ಸೂರಿಲ್ಲದವರಿಗೆ ಶೀಘ್ರ ನಿವೇಶನ ಹಂಚಿಕೆ: ವಿರೂಪಾಕ್ಷಪ್ಪ ಬಳ್ಳಾರಿ

By Kannadaprabha News  |  First Published Jul 23, 2022, 1:00 AM IST

ತಾಂತ್ರಿಕ ಕಾರಣಗಳಿಂದ ಬಡವರಿಗೆ ನಿವೇಶನ ಹಂಚಿಕೆ ಬಹಳಷ್ಟು ವಿಳಂಬ 


ಬ್ಯಾಡಗಿ(ಜು.23): ಬಡವರಿಗೆ ನಿವೇಶನ ಹಂಚುವ ಸಂಬಂಧ ಒಟ್ಟು 10 ಎಕರೆ ಭೂಮಿ ಮಂಜೂರಾಗಿದ್ದು, ಸುಮಾರು 225ಕ್ಕೂ ಹೆಚ್ಚು ಫಲಾನುಭವಿಗಳಿಗೆ ಶೀಘ್ರದಲ್ಲೇ ನಿವೇಶನ ಹಂಚಿಕೆ ಮಾಡುವುದಾಗಿ ಶುಕ್ರವಾರ ಪುರಸಭೆ ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಘೋಷಿಸಿದರು. ತಾಂತ್ರಿಕ ಕಾರಣಗಳಿಂದ ಬಡವರಿಗೆ ನಿವೇಶನ ಹಂಚಿಕೆ ಬಹಳಷ್ಟು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದ ಮಲ್ಲೇಶ್ವರ ಗುಡ್ಡಕ್ಕೆ ಹೊಂದಿಕೊಂಡಿರುವ (ಆಗ್ನಿಶಾಮಕ ಠಾಣೆಯ ಬಳಿ) ಒಟ್ಟು 10 ಎಕರೆಯಲ್ಲಿ ಪ್ರತಿ ಕುಟುಂಬಕ್ಕೆ 600 ಚೌ. ಫäಟ್‌ ಅಳತೆಯ ಖಾಲಿ ನಿವೇಶನ ಹಂಚಿಕೆ ಮಾಡುವುದಾಗಿ ತಿಳಿಸಿದರು.
ಬಡವರನ್ನು ಗುರ್ತಿಸುವ ಜವಾಬ್ದಾರಿ ಸದಸ್ಯರಿಗೆ:

ಈಗಾಗಲೇ ಹಂಚಿಕೆ ಮಾಡಿದ ಆಶ್ರಯ ಬಡಾವಣೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಫಲಾನುಭವಿಗಳು ಅನಧಿಕೃತವಾಗಿ ಬೇರೊಬ್ಬರಿಗೆ ಮಾರಾಟ ಮಾಡಿ ಹಣವನ್ನು ಪಡೆದು ಬೇರೆಬೇರೆ ಊರನ್ನೇ ಸೇರಿದ್ದಾರೆ,ಯಾವುದೇ ಕಾರಣಕ್ಕೂ ಸದಸ್ಯರು ಇಂತಹದಕ್ಕೆ ಅವಕಾಶ ನೀಡಬಾರದು,ಇದರಿಂದ ಸರ್ಕಾರದ ಮೂಲ ಉದ್ದೇಶ ಈಡೇರುವುದಿಲ್ಲ ಮತ್ತು ಸ್ವಂತ ಮನೆಯಿಲ್ಲದ ಬಡವರು ಬಾಡಿಗೆ ಹಣ ಕಟ್ಟಿ ಸಂಕಷ್ಟದಲ್ಲಿಯೇ ಬದುಕಬೇಕೆ ಎಂದು ಪ್ರಶ್ನಿಸಿದ ಅವರು, ತಮ್ಮ ವಾರ್ಡ್‌ಗಳಲ್ಲಿ ನಿಜ ಬಡವರನ್ನು ಆಯ್ಕೆ ಸದಸ್ಯರ ಮೇಲಿದೆ ಎಂದರು.

Latest Videos

undefined

ಬದುಕಿದ್ದಾಗ ಉತ್ಸವ ಆಚರಣೆ ಎಷ್ಟು ಸರಿ?: ಸಿದ್ದರಾಮೋತ್ಸವದ ಬಗ್ಗೆ ಸಚಿವ ಪಾಟೀಲ ಟಾಂಗ್‌

ಮಲ್ಲೂರ ರಸ್ತೆಯಲ್ಲಿಯೂ ಆರಂಭ:

ಮಲ್ಲೂರ ರಸ್ತೆಯಲ್ಲಿರುವ ಪುರಸಭೆಯ ಬಡಾವಣೆಯಲ್ಲಿ ಜಿಪ್ಲಸ್‌ 1 ಮಾದರಿ ಮನೆಗಳ ನಿರ್ಮಾಣಕ್ಕೆ 633 ಫಲಾನುಭವಿಗಳು ತಲ್ಲಾ .30 ಸಾವಿರ ತುಂಬಿದ್ದು, ಮನೆಗಳನ್ನು ನಿರ್ಮಿಸುವ ವಿಚಾರದಲ್ಲಿ ಈಗಾಗಲೇ ಡಿಪಿಆರ್‌ ಸಿದ್ಧವಾಗಿದೆ ಹಣ ಬಿಡುಗಡೆಯಾದ ಬಳಿಕ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದರು.

ಶಿಕ್ಷೆಯಿಲ್ಲದ ಕಾನೂನಿಗೆ ಹೆದರುತ್ತಿಲ್ಲ:

ಘನತ್ಯಾಜ್ಯ ನಿರ್ವಹಣೆ ಬೈಲಾ ಅಳವಡಿಕೆ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ವೇಳೆ ಮಾತನಾಡಿದ ಸದಸ್ಯ ಬಸವರಾಜ ಛತ್ರದ, ಪಟ್ಟಣದ ನೈರ್ಮಲ್ಯದ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ಸಾರ್ವಜನಿಕರಿಗೆ ಈಗಾಗಲೇ ಸಾಕಷ್ಟುಅವಕಾಶ ನೀಡಲಾಗಿದ್ದು, ಜನರು ವರ್ತನೆಯನ್ನು ಬದಲಾಯಿಸಿಕೊಳ್ಳಲು ಸಿದ್ಧರಿಲ್ಲ ಸಾರ್ವಜನಿಕ ಸ್ಥಳದಲ್ಲಿ ಕಸಗಳನ್ನು ಹಾಕುವವರ ವಿರುದ್ಧ ಮತ್ತು ಹಸಿಕಸ ಮತ್ತು ಒಣಕಸ ಬೇರ್ಪಡಿಸದೇ ಇರುವವರಿಗೆ ನಿರ್ಧಾಕ್ಷಿಣ್ಯವಾಗಿ ದಂಡ ವಸೂಲಿ ಮಾಡಬೇಕು ಈ ಕುರಿತು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಭೋಜಾ ಕೂಡ್ರಿಸಲು ಒಕ್ಕೊರಲಿನ ನಿರ್ಣಯ:

ವಿಷಯದ ಕುರಿತು ಸಭೆಯ ಗಮನವನ್ನು ಸೆಳೆದ ಮುಖ್ಯಾಧಿಕಾರಿ ಏಸು ಬೆಂಗಳೂರು, ಖಾಲಿ ನಿವೇಶನಗಳಲ್ಲಿ ಗಿಡಮರ ಸೇರಿದಂತೆ ಕಸಕಡ್ಡಿಗಳ ಸಂಗ್ರಹಣೆ ಯಥೇಚ್ಚ ನಡೆಯುತ್ತಿದೆ,ಈ ಕುರಿತು ನಿವೇಶನ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಿದರೂ ಸಹ ಸರಿಯಾದ ಸ್ಪಂದನೆ ನೀಡುತ್ತಿಲ್ಲ,ತಪ್ಪಿತಸ್ಥ ನಿವೇಶನಗಳ ಮೇಲೆ ಪುರಸಭೆ ಭೋಜಾ ಕೂಡ್ರೀಸಲು ಕಾನೂನಿನಲ್ಲಿ ಅವಕಾಶವಿದ್ದು ಸಭೆಯು ಅನುಮತಿ ಕೇಳಿದರು, ಸಭೆಯಲ್ಲಿದ್ದ ಸರ್ವ ಸದ ಸ್ಯರು ಒಕ್ಕೊರಲನಿಂದ ಸಮ್ಮತಿಸಿದರು.

ಸಿಸಿ ಟಿವಿ ಅಳವಡಿಸಿ:

ಸ್ಥಾಯಿಸಮಿತಿ ಅಧ್ಯಕ್ಷ ಬಾಲಚಂದ್ರಗೌಡ ಮಾತನಾಡಿ, ಸಂತೆ ಮೈದಾನ, ಬಸ್‌ ನಿಲ್ದಾಣ, ತಾಲೂಕು ಕ್ರೀಡಾಂಗಣ ಸೇರಿದಂತೆ ಪಟ್ಟಣದ ಹೊರವಲಯದ ಖಾಲಿ ನಿವೇಶನಗಳು ಸಂಜೆಯಾದ ತಕ್ಷಣ ಬಾರ್‌ಗಳಾಗಿ ಪರಿವರ್ತನೆ ಗೊಳ್ಳುತ್ತಿವೆ, ಸದರಿ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆ ಯಥೇಚ್ಚವಾಗಿ ನಡೆಯುತ್ತಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಮತ್ತು ಕ್ಯಾಮೆರಾಗಳಿಲ್ಲದೇ ಅಪರಾಧ ಪ್ರಕರಣ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ, ಸಾರ್ವಜನಿಕರ ಸುರಕ್ಷತೆಗೆ ಕೂಡಲೇ ಕ್ಯಾಮೆರಾ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಅಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಈರಣ್ಣ ಬಣಕಾರ, ಮಂಜಣ್ಣ ಬಾರ್ಕಿ, ಫಕ್ಕೀರಮ್ಮ ಛಲವಾದಿ, ಚಂದ್ರಣ್ಣ ಶೆಟ್ಟರ, ಜಮೀಲಾ ಹೆರ್ಕಲ್‌, ರೇಷ್ಮಾಬಾನು ಶೇಖ್‌, ಮಂಗಳ ಗೆಜ್ಜೆಳ್ಳಿ, ಮೆಹಬೂಬ್‌ ಅಗಸನಹಳ್ಳಿ, ಮಲ್ಲಮ್ಮ ಪಾಟೀಲ, ಹನುಮಂತ ಮ್ಯಾಗೇರಿ, ಗಣೇಶ ಅಚಲಕರ, ಗಿರಿಜಾ ಪಟ್ಟಣಶೆಟ್ಟಿ, ಪ್ರೇಮಾ ಬೆನ್ನೂರ, ಹನುಮಂತ ಕೋಡಿಹಳ್ಳಿ, ಕಮಲವ್ವ ಕುರಕುಂದಿ,ಶಿವರಾಜ ಅಂಗಡಿ, ಮಹ್ಮದ್‌ ರಫೀಕ್‌ ಮುದಗಲ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎ.ಸಿ.ಬಿ ಬಲೆಗೆ ಬಿದ್ದ ಹಾವೇರಿ ನಗರ ಸಭೆ ಮಿಕಗಳು

ಮುಖ್ಯರಸ್ತೆ ಅಗಲೀಕರಣ ವಿಳಂಬದ ಹಿನ್ನೆಲೆಯಲ್ಲಿ ಗಾಂಧಿನಗರಕ್ಕೆ ಹೊಂದಿಕೊಂಡಿರುವ ರಸ್ತೆಯಲ್ಲಿ ವಾಹನ ದಟ್ಟಣೆ ತೀವ್ರವಾಗಿದೆ,ಆದ್ದರಿಂದ ರಟ್ಟೀಹಳ್ಳಿ ರಸ್ತೆಯವರೆಗೂ ದ್ವಿಪಥ ರಸ್ತೆಯನ್ನು ನಿರ್ಮಿಸಲು ಕ್ರಮ ಕೈಗೊಳ್ಳಿ ಅಂತ ಸದಸ್ಯ ಸುಭಾಸ್‌ ಮಾಳಗಿ ಹೇಳಿದ್ದಾರೆ.  

ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ರಸ್ತೆಗಳೆಲ್ಲಾ ಹಾಳಾಗಿ ಹೋಗಿವೆ, ಸ್ವಚ್ಛತೆ ಸಮರ್ಪಕವಾಗಿಲ್ಲ ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ,ಲಿಖಿತ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿದಷ್ಟೇ ಸ್ವಚ್ಚತೆಗೂ ನೀಡಬೇಕು ಅಂತ ಸದಸ್ಯೆ ಕಲಾವತಿ ಬಡಿಗೇರ ತಿಳಿಸಿದ್ದಾರೆ. 
 

click me!