ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’

By Kannadaprabha NewsFirst Published Oct 29, 2020, 8:07 AM IST
Highlights

ತ್ವರಿತ ಅಂಚೆ ವಿಲೇವಾರಿ| ಬೆಂಗಳೂರಿನ ಮ್ಯೂಸಿಯಂ ರಸ್ತೆ ಕಚೇರಿಯಲ್ಲಿ ಅಳವಡಿಕೆ| ದಿನದ 24 ತಾಸೂ ರಿಜಿಸ್ಟರ್ಡ್‌, ಸ್ಪೀಡ್‌ಪೋಸ್ಟ್‌ ಕಳಿಸಬಹುದು|ಗ್ರಾಹಕರು ಫೋನ್‌ ಪೇ, ಅಮೆಜಾನ್‌ ಸೇರಿದಂತೆ ಯಾವುದೇ ಆ್ಯಪ್‌ ಮೂಲಕವೂ ಹಣ ಪಾವತಿಸಬಹುದು| 

ಬೆಂಗಳೂರು(ಅ.29): ಕೊರೋನಾ ಸಂದರ್ಭದಲ್ಲಿ ಗ್ರಾಹಕರ ಸಮಯ ಉಳಿತಾಯದ ಜತೆಗೆ ತ್ವರಿತ ಅಂಚೆ ವಿಲೇವಾರಿಗೆ ಅನುಕೂಲವಾಗುವಂತೆ ಕರ್ನಾಟಕ ವಲಯ ಅಂಚೆ ಇಲಾಖೆಯು ದೇಶದಲ್ಲೇ ಮೊದಲ ಬಾರಿಗೆ ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’ ಯಂತ್ರವನ್ನು ಪರಿಚಯಿಸಿದೆ.

ಎಟಿಎಂ ಮಾದರಿಯಲ್ಲಿರುವ ಈ ಯಂತ್ರವನ್ನು ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಪೂರ್ವ ವಲಯದ ಅಂಚೆ ಕಚೇರಿಯಲ್ಲಿ ಅಳವಡಿಸಲಾಗಿದೆ. ಜತೆಗೆ ಅಂಚೆ ಇಲಾಖೆಯು ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’ ಆ್ಯಪ್‌ ಸಹ ಅಭಿವೃದ್ಧಿಪಡಿಸಿದ್ದು, ಬುಧವಾರ ಗ್ರಾಹಕರ ಸೇವೆಗೆ ಲಭ್ಯವಾಗಿಸಿದೆ. ಈ ಆ್ಯಪ್‌ ಮೂಲಕ ಗ್ರಾಹಕರು ಅಂಚೆ ಇಲಾಖೆಗೆ ತೆರಳಿ ಗಂಟೆಗಟ್ಟಲೆ ಕಾಯುವ ಬದಲು ತಾವು ಇದ್ದಲಿಂದಲೇ ಸುಗಮವಾಗಿ ಅಂಚೆ ವ್ಯವಹಾರ ಮಾಡಬಹುದು. ‘ಡಿಜಿಟಲ್‌ ಇಂಡಿಯಾ’ ಯೋಜನೆಯಡಿ ಸಿ-ಡಾಕ್‌ ಬೆಂಗಳೂರು ಮತ್ತು ಕರ್ನಾಟಕ ವೃತ್ತ ಅಂಚೆ ಇಲಾಖೆ ಸಹಯೋಗದಲ್ಲಿ ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’ ರೂಪಿಸಲಾಗಿದೆ.

ಕಾರ್ಯನಿರ್ವಹಣೆ ಹೇಗೆ?:

ಎಟಿಎಂ ಯಂತ್ರದ ರೀತಿಯಲ್ಲಿ ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’ ಯಂತ್ರ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಕೇವಲ ಸ್ಪೀಡ್‌ ಪೋಸ್ವ್‌ ಅಥವಾ ರಿಜಿಸ್ಟರ್ಡ್‌ ಪೋಸ್ಟ್‌ಗಳನ್ನು ಮಾತ್ರವೇ ಕಳುಹಿಸಬಹುದು. ಮೊದಲಿಗೆ ಗ್ರಾಹಕರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಪಾರ್ಸಲ್‌ ಕಳುಹಿಸುವ ಗ್ರಾಹಕರು ಆ್ಯಪ್‌ನಲ್ಲಿ ತಮ್ಮ ವಿವರಗಳನ್ನು ದಾಖಲಿಸಿ, ಸ್ಪೀಡ್‌ ಅಥವಾ ರಿಜಿಸ್ಟರ್‌ ಪೋಸ್ಟ್‌ ಎಂಬುದನ್ನು ದೃಢಪಡಿಸಬೇಕು. ನಂತರ ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಆರು ಸಂಖ್ಯೆಯ ಟೋಕನ್‌ ನಂಬರ್‌ ಬರುತ್ತದೆ. ಅದನ್ನು ತೆಗೆದುಕೊಂಡು ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌ ಯಂತ್ರವಿರುವಲ್ಲಿಗೆ ತೆರಳಿ ಯಂತ್ರದಲ್ಲಿ ಆ ಟೋಕನ್‌ ನಂಬರ್‌ ದಾಖಲಿಸಬೇಕು. ಬಳಿಕ ಬಾರ್‌ ಕೋಡ್‌ ಸ್ಟಿಕ್ಕರ್‌ ಬರುತ್ತದೆ. ಅದನ್ನು ನಿಮ್ಮ ಪಾರ್ಸೆಲ್‌ ಮೇಲೆ ಅಂಟಿಸಿ ಯಂತ್ರದಲ್ಲಿ ಸ್ಕಾನ್‌ ಮಾಡಿದರೆ ಅದರ ತೂಕ ಮತ್ತು ಕ್ರಮಿಸಬೇಕಾದ ದೂರವನ್ನು ಆಧರಿಸಿ ಎಷ್ಟುಹಣ ಪಾವತಿಸಬೇಕು ಎಂಬುದನ್ನು ಪರದೆಯ ಮೇಲೆ ತೋರಿಸುತ್ತದೆ.

ಹುಬ್ಬಳ್ಳಿ ಪೋಸ್ಟಲ್‌ ಸ್ಟೋರ್‌ ಬೆಂಗಳೂರಲ್ಲಿ ವಿಲೀನ: ಸಾರ್ವಜನಿಕರ ಆಕ್ರೋಶ

ಗ್ರಾಹಕರು ಫೋನ್‌ ಪೇ, ಅಮೆಜಾನ್‌ ಸೇರಿದಂತೆ ಯಾವುದೇ ಆ್ಯಪ್‌ ಮೂಲಕವೂ ಹಣ ಪಾವತಿಸಬಹುದು. ಬಳಿಕ ಗ್ರಾಹಕರಿಗೆ ರಸೀದಿ ಬರುತ್ತದೆ. ಅಲ್ಲಿಗೆ ವಹಿವಾಟು ಕಾರ್ಯ ಮುಗಿಯಲಿದೆ. ನಂತರ ಅಂಚೆ ಇಲಾಖೆ ಸಿಬ್ಬಂದಿ ಅದನ್ನು ತಲುಪಿಸುವ ಕಾರ್ಯ ಮಾಡಲಿದ್ದಾರೆ. ಇಂಡಿಯಾ ಪೋಸ್ಟ್‌ ವೆಬ್‌ಸೈಟ್‌ನಲ್ಲಿ ತಮ್ಮ ಪೋಸ್ಟ್‌ ಬಗೆಗಿನ ಮಾಹಿತಿ ಪಡೆಯಬಹುದು.

24 ಗಂಟೆಯೂ ಓಪನ್‌:

ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌ನಲ್ಲಿ ದಿನದ 24 ಗಂಟೆಯೂ ಪೋಸ್ಟ್‌ ಕಳುಹಿಸಬಹುದು. ಇದು ಪ್ರಥಮ ಪ್ರಯೋಗವಾಗಿದೆ. ಪ್ರಾಯೋಗಿಕ ಯಶಸ್ಸು ಆಧರಿಸಿ ಹಂತ ಹಂತವಾಗಿ ವಿವಿಧೆಡೆ ಯಂತ್ರ ಅಳವಡಿಸಲಾಗುವುದು ಎಂದು ಅಂಚೆ ಇಲಾಖೆ ಹಿರಿಯ ಅಧೀಕ್ಷಕ (ಪೂರ್ವ ವಿಭಾಗ) ಬಿ.ಎಸ್‌. ಚಂದ್ರಶೇಖರ್‌ ತಿಳಿಸಿದರು.
 

click me!