ಕಚ್ಚಿಸಿಕೊಂಡ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಸ್ನೇಕ್‌ ವಿಶ್ವನಾಥ! ಬೆಚ್ಚಿದ ಆಸ್ಪತ್ರೆ ಸಿಬ್ಬಂದಿ

By Kannadaprabha NewsFirst Published Oct 22, 2020, 7:14 AM IST
Highlights

ಕಚ್ಚಿಸಿಕೊಂಡ ಹಾವಿನ ಜೊತೆಯೇ ವ್ಯಕ್ತಿಯೋರ್ವ ಆಸ್ಪತ್ರೆಗೆ ಬಂದಿದ್ದಾನೆ ವ್ಯಕ್ತಿ.. ಆ ಹಾವು ನೊಡಿ ಬೆಚ್ಚಿದ ಆಸ್ಪತ್ರೆ ಸಿಬ್ಬಂದಿ

ಹುಬ್ಬಳ್ಳಿ (ಅ.22): ಬೇರೆಯವರ ಮನೆಯಲ್ಲಿ ಬರುತ್ತಿದ್ದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದ ಸ್ನೇಕ್‌ ವಿಶ್ವನಾಥ ಅವರಿಗೆ ಮಂಗಳವಾರ ಮಧ್ಯಾಹ್ನ ನಾಗರಹಾವು ಕಚ್ಚಿದೆ. ಹಾವಿನ ಸಮೇತವೇ ಅವರು ಕಿಮ್ಸ್‌ಗೆ ಆಗಮಿಸಿ ದಾಖಲಾಗಿದ್ದಾರೆ. ಹಾವನ್ನು ನೋಡುತ್ತಿದ್ದಂತೆ ಕಿಮ್ಸ್‌ ಸಿಬ್ಬಂದಿಯೆಲ್ಲ ಹೌಹಾರಿದ್ದರು.

ಇಲ್ಲಿನ ಜಗದೀಶ ನಗರದ ನಿವಾಸಿ ವಿಶ್ವನಾಥ ಭಂಡಾರಿ ಎಂಬ ಯುವಕ ಕಳೆದ ಹಲವು ವರ್ಷಗಳಿಂದ ಹಾವು ಹಿಡಿಯುತ್ತಿದ್ದರು. ಯಾರಾದರೂ ಅವರಿಗೆ ಕರೆ ಮಾಡಿ ಹಾವು ಬಂದಿದೆ ಎಂದರೆ ಸಾಕು, ಅಲ್ಲಿಗೆ ತೆರಳಿ ಹಾವನ್ನು ಹಿಡಿದು ದೂರ ತೆಗೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದರು. ಅದರಂತೆ ಅವರ ಮನೆಯ ಸಮೀಪವೇ ಒಬ್ಬರ ಮನೆಗೆ ನಾಗರಹಾವು ನುಗ್ಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅವರು ಅಲ್ಲಿಗೆ ತೆರಳಿದ್ದಾರೆ. ಹಾವನ್ನು ಹಿಡಿದಿದ್ದಾರೆ. ಬಳಿಕ ಅದನ್ನು ಪ್ಲಾಸ್ಟಿಕ್‌ ಡಬ್ಬಿಯೊಳಗೆ ಹಾಕುವಾಗ ಅವರಿಗೆ ಕಚ್ಚಿದೆ. ಹೀಗಾಗಿ ಹಾವನ್ನು ಬೇರೆ ಕಡೆ ಬಿಡುವ ಗೋಜಿಗೆ ಹೋಗದೇ ವೈದ್ಯರು ನೋಡಿದರೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದುಕೊಂಡು ಅದರ ಸಮೇತವೇ ಕಿಮ್ಸ್‌ಗೆ ಆಗಮಿಸಿದ್ದಾರೆ.

ಈ ದ್ವೀಪಕ್ಕೆ ಹೋದವರು ಬದುಕಿ ಬರೋ ಚಾನ್ಸೇ ಇಲ್ಲ! ...

ಹೌಹಾರಿದ ಸಿಬ್ಬಂದಿ:  ಈತ ಡಬ್ಬಿಯಲ್ಲಿ ಹಾವು ತೆಗೆದುಕೊಂಡು ಬಂದಿದ್ದನ್ನು ನೋಡಿದ ಕಿಮ್ಸ್‌ನ ವೈದ್ಯರು, ದಾದಿಯರು, ಸಿಬ್ಬಂದಿಯೆಲ್ಲ ಹೌಹಾರಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಲು ಕೂಡ ಹೆದರಿ ಕೆಲ ನಿಮಿಷ ದೂರವೇ ಉಳಿದಿದ್ದಾರೆ. ತದನಂತರ ವೈದ್ಯರು, ಡಬ್ಬಿಯನ್ನು ದೂರವಿಟ್ಟು ಚಿಕಿತ್ಸೆ ನೀಡಿದ್ದಾರೆ.

ಸದ್ಯ ವಿಶ್ವನಾಥ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ತಾನು ನೂರಾರು ಹಾವುಗಳನ್ನು ಹಿಡಿದು ಬೇರೆ ಬೇರೆ ಪ್ರದೇಶಗಳಿಗೆ ಬಿಟ್ಟು ಬಂದಿದ್ದೇನೆ. ಆದರೆ ಇವತ್ತು ನಮ್ಮ ಏರಿಯಾದಲ್ಲಿಯೇ ಹಾವು ಬಂದಿತ್ತು. ಅದನ್ನು ಹಿಡಿದು ಡಬ್ಬಿಯೊಳಗೆ ಹಾಕುವಾಗ ಕಚ್ಚಿದೆ ಎಂದರು ವಿಶ್ವನಾಥ.

ಹಾವನ್ನು ವೈದ್ಯರು ಬೇರೆ ಪ್ರದೇಶಕ್ಕೆ ಬಿಟ್ಟು ಬರುವಂತೆ ಅವರೊಂದಿಗೆ ಬಂದಿದ್ದ ಸ್ನೇಹಿತರಿಗೆ ಹೇಳಿ ಕಳುಹಿಸಿದ್ದಾರೆ. ಸ್ನೇಹಿತರು ಹಾವನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.

click me!