ಕಸಾಪ ಚುನಾವಣೆಗೂ ಇನ್ನು ಸಾಮಾಜಿಕ ಜಾಲತಾಣ ಬಳಕೆ

By Kannadaprabha NewsFirst Published Mar 17, 2021, 2:37 PM IST
Highlights

ಯಾವುದೇ ಸಾರ್ವತ್ರಿಕ ಚುನಾವಣೆಗೂ ಕಮ್ಮಿಯಿಲ್ಲದಂತೆ ಈ ಬಾರಿ ಕಸಾಪ ಚುನಾವಣೆ ಅಬ್ಬರ| ವಾಟ್ಸ್‌ ಆ್ಯಪ್‌ ಗ್ರೂಪ್‌, ಫೇಸ್‌ಬುಕ್‌ನಲ್ಲೂ ಗ್ರೂಪ್‌ ಮಾಡಿಕೊಂಡು ಪ್ರಚಾರ ಶುರು| ಮೇ 9ಕ್ಕೆ ಚುನಾವಣೆ, ಮಾ. 27ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ| 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಮಾ.17): ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ ಸಮೀಪಿಸುತ್ತಿದೆ. ಮೇ 9ಕ್ಕೆ ರಾಜ್ಯಾದ್ಯಂತ ಚುನಾವಣೆ ನಡೆಯಲಿದೆ. ಯಾವುದೇ ರಾಜಕಾರಣಿಗಳಿಗೆ ಕಮ್ಮಿಯಿಲ್ಲದಂತೆ ಈಗಲೇ ಆಕಾಂಕ್ಷಿಗಳು ಪೈಪೋಟಿಗಿಳಿದು ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆಯೂ ಅಷ್ಟೇ ರಭಸದಿಂದ ನಡೆಯುತ್ತಿದೆ.

ಕಸಾಪ ರಾಜ್ಯದ ಪ್ರಮುಖ ಸಾಹಿತ್ಯ ಸಂಸ್ಥೆ. ಸಾಹಿತ್ಯ ಪರಿಷತ್‌ನ ಅಧ್ಯಕ್ಷಗಿರಿ ಎಂದರೆ ಒಂದು ರೀತಿಯಲ್ಲಿ ದೊಡ್ಡ ಹುದ್ದೆಯೆಂದೇ ಪರಿಗಣಿಸಲಾಗುತ್ತಿದೆ. ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಇದರ ಸದಸ್ಯರು. ಇವರೇ ಇದರ ಮತದಾರರು. ಇದೀಗ ರಾಜ್ಯ ಮಟ್ಟದಲ್ಲಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಯೊಂದು ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಮೇ 9ಕ್ಕೆ ಚುನಾಣೆ ನಡೆಯಲಿದೆ. ಮಾ. 27ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಧಾರವಾಡ ಜಿಲ್ಲಾಧ್ಯಕ್ಷಗಿರಿ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಈಗಲೇ ಪ್ರಚಾರ ಶುರು ಹಚ್ಚಿಕೊಂಡಿದ್ದಾರೆ.

ಪ್ರತ್ಯೇಕ ಗ್ರೂಪ್‌:

ಕೋವಿಡ್‌ ಕಾರಣದಿಂದಾಗಿ ಎಲ್ಲೆಡೆ ಮುಂಚಿನಂತೆ ಓಡಾಡಲು ಸಾಧ್ಯವಾಗಲ್ಲ. ಜೊತೆಗೆ ಪತ್ರ ಬರೆದು ಮತಯಾಚಿಸುವುದೂ ಈಗ ಹಳೆಯ ಪದ್ಧತಿ. ಹೀಗಾಗಿ ವಾಟ್ಸ್‌ ಆ್ಯಪ್‌ ಗ್ರೂಪ್‌, ಫೇಸ್‌ಬುಕ್‌ನಲ್ಲೂ ಗ್ರೂಪ್‌ ಮಾಡಿಕೊಂಡು ಪ್ರಚಾರ ಶುರು ಮಾಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೊಂದು ಪ್ರತ್ಯೇಕ ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿ ಆ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಪ್ರತಿದಿನ ತಾವು ಭೌತಿಕವಾಗಿ ನಡೆಸುವ ಪ್ರಚಾರದ ಜೊತೆ ಜೊತೆಗೆ ವಾಟ್ಸ್‌ ಆ್ಯಪ್‌ ಗ್ರೂಪ್‌ಲ್ಲೂ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಫೇಸ್‌ಬುಕ್‌ಲ್ಲಿ ಇದೇ ರೀತಿ ಪ್ರಚಾರ ನಡೆಸಲಾಗುತ್ತಿದೆ.

ಧಾರವಾಡ: ಮದ್ಯದ ಅಮಲಿನಲ್ಲಿ ಆತ್ಮಹತ್ಯೆಗೆ ಶರಣಾದ ಕುಡುಕ

ಹಾಡು, ಕವನ:

ಇನ್ನು ಈ ಗ್ರೂಪ್‌ಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತಾವು ಮಾಡಿರುವ ಸಾಧನೆ, ಅಧ್ಯಕ್ಷರಾದರೆ ಮಾಡಬಯಸುವ ಕಾರ್ಯ, ತಾವು ರಚಿಸಿರುವ ಕವನ, ಕಥೆ, ಪ್ರಬಂಧಗಳ ವಿವರಗಳನ್ನು ಕೆಲವರು ವಿವರಿಸಿ ಬರೆದು ಪ್ರಚಾರ ಮಾಡುತ್ತಿದ್ದಾರೆ. ಕೆಲ ಕಲಾವಿದರು (ಕವಿಗಳು) ತಾವು ರಚಿಸಿ ಹಾಡಿರುವ ಹಾಡುಗಳ ಅಡಿಯೋವನ್ನೂ ಗ್ರೂಪ್‌ಲ್ಲಿ ಹಾಕಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ರಾಜಕಾರಣಿಗಳ ಮೊರೆ:

ಇನ್ನೂ ಕೆಲ ಆಕಾಂಕ್ಷಿಗಳು, ಜಾತಿವಾರು ಲೆಕ್ಕಾಚಾರ ಕೂಡ ನಡೆದಿದೆ. ಯಾವ್ಯಾವ ಜಾತಿಯವರು ಎಷ್ಟೆಷ್ಟು ಮತದಾರರಿದ್ದಾರೆ. ಯಾವ ಜಾತಿ ಮುಖಂಡರನ್ನು ಹಿಡಿದರೆ ತಮಗೆ ಮತಗಳು ಪಕ್ಕಾ ಆಗುತ್ತವೆ ಎಂದು ಆಕಾಂಕ್ಷಿಗಳು ಯೋಚಿಸಿ ಮುಖಂಡರ, ರಾಜಕಾರಣಿಗಳ, ಶಾಸಕರ ಮೊರೆ ಕೂಡ ಹೋಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ರಾಜಕಾರಣಿಗಳು ಸಹ ಆಶ್ವಾಸನೆ ಕೊಟ್ಟು ಆಕಾಂಕ್ಷಿಗಳನ್ನು ಕಳುಹಿಸುತ್ತಿದ್ದಾರೆ. ರಾಜಕಾರಣಿಗಳೊಂದಿಗೆ ನಿಂತು ಫೋಟೋ ತೆಗೆಸಿಕೊಂಡು ಅದನ್ನು ಕೂಡ ವಾಟ್ಸ್‌ಆ್ಯಪ್‌ ಗ್ರೂಪ್‌ಲ್ಲಿ ಹಾಕುವ ಮೂಲಕ ಪ್ರಚಾರ ನಡೆಸುತ್ತಿದ್ದಾರೆ.
 

click me!