• ನಾಲ್ವರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅರ್ಜುನ ಗಾಂವಕರ
• ರಸ್ತೆ ಅಪಘಾತದಲ್ಲಿ ಗಾಯಗೊಂಡು ನಿಷ್ಕ್ರಿಯವಾಗಿತ್ತು ಯುವಕನ ಮಿದುಳು
• ಆಪ್ತ ಸಮಾಲೋಚನೆ ಬಳಿಕ ಅಂಗಾಂಗ ದಾನ ಮಾಡಲು ತಂದೆ ತಾಯಿ ಒಪ್ಪಿಗೆ
ಬೆಳಗಾವಿ, (ಜುಲೈ.22): ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗ ದಾನ ಮಾಡುವ ಮೂಲಕ ನಾಲ್ವರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ಹತ್ತಿರ ರಸ್ತೆ ಅಪಘಾತದಲ್ಲಿ ಖಾನಾಪೂರ ತಾಲೂಕಿನ ಜಾಂಬೋಟಿ ಬಳಿಯ ಅಮಟೆ ಗ್ರಾಮದ 26 ವರ್ಷದ ಅರ್ಜುನ ಗಾಂವಕರ್ ತಲೆಗೆ ಪೆಟ್ಟು ಬಿದ್ದು ಮಿದುಳು ನಿಷ್ಕ್ರಿಯಗೊಂಡಿತ್ತು. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರ್ಜುನ ಗಾಂವಕರ ಜೀವನ್ಮರಣದ ನಡುವೆ ಹೋರಾಡುತ್ತಿದ್ದ. ಮಿದುಳು ನಿಷ್ಕ್ರಿಯಗೊಂಡ ಅರ್ಜುನ ಗಾಂವಕರ ತಂದೆ ತಾಯಿಗೆ ಹಾಗೂ ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ನಿಮ್ಮ ಮಗ ನೀಡುವ ಅಂಗಾಂಗಗಳಿಂದ ಇನ್ನೊಬ್ಬರ ಜೀವ ಉಳಿಯುತ್ತದೆ ಎಂದು ಹೇಳಿದ್ದಾರೆ. ಆಗ ಸ್ವಇಚ್ಚೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದ್ದಾರೆ.
ಮಿದುಳು ನಿಷ್ಕ್ರೀಯಗೊಂಡ ಅರ್ಜುನ ಗಾಂವಕರ ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಗೆ ಕಸಿ ಮಾಡುವಲ್ಲಿ ಇಲ್ಲಿನ ವೈದ್ಯರು ನಿರತರಾದರೆ, ಲೀವರ್‌ನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದವರಗೆ ರಸ್ತೆ ಮೂಲಕ ಸಾಗಿಸಿ, ಅಲ್ಲಿಂದ ಬೆಂಗಳೂರಿಗೆ ಕಳಿಸಿಕೊಡಲಾಯಿತು. ಎರಡೂ ಕಿಡ್ನಿಗಳನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ ರವಾನಿಸಲಾಯಿತು.
ಅರ್ಜುನ ಗಾಂವಕರ ಮೃತಪಟ್ಟರೂ ನಾಲ್ವರ ಜೀವ ಉಳಿಸಿ ಸಾರ್ಥಕತೆ ಮೆರೆದಿದ್ದಾರೆ. ಅತ್ಯಂತ ಜನಸಂದಣಿ ಹಾಗೂ ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಗ್ರೀನ್ ಕಾರಿಡಾರ್ ನಿರ್ಮಿಸಿ ಅಂಗಾಂಗಗಳನ್ನು ಶೀಘ್ರ ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .