ಮಾವನ ಮೇಲಿನ ಕೋಪಕ್ಕೆ ಜೈಲಿಗೆ ಹೋದ

By Web DeskFirst Published Oct 5, 2019, 7:58 AM IST
Highlights

ಮಾವನ ಮೇಲಿನ ದ್ವೇಷಕ್ಕೆ ಹುಸಿ ಬಾಂಬ್ ಬೆದರಿಕೆ ಒಡ್ಡಿ ಮಾಡಿ ಜೈಲಿನ ಸೇರಿದ್ದಾನೆ ಅಳಿಯ

ಬೆಂಗಳೂರು [ಅ.05]: ಇತ್ತೀಚಿಗೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದ್ವೇಷದಿಂದ ಹೈಕೋರ್ಟ್‌ಗೆ ಬಾಂಬ್‌ ಇಟ್ಟಿರುವುದಾಗಿ ತನ್ನ ಮಾವನ ಹೆಸರಿನಲ್ಲಿ ಬೆದರಿಕೆ ಪತ್ರ ಕಳುಹಿಸಿದ್ದ ಕಿಡಿಗೇಡಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ರಾಜೇಂದ್ರ ಸಿಂಗ್‌ ಎಂಬಾತ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಹೈಕೋರ್ಟ್‌ನಲ್ಲಿ ಬಾಂಬ್‌ ಇಟ್ಟಿರುವುದಾಗಿ ಖಾಲಿಸ್ತಾನ ಬೆಂಬಲಿಗನ ಹೆಸರಿನಲ್ಲಿ ಆತ ಪತ್ರ ಕಳುಹಿಸಿದ್ದ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ವಿಧಾನಸೌಧ ಠಾಣೆ ಪೊಲೀಸರು, ಚೆನ್ನೈ ಜೈಲಿನಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದು ಬಳಿಕ ಬಂಧನ ಪ್ರಕ್ರಿಯೆ ಕೈಗೊಂಡಿದ್ದಾರೆ.

ಮಾವನ ಮೇಲಿನ ಕೋಪಕ್ಕೆ ಜೈಲು ಸೇರಿದ: ರಾಜ್ಯದ ಹೈಕೋರ್ಟ್‌ಗೆ ಸೆ.17ರಂದು ಇಂಟರ್‌ನ್ಯಾಷನಲ್‌ ಖಾಲಿಸ್ತಾನ ಬೆಂಬಲಿಗರ ಗುಂಪಿನ ಸದಸ್ಯ ಎಂದು ಹೇಳಿಕೊಂಡು ದೆಹಲಿಯ ಮೋತಿ ನಗರದ ಹರ್ದರ್ಶನ್‌ ಸಿಂಗ್‌ ಹೆಸರಿನಲ್ಲಿ ಪತ್ರ ಬಂದಿತ್ತು. ಇದೇ ರೀತಿ ಬೆದರಿಕೆ ಪತ್ರಗಳು ಉತ್ತರ ಪ್ರದೇಶ ಹಾಗೂ ತಮಿಳುನಾಡಿನ ಹೈಕೋರ್ಟ್‌ಗಳಿಗೆ ಸಹ ಬಂದಿದ್ದವು. ಆಗ ಬೆದರಿಕೆ ಪತ್ರದಲ್ಲಿ ಪ್ರಸ್ತಾಪವಾಗಿದ್ದ ವಿಳಾಸದ ಆಧರಿಸಿ ಚೆನ್ನೈ ಪೊಲೀಸರು, ದೆಹಲಿ ಮೋತಿನಗರದ ನೆಲೆಸಿದ್ದ ಹರ್ದರ್ಶನ್‌ ಸಿಂಗ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಕೌಟುಂಬಿಕ ವಿಷಯ ಬೆಳಕಿಗೆ ಬಂದಿದೆ. ಹರ್ದರ್ಶನ್‌ ಸಿಂಗ್‌ ಪುತ್ರಿಯನ್ನು ವಿವಾಹವಾಗಿದ್ದ ರಾಜೇಂದ್ರ, ಬಳಿಕ ಕೌಟುಂಬಿಕ ವಿಷಯವಾಗಿ ಮನಸ್ತಾಪ ಮಾಡಿಕೊಂಡು ಪತ್ನಿಯಿಂದ ಪ್ರತ್ಯೇಕವಾಗಿದ್ದ.

ಈ ಕಲಹದ ಹಿನ್ನೆಲೆಯಲ್ಲಿ ಮಾವನ ಮೇಲೆ ದ್ವೇಷ ಕಾರುತ್ತಿದ್ದ ಆರೋಪಿ, ಮಾವ ಮತ್ತು ಭಾಮೈದನನ್ನು ಜೈಲಿಗೆ ಕಳುಹಿಸಲು ಈ ಕುಚ್ಯೋದತನ ತೋರಿಸಿದ್ದ. ಮಾವನ ಹೆಸರಿನಲ್ಲಿ ನ್ಯಾಯಾಲಯಗಳಿಗೆ ಬಾಂಬ್‌ ಬೆದರಿಕೆ ಪತ್ರ ಬರೆದು, ಕೊನೆಗೆ ತಾನೇ ತೋಡಿದ ಹಳ್ಳಕ್ಕೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!