ಕಾರಲ್ಲೂ ಕಡ್ಡಾಯ ಮಾಸ್ಕ್‌: ಮೆತ್ತಗಾದ ಬಿಬಿಎಂಪಿ ಆಯುಕ್ತ..!

By Kannadaprabha NewsFirst Published Oct 29, 2020, 7:10 AM IST
Highlights

ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಿಯಮ ಸಡಿಲಗೊಳಿಸಲು ಮುಂದಾದ ಆಯುಕ್ತ ಮಂಜುನಾಥ ಪ್ರಸಾದ್‌| ನಿಯಮ ಪರಾಮರ್ಶೆ ನಡೆಸುವಂತೆ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಲಾಗುವುದು| ಖಜಾನೆ ತುಂಬಿಸುವ ಉದ್ದೇಶವಿಲ್ಲ| 

ಬೆಂಗಳೂರು(ಅ.29): ಕಾರಿನಲ್ಲಿ ಒಬ್ಬರೇ ಇದ್ದರೂ, ಕಿಟಕಿ ಗಾಜು ಮುಚ್ಚಿದ್ದರೂ ಮಾಸ್ಕ್‌ ಧರಿಸಬೇಕು ಎಂಬ ನೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಪುನರ್‌ ಪರಾಮರ್ಶೆ ನಡೆಸುವಂತೆ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಲಿದ್ದು, ಇಲಾಖೆಯ ಸೂಚನೆಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದ್ದಾರೆ.

ಬುಧವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಮಾಸ್ಕ್‌ ಧರಿಸುವ ಕುರಿತು ಬಿಬಿಎಂಪಿ ಆದೇಶದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧವಾಗುತ್ತಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಆದೇಶವನ್ನು ಆರೋಗ್ಯ ಇಲಾಖೆಗೆ ಕಳುಹಿಸಿಕೊಡಲಾಗುವುದು. ಅಂತಿಮವಾಗಿ ಆರೋಗ್ಯ ಇಲಾಖೆಯ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರು ಅಥವಾ ಬೈಕ್‌ ಚಲಾಯಿಸುವವರಿಗೆ ಸೋಂಕಿನ ಲಕ್ಷಣ ಇದ್ದು, ಅವರು ವಾಹನ ನಿಲ್ಲಿಸಿದ ಸಂದರ್ಭದಲ್ಲಿ ಸೋಂಕು ಹಬ್ಬುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಸಹ ವಿಪತ್ತು ನಿರ್ವಹಣೆ ಕಾಯ್ದೆಯಡಿ ತೆಗೆದುಕೊಂಡಿರುವ ಕ್ರಮಗಳಲ್ಲಿ ಮನೆಯಿಂದ ಸಾರ್ವಜನಿಕರು ಹೊರಗೆ ಬರುತ್ತಿದ್ದಂತೆ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ನಿರ್ದೇಶನ ನೀಡಿದೆ. ಸುಪ್ರೀಂಕೋರ್ಟ್‌ ಸಹ ಕಾರುನಲ್ಲಿ ಹೋಗುತ್ತಿದ್ದರೂ, ಸಹ ಅದನ್ನು ಸಾರ್ವಜನಿಕ ಪ್ರದೇಶ ಎಂದೇ ಪರಿಗಣಿಸಬೇಕು ನಿರ್ದೇಶನ ನೀಡಿದೆ. ಈ ಎಲ್ಲ ಕಾರಣಗಳಿಂದ ಒಬ್ಬರೇ ವಾಹನ ಚಲಾಯಿಸುತ್ತಿದ್ದರೂ, ಮಾಸ್ಕ್‌ ಧರಿಸುವುದು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ. ಈ ಬಗ್ಗೆಯೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಕಾರಿನಲ್ಲಿ ಒಬ್ಬರೇ ಇದ್ದಾಗ ಮಾಸ್ಕ್ ಧರಿಸಬೇಕಿಲ್ಲ: ಸುಧಾಕರ್ ಸ್ಪಷ್ಟನೆ

ಖಜಾನೆ ತುಂಬಿಸುವ ಉದ್ದೇಶವಿಲ್ಲ:

ನಗರದಲ್ಲಿ ಮಾಸ್ಕ್‌ ಧರಿಸದೆ ಇರುವವರಿಗೆ ದಂಡ ವಿಧಿಸುವ ಮೂಲಕ ಖಜಾನೆ ತುಂಬಿಸಿಕೊಳ್ಳಬೇಕು ಎನ್ನುವ ಯಾವ ಉದ್ದೇಶವೂ ಬಿಬಿಎಂಪಿಗೆ ಇಲ್ಲ. ನಗರದಲ್ಲಿ ಅಂದಾಜು 1.30 ಕೋಟಿ ಜನರಿದ್ದಾರೆ. ಇದರಲ್ಲಿ ನಿತ್ಯ ಒಂದರಿಂದ 1,500 ಜನರಿಗೆ ಮಾತ್ರ ದಂಡ ವಿಧಿಸಲಾಗುತ್ತಿದೆ. ಎಲ್ಲರೂ ಮಾಸ್ಕ್‌ ಧರಿಸಿದರೆ ದಂಡ ವಿಧಿಸುವ ಪ್ರಮೇಯವೇ ಬರುವುದಿಲ್ಲ. ಯಾರು ಮಾಸ್ಕ್‌ ಧರಿಸುತ್ತಿಲ್ಲವೋ ಅವರಿಗೆ ಮಾತ್ರ ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದರು.

ದಂಡ ವಿಧಿಸುವ ಗುರಿ ವಾಪಸ್‌

‘ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಮಾಡುವ ಕನಿಷ್ಠ 20 ಜನರಿಗೆ ದಂಡ ವಿಧಿಸಬೇಕು’ ಎಂದು ಬಿಬಿಎಂಪಿಯ ದಕ್ಷಿಣ ವಲಯದ ಸಂಯೋಜನಾಧಿಕಾರಿ ಹಾಗೂ ಹಿರಿಯ ಐಎಎಸ್‌ ಅಧಿಕಾರಿ ಮುನೀಶ್‌ ಮೌದ್ಗಿಲ್‌ ಅವರ ಆದೇಶವನ್ನು ಹಿಂಪಡೆಯಲಾಗುವುದು. ಸೋಂಕು ತಡೆಗೆ ಮಾಸ್ಕ್‌ ಧರಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದಷ್ಟೇ ನಮ್ಮ ಗುರಿಯಾಗಿದೆ. ದಂಡ ಸಂಗ್ರಹ ಮಾಡುವುದು ಉದ್ದೇಶವಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್‌ ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.
 

click me!