ಹೊರಿಸುವ ವಿದ್ಯಮಾನಗಳೂ ನಡೆಯುತ್ತಿದ್ದವು. ಇಂತಹ ಆರೋಪಗಳಿಗೆ ಅವಕಾಶ ನೀಡದೆ, ಆದಷ್ಟುಪಾರದರ್ಶಕತೆ ತರುವ ನಿಟ್ಟಿನಲ್ಲಿ ಬಾಡಿ ಕ್ಯಾಮರಾ ವ್ಯವಸ್ಥೆಯನ್ನು ಟಿಕೆಟ್‌ ಚೆಕ್ಕಿಂಗ್‌ ವೇಳೆ ಜಾರಿಗೆ ತರಲಾಗಿದೆ ಎನ್ನುತ್ತಾರೆ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್‌ ಕುಮಾರ್‌.

ಟಿಕೆಟ್‌ ತಪಾಸಣೆಯಲ್ಲಿ ಪಾರದರ್ಶಕತೆಗಾಗಿ ಬಾಡಿ ಕ್ಯಾಮರಾ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಮಂಗಳೂರು ವಿಭಾಗದಲ್ಲಿ ಪ್ರಸಕ್ತ 2 ಬಾಡಿ ಕ್ಯಾಮರಾ ಬಂದಿದ್ದು, ಇನ್ನು 8 ಉಪಕರಣ ಬರಬೇಕಾಗಿದೆ. ಈಗಾಗಲೇ ಈ ಕ್ಯಾಮರಾ ಮೂಲಕ ತಪಾಸಣೆ ಆರಂಭಿಸಲಾಗಿದೆ.

-ಕಮಲ್‌ ಕುಮಾರ್‌, ವಿಭಾಗೀಯ ಸಂಚಾರ ನಿಯಂತ್ರಕ, ಕೆಎಸ್‌ಆರ್‌ಟಿಸಿ ಮಂಗಳೂರು.

PREV
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!