ಕಾಂಗ್ರೆಸ್ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 28 ಸಾವಿರ ಸರ್ಕಾರಿ ಹುದ್ದೆ ಭರ್ತಿ| ಸುಮಾರು 40 ಸಾವಿರ ಹುದ್ದೆಗಳು ಖಾಲಿ| ಕೋವಿಡ್‌ನಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತ| ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿಯೂ ಅವ್ಯವಹಾರ| ರೈತರ ತುಟಿಗೆ ತುಪ್ಪ ಹಚ್ಚುವ ಕೆಲಸ: ಈಶ್ವರ್ ಖಂಡ್ರೆ|
ಬೆಂಗಳೂರು(ಮಾ.17): ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರಚಿಸಿರುವ ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿ’ಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಆಯವ್ಯಯ ಕುರಿತು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಈ ಮೊದಲು ಸಚಿವರು ಅಧ್ಯಕ್ಷರಾಗಿದ್ದರು. ಆದರೆ, ಅದನ್ನು ಬದಲಿಸಿ ಶಾಸಕರನ್ನು ಮಾಡಲಾಗಿದೆ. ಸಚಿವ ಸಂಪುಟ ಸಭೆಗೆ ಶಾಸಕರು ಬರುವಂತಿಲ್ಲ. ಒಂದು ರೀತಿಯಲ್ಲಿ ಮಂಡಳಿಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಲಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು 20 ತಿಂಗಳು ಕಳೆದರೂ ಮಂಡಳಿ ರಚನೆಯಾಗಿಲ್ಲ. ಕನಿಷ್ಠ ನಾಲ್ಕು ಸಭೆಗಳನ್ನಾದರೂ ಮಾಡಬೇಕಾಗಿತ್ತು. ಆದರೆ, ಈವರೆವಿಗೂ ಒಂದೇ ಒಂದು ಸಭೆ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಂಡಳಿಗೆ ಆ ಭಾಗದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಬದಲಿಗೆ ಇಬ್ಬರಿಗೆ ಮಾತ್ರ ಪ್ರಾತಿನಿಧ್ಯ ನೀಡಲಾಗಿದೆ. ಮಂಡಳಿಯನ್ನು ಸಹ ರಚನೆ ಮಾಡಿಲ್ಲ. ಅನುದಾನವನ್ನು ಸಹ ಸಮರ್ಪಕವಾಗಿ ನೀಡಿಲ್ಲ. 2020-21ನೇ ಸಾಲಿಗೆ ಒಟ್ಟು 1500 ಕೋಟಿ ರು. ಘೋಷಿಸಿ ಪೈಕಿ 1,131 ಕೋಟಿ ರು. ನೀಡಲಾಗಿದೆ. ಆರ್ಥಿಕ ಇಲಾಖೆಯು ಅದಕ್ಕೂ ನಿರ್ಬಂಧ ಹಾಕಿತು. ಈ ಬಗ್ಗೆ ಪ್ರಶ್ನಿಸಿದಾಗ ಜನವರಿಯಲ್ಲಿ ಕಾಮಗಾರಿಗಳಿಗೆ 955 ಕೋಟಿ ರು. ಮಾತ್ರ ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.
ನೇಣು ಹಾಕಿಕೊಳ್ಳುವುದಾಗಿ ಸವಾಲು ಹಾಕಿದ ಸೋಮಣ್ಣ-ಖಂಡ್ರೆ
ಕಲ್ಯಾಣ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಸರ್ಕಾರ ಇದ್ದಾಗ 28 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ಭರ್ತಿ ಮಾಡಲಿಲ್ಲ. ಸುಮಾರು 40 ಸಾವಿರ ಹುದ್ದೆಗಳು ಖಾಲಿ ಇವೆ. ಕೋವಿಡ್‌ನಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಶಿಕ್ಷಣ ಇಲಾಖೆಯಲ್ಲಿ 13 ಸಾವಿರ ಹುದ್ದೆಗಳು ಖಾಲಿ ಇವೆ. ಆರೋಗ್ಯ ಇಲಾಖೆಯಲ್ಲಿಯೂ ಖಾಲಿ ಹುದ್ದೆಗಳಿವೆ. ಪ್ರವಾಹ ಪೀಡಿತರಿಗೆ ಸರಿಯಾಗಿ ಪರಿಹಾರ ತಲುಪಿಲ್ಲ. ವಸತಿ ನಿಗಮದಿಂದ ಫಲಾನುಭವಿಗಳಿಗೆ ಹಣ ಹೋಗಿಲ್ಲ. ಅಲ್ಲದೇ, ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿಯೂ ಅವ್ಯವಹಾರ ನಡೆದಿದೆ. ರೈತರ ತುಟಿಗೆ ತುಪ್ಪ ಹಚ್ಚುವ ಕೆಲಸ ಮಾಡಲಾಗಿದೆ ಎಂದು ಟೀಕಿಸಿದರು.
ಪುನಶ್ಚೇತನಕ್ಕೆ ಒತ್ತಾಯ
ಬಂದ್ ಆಗಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಮಾಡಬೇಕು, ರೈತರ ಬದುಕಿಗೆ ಅನುಕೂಲವಾಗಲಿದೆ ಎಂದು ಈಶ್ವರ್ ಖಂಡ್ರೆ ಒತ್ತಾಯಕ್ಕೆ ದನಿಗೂಡಿಸಿದ ರಾಜಶೇಖರ್ ಪಾಟೀಲ್, ಚುನಾವಣಾಪೂರ್ವದಲ್ಲಿ ಮುಖ್ಯಮಂತ್ರಿಗಳು ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಅಶ್ವಾಸನೆ ನೀಡಿದ್ದರು ಎಂದರು.
ಸೀಡಿ ಪ್ರಕರಣ ಸಿಜೆ ನೇತೃತ್ವದಲ್ಲಿ ತನಿಖೆ ನಡೆಸಿ
ಸಚಿವರ ಸೀಡಿ ಪ್ರಕರಣದ ತನಿಖೆಯನ್ನು ಎಸ್‌ಐಟಿ ಬದಲು ಮುಖ್ಯ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ತಂಡವೊಂದನ್ನು ರಚನೆ ಮಾಡಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದರು. ಎಸ್‌ಐಟಿ ಯಾವ ರೀತಿಯಲ್ಲಿ ವರದಿ ನೀಡಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗಾಗಿ ಮುಖ್ಯನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ತಂಡ ರಚನೆ ರಚಿಸಬೇಕು ಎಂದು ಆಗ್ರಹಿಸಿದರು.