ಬಿಬಿಎಂಪಿಯ ಮತ್ತಷ್ಟು ಶಾಲಾ ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌!

By Kannadaprabha News  |  First Published Nov 11, 2024, 11:23 AM IST

ಬಿಬಿಎಂಪಿಯ ಮತ್ತಷ್ಟು ಶಾಲಾ ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸುವುದಕ್ಕೆ ಯೋಜನೆ ರೂಪಿಸಿದ್ದು, ಅದಕ್ಕಾಗಿ 1 .80 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. 


ವಿಶ್ವನಾಥ್ ಮಲೆಬೆನ್ನೂರು 

ಬೆಂಗಳೂರು (ನ.11): ಬಿಬಿಎಂಪಿಯ ಮತ್ತಷ್ಟು ಶಾಲಾ ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸುವುದಕ್ಕೆ ಯೋಜನೆ ರೂಪಿಸಿದ್ದು, ಅದಕ್ಕಾಗಿ 1.80 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಬಿಬಿಎಂಪಿಯ ಶಾಲಾ ವಿದ್ಯಾರ್ಥಿಗಳಿಗೆ ಆಧುನಿಕ ಹಾಗೂ ಡಿಜಿಟಲ್‌ ತಂತ್ರಜ್ಞಾನದೊಂದಿಗೆ ಕಲಿಕೆ ನೀಡುವ ಉದ್ದೇಶದಿಂದ 2020-21ನೇ ಸಾಲಿನಿಂದ ಸ್ಮಾರ್ಟ್‌ ಕ್ಲಾಸ್‌ ಆರಂಭಿಸಲಾಗಿದೆ. ಈಗಾಗಲೇ ಬಿಬಿಎಂಪಿಯ 10 ಶಾಲಾ ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಇದೀಗ ಇನ್ನೂ10 ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸುವುದಕ್ಕೆ ಯೋಜನೆ ರೂಪಿಸಲಾಗಿದೆ.

Tap to resize

Latest Videos

ಬಿಬಿಎಂಪಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸ್ಮಾರ್ಟ್‌ ಶಿಕ್ಷಣಕ್ಕೆ 2 ಕೋಟಿ ರು. ಮೀಸಲಿಡಲಾಗಿದ್ದು, ಆ ಪೈಕಿ ಹೊಸದಾಗಿ 10 ಶಾಲಾ-ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸುವುದಕ್ಕೆ 1.80 ಕೋಟಿ ರು. ಉಳಿದ 20 ಲಕ್ಷ ರು. ಅನ್ನು ಈ ಹಿಂದೆ ಆರಂಭಿಸಲಾಗಿದ್ದು ಸ್ಮಾರ್ಟ್‌ ಕ್ಲಾಸ್‌ನ ದುರಸ್ಥಿ ಕಾಮಗಾರಿಗೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ.

ಮುಡಾ ತೀರ್ಪು ರಾಜಕೀಯ ಪ್ರೇರಿತ ಹೇಳಿಕೆ: ಜಮೀರ್‌ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಗೌರ್ನರ್‌ ಸೂಚನೆ

ಬಿಬಿಎಂಪಿಯು 93 ಶಿಶು ವಿಹಾರ, 16 ಪ್ರಾಥಮಿಕ ಶಾಲೆ, 33 ಪ್ರೌಢಶಾಲೆ, 19 ಪದವಿ ಪೂರ್ವ ಕಾಲೇಜು, 4 ಪದವಿ ಹಾಗೂ 2 ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ನಡೆಸುತ್ತಿದೆ. ಈ ಪೈಕಿ ಸ್ಮಾರ್ಟ್‌ ಕ್ಲಾಸ್‌ ಶಿಕ್ಷಣ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಕೆ ಮಾಡುವುದಕ್ಕೆ ಸೂಚಿಸಲಾಗಿತ್ತು. ಈ ವೇಳೆ 3 ಪ್ರಾಥಮಿಕ ಶಾಲೆ, 6 ಪ್ರೌಢಶಾಲೆ ಹಾಗೂ ಒಂದು ಪದವಿ ಪೂರ್ವ ಕಾಲೇಜಿನಿಂದ ಸ್ಮಾರ್ಟ್‌ ಕ್ಲಾಸ್‌ ಆರಂಭಿಸುವುದಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ತಲಾ 3 ಲಕ್ಷ ರು. ವೆಚ್ಚದಲ್ಲಿ 60 ಸ್ಮಾರ್ಟ್‌ ಬೋರ್ಡ್‌ಗಳನ್ನು 10 ಶಾಲಾ ಕಾಲೇಜುಗಳಲ್ಲಿ ಅಳವಡಿಕೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ.

ಶೇ.50 ರಷ್ಟು ಸ್ಮಾರ್ಟ್‌ ಬೋರ್ಡ್‌ ದುರಸ್ತಿ:  ಈ ಹಿಂದೆ ಬಿಬಿಎಂಪಿಯ 10 ಶಾಲಾ ಕಾಲೇಜುಗಳಲ್ಲಿ ಅಳವಡಿಸಲಾಗಿದ್ದ 87 ಸ್ಮಾರ್ಟ್‌ ಬೋರ್ಡ್‌ಗಳ ಪೈಕಿ 45 ಸ್ಮಾರ್ಟ್‌ ಬೋರ್ಡ್‌ ಕೆಟ್ಟು ಹೋಗಿವೆ. ಕ್ಲೀವ್ ಲ್ಯಾಂಡ್‌ ಟೌನ್‌ ಶಾಲೆಯಲ್ಲಿ ಅಳವಡಿಕೆ ಮಾಡಲಾಗಿದ್ದ 10ಕ್ಕೆ 10 ಸ್ಮಾರ್ಟ್‌ ಬೋರ್ಡ್‌ಗಳು ಕೆಟ್ಟು ಹೋಗಿವೆ. ಬೈರಸಂದ್ರ ಪ್ರೌಢ ಶಾಲೆಯ 13 ಸ್ಮಾರ್ಟ್‌ ಬೋರ್ಡ್‌ಗಳ ಪೈಕಿ 10 ಸ್ಮಾರ್ಟ್‌ ಬೋರ್ಡ್‌ ಕೆಟ್ಟಿವೆ. ಹೀಗೆ ಹಲವು ಸ್ಮಾರ್ಟ್‌ ಬೋರ್ಡ್‌ಗಳು ಮೂಲೆ ಸೇರಿವೆ.

ಯಾವ ಶಾಲೆಗೆ ಎಷ್ಟು ಹೊಸ ಸ್ಮಾರ್ಟ್‌ ಬೋರ್ಡ್‌?
ಶಾಲೆ ಸ್ಮಾರ್ಟ್ ಬೋರ್ಡ್‌ ಸಂಖ್ಯೆ
ಹಿ.ಪ್ರಾ.ಶಾಲೆ ನೀಲಸಂದ್ರ 5
ಬಿಬಿಎಂಪಿ ಪ್ರೌಢಶಾಲೆ ಡಿಸ್ಟೂನ್ಸರಿ ರಸ್ತೆ 5
ಪ್ರೌಢ ಶಾಲೆ ಜಯಮಹಲ್‌ 3
ಬಿಬಿಎಂಪಿ ಪ್ರೌಢಶಾಲೆ ದಿನ್ನೂರು 5
ಹಿ.ಪ್ರಾ.ಶಾಲೆ ಪಂಚಶೀಲನಗರ 8
ಪ್ರೌಢಶಾಲೆ ಬೈರಸಂದ್ರ 5
ಪ್ರಾಥಮಿಕ ಮತ್ತು ಪ್ರೌಢಶಾಲೆ ಕೊದಂಡರಾಮಪುರ 10
ಪ್ರೌಢಶಾಲೆ ಬಸವನಗುಡಿ 8
ಪ್ರೌಢಶಾಲೆ ಕೆಂಪೇಗೌಡ ನಗರ 3
ಒಟ್ಟು 60

ಶ್ಯೂರಿಟಿ ಇಲ್ಲದೆ ಸಾಲ ಕೊಡಿಸುವುದಾಗಿ ವಂಚನೆ: ಮೂವರ ಮೇಲೆ ಎಫ್‌ಐಆರ್‌

ಈ ಹಿಂದೆ ಆರಂಭಿಸಿ ಸ್ಮಾರ್ಟ್‌ ಕ್ಲಾಸ್‌ ಶಾಲೆಗಳ ವಿವರ: ಶ್ರೀರಾಮಪುರ ಪ್ರೌಢಶಾಲೆ, ಕೋದಂಡರಾಮಪುರ ಪ್ರೌಢಶಾಲೆ, ಬೈರಸಂದ್ರ ಪ್ರೌಢಶಾಲೆ, ಪಿಳ್ಳಣ್ಣ ಗಾರ್ಡ್‌ನ್‌, ಮಾಗಡಿ ರಸ್ತೆ ಪ್ರೌಢ ಶಾಲೆ, ಅಶೋಕನಗರ (ಬಸವನಗುಡಿ) ಪ್ರೌಢಶಾಲೆ, ಕ್ಲೀವ್‌ ಲ್ಯಾಂಡ್‌ ಟೌನ್‌ ಬಾಲಕಿಯರ ಪ್ರೌಢಶಾಲೆ, ಶಕ್ತಿಗಣಪತಿನಗರ ಪ್ರೌಢಶಾಲೆ, ರಾಮಮೋಹನಪುರ ಪದವಿ ಪೂರ್ವ ಕಾಲೇಜು ಹಾಗೂ ಕಸ್ತೂರಿ ಬಾ ನಗರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು.

click me!