ಜಿಲ್ಲೆಯ ವಿವಿಧ ಭಾಗದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಭಾರೀ ಮಳೆ| ಹಾವೇರಿ ನಗರ, ರಾಣಿಬೆನ್ನೂರು, ಸವಣೂರು ತಾಲೂಕುಗಳಲ್ಲಿ ಒಂದು ತಾಸಿಗೂ ಅಧಿಕ ಕಾಲ ಧಾರಾಕಾರ ಮಳೆ ಸುರಿದಿದೆ| ಬ್ಯಾಡಗಿ, ಹಿರೇಕೆರೂರು, ಹಾನಗಲ್ಲ ಭಾಗದಲ್ಲಿಯೂ ಸಾಧಾರಣ ಮಳೆಯಾಗಿದೆ| ಅತಿವೃಷ್ಟಿ, ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಎರಡು ದಿನಗಳಿಂದ ಬೀಳುತ್ತಿರುವ ಭಾರೀ ಮಳೆ ಚಿಂತೆಗೀಡಾಗುವಂತೆ ಮಾಡಿದೆ| ಅತಿವೃಷ್ಟಿಯಿಂದ ಅಳಿದುಳಿದ ಬೆಳೆಯೂ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ|
ಹಾವೇರಿ(ಅ.5): ಜಿಲ್ಲೆಯ ವಿವಿಧ ಭಾಗದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಹಾವೇರಿ ನಗರ, ರಾಣಿಬೆನ್ನೂರು, ಸವಣೂರು ತಾಲೂಕುಗಳಲ್ಲಿ ಒಂದು ತಾಸಿಗೂ ಅಧಿಕ ಕಾಲ ಧಾರಾಕಾರ ಮಳೆ ಸುರಿದಿದೆ. ಬ್ಯಾಡಗಿ, ಹಿರೇಕೆರೂರು, ಹಾನಗಲ್ಲ ಭಾಗದಲ್ಲಿಯೂ ಸಾಧಾರಣ ಮಳೆಯಾಗಿದೆ. ಗುರುವಾರ ಕೂಡ ಜಿಲ್ಲಾದ್ಯಂತ ಭಾರಿ ಮಳೆ ಸುರಿದು ಅವಾಂತರ ಸೃಷ್ಟಿಯಾಗಿತ್ತು. ಸತತ ಎರಡನೇ ದಿನವೂ ಸುರಿಯುತ್ತಿರುವ ಭಾರೀ ಮಳೆ ಜನರಲ್ಲಿ ಆತಂಕ ಮೂಡಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅತಿವೃಷ್ಟಿ, ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಎರಡು ದಿನಗಳಿಂದ ಬೀಳುತ್ತಿರುವ ಭಾರೀ ಮಳೆ ಚಿಂತೆಗೀಡಾಗುವಂತೆ ಮಾಡಿದೆ. ಅತಿವೃಷ್ಟಿಯಿಂದ ಅಳಿದುಳಿದ ಬೆಳೆಯೂ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ.
ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪಿಬಿ ರಸ್ತೆಯ ಚರಂಡಿ ತುಂಬಿ ರಸ್ತೆ ಮೇಲೆ ಹರಿಯಿತು. ಶಹರ ಪೊಲೀಸ್ ಠಾಣೆಯಿಂದ ಕೇಂದ್ರ ಬಸ್ ನಿಲ್ದಾಣದವರೆಗೂ ಒಂದು ಬದಿಯ ಚರಂಡಿ ತುಂಬಿ ಒಂದು ಅಡಿಯಷ್ಟುರಸ್ತೆ ಮೇಲೆ ಹರಿದ ಪರಿಣಾಮ ಸಂಚಾರಕ್ಕೆ ವ್ಯತ್ಯಯವಾಗಿತ್ತು. ರಾತ್ರಿವರೆಗೂ ಏಕಮುಖ ರಸ್ತೆ ಸಂಚಾರ ನಡೆಸುವಂತಾಗಿತ್ತು. ಹಾನಗಲ್ಲ ರಸ್ತೆಯಲ್ಲೂ ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿಯಿತು. ಪಿಬಿ ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿಗಳಿಗೆ ನೀರು ನುಗ್ಗಿತ್ತು. ಗೂಗಿಕಟ್ಟೆಯ ಅಂಗಡಿಗಳು ನೀರು ನುಗ್ಗಿ ಕೆಲಕಾಲ ಸಮಸ್ಯೆಯಾಯಿತು.
ಎಲ್ಲೆಲ್ಲಿ ಎಷ್ಟುಮಳೆ
ಶುಕ್ರವಾರ ಬೆಳಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ಹಾವೇರಿ ತಾಲೂಕಿನಲ್ಲಿ 32.2. ಮಿಮೀ, ಹಾನಗಲ್ಲ ತಾಲೂಕಿನಲ್ಲಿ 32.8 ಮಿಮೀ, ಹಿರೇಕೆರೂರು ತಾಲೂಕಿನಲ್ಲಿ 9.6, ರಾಣಿಬೆæನ್ನೂರ ತಾಲೂಕಿನಲ್ಲಿ 58 ಮಿಮೀ, ಬ್ಯಾಡಗಿ ತಾಲೂಕಿನಲ್ಲಿ 1.8 ಮಿಮೀ, ಶಿಗ್ಗಾಂವಿ ತಾಲೂಕಿನಲ್ಲಿ 2.4 ಮಿಮೀ ಹಾಗೂ ಸವಣೂರ ತಾಲೂಕಿನಲ್ಲಿ 7.9ಮಿಮೀ ಮಳೆಯಾಗಿದೆ.
ಚರಂಡಿಯಲ್ಲಿ ಜಾರಿಬಿದ್ದ ಇಬ್ಬರು ವಿದ್ಯಾರ್ಥಿನಿಯರ ರಕ್ಷಣೆ
ಹಾವೇರಿ ನಗರದ ಹಾನಗಲ್ಲ ರಸ್ತೆ ಸರಸ್ವತಿ ಚಿತ್ರಮಂದಿರದ ಎದುರು ಮಳೆ ನೀರು ರಸ್ತೆ ಮೇಲೆ ತುಂಬಿ ಹರಿಯುತ್ತಿದ್ದ ವೇಳೆ ಚರಂಡಿಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಬಿದ್ದ ಘಟನೆ ನಡೆಯಿತು. ರಸ್ತೆ ಮೇಲೆ ನೀರು ಹರಿಯುತ್ತಿದ್ದ ವೇಳೆ ನಿಧಾನವಾಗಿ ಸಾಗುತ್ತಿದ್ದಾಗ ಚರಂಡಿ ಸ್ವಲ್ಪ ಭಾಗ ತೆರೆದುಕೊಂಡಿರುವುದು ಗೊತ್ತಾಗದೇ ಚರಂಡಿಯಲ್ಲಿ ಬಿದ್ದಿದ್ದಾರೆ. ನೀರಿನ ರಭಸಕ್ಕೆ ಸಿಲುಕಿ ಮೇಲೇಳಲಾರದೇ ಕೂಗಿಕೊಂಡಾಗ ಅಕ್ಕಪಕ್ಕದಲ್ಲಿದ್ದ ಜನರು ಬಂದು ರಕ್ಷಣೆ ಮಾಡಿದ್ದಾರೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲದಿರುವುದು, ಅಲ್ಲಲ್ಲಿ ಚರಂಡಿಗೆ ಮುಚ್ಚಿದ ಕಲ್ಲು ತೆರೆದಿರುವುದರಿಂದ ಆಗುತ್ತಿರುವ ಅವಘಡಗಳಿಗೆ ನಗರಸಭೆ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಹಿಡಿಶಾಪ ಹಾಕಿದರು.