ಕನ್ನಡಿಗ ಯುವಕನೊಬ್ಬ 500 ರೂ. ನೋಟುಗಳಿಂದ ಮಾಡಿದ ಅಂಗಿಯನ್ನು ಧರಿಸಿ ಜಾತ್ರೆಯಲ್ಲಿ ಸಂಚರಿಸಿದ್ದಾನೆ. ಚಿತ್ರ ಬಾನುಕೋಟಿ ಗ್ರಾಮದಲ್ಲಿ ನಡೆದ ರಥೋತ್ಸವದಲ್ಲಿ ಕಲ್ಲಪ್ಪ ತಳವಾರ್ ಎಂಬ ಯುವಕ ಈ ವಿಭಿನ್ನ ಪ್ರಯತ್ನ ಮಾಡಿದ್ದಾನೆ.
ಬಾಗಲಕೋಟೆ (ನ.10): ಮಹಾರಾಷ್ಟ್ರದ ಮುಂಬೈ, ಪುಣೆ ಸೇರಿದಂತೆ ಕೆಲವೆಡೆ ಮೈಮೇಲೆ ಕೆಜಿಗಟ್ಟಲೇ ಬಂಗಾರ ಹಾಕಿಕೊಂಡು ಜಾತ್ರೆ, ವೇದಿಕೆ ಕಾರ್ಯಕ್ರಮಗಳನ್ನು ಕಾಣಿಸಿಕೊಳ್ಳುವುದನ್ನು ಕೆಲವರು ಹವ್ಯಾಸ ಮಾಡಿಕೊಂಡಿದ್ದಾರೆ. ಆದರೆ, ಇಲ್ಲೊಬ್ಬ ಕನ್ನಡಿಗ ಬಾಗಲಲೋಟೆ ಜಿಲ್ಲೆಯ ಗ್ರಾಮವೊಂದರಲ್ಲಿ ಕಾಸಿನಿಂದ ಮಾಡಿ ಅಂಗಿಯನ್ನು ಧರಿಸಿಕೊಂಡು ಓಡಾಡುತ್ತಾ ಜಾತ್ರೆಯಲ್ಲಿ ನೆರೆದಿದ್ದ ಜನರ ಗಮನ ತನ್ನತ್ತ ಸೆಳೆದಿದ್ದಾರೆ. ಇನ್ನು ಹಲವರು ಈತನ ಫೋಟೋ ಹಾಗೂ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿತ್ರ ಬಾನುಕೋಟಿ ಗ್ರಾಮದಲ್ಲಿ ನಡೆದಿದೆ. ಈ ಚಿತ್ರಭಾನುಕೊಟಿ ಗ್ರಾಮದಲ್ಲಿ ನಡೆದ ಸಚ್ಚಿದಾನಂದ ಸಹಜಾನಂದ ರಾಮಾರೂಢ ಸ್ವಾಮೀಜಿಯವರ ಮಹಾರಥೋತ್ಸವ ವೇಳೆ, ಇದೇ ಗ್ರಾಮದ ಕಲ್ಲಪ್ಪ ತಳವಾರ್ ಎಂಬ ಯುವಕ 500 ರೂ. ನೋಟುಗಳಿಂದ ಮಾಡಿದ ಅಂಗಿಯನ್ನು ತೊಟ್ಟು ಜಾತ್ರೆಯಲ್ಲಿ ಸಂಚಾರ ಮಾಡಿದ್ದಾನೆ. ತಮ್ಮ ಗ್ರಾಮದಲ್ಲಿ ರಾಮರೂಢ ಸ್ವಾಮೀಜಿಯ ಅದ್ಧೂರಿ ರಥೋತ್ಸವ ನಡೆಯುವ ಹಿನ್ನೆಲೆಯಲ್ಲಿ ಸುತ್ತಲಿನ 10ಕ್ಕೂ ಅಧಿಕ ಗ್ರಾಮಸ್ಥರು ಇಲ್ಲಿಗೆ ಆಗಮಿಸುತ್ತಾರೆ. ಜಾತ್ರೆಯ ವೇಳೆ ವಿಭಿನ್ನವಾಗಿ ಕಾಣಿಸಿಕೊಂಡು ಜನರ ಗಮನವನ್ನು ಸೆಳೆಯಬೇಕು ಎಂಬುದು ಈತನ ಉದ್ದೇಶವಾಗಿತ್ತು. ಆದ್ದರಿಂದ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾಗಿ ತಿಳಿಸಿದ್ದಾನೆ.
undefined
ಇದನ್ನೂ ಓದಿ: ಊಟ ಕೊಡದೇ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಹೆಂಡ್ತಿಯ, ಉಸಿರು ನಿಲ್ಲಿಸಿದ ಗಂಡ!
ಉತ್ತರ ಕರ್ನಾಟಕ ಮೂಲದ ಗೋಲ್ಡ್ ಸುರೇಶ್ ಮೈಮೇಲೆ ಕೆಜಿಗಟ್ಟಲೆ ಚಿನ್ನ ಧರಿಸಿ ಓಡಾಡುತ್ತಾ ತಾನು ಬಂಗಾರದ ಮನುಷ್ಯ ಎಂದು ತೋರಿಸಿಕೊಂಡು ರಾಜ್ಯಾದ್ಯಂತ ವೈರಲ್ ಆಗಿದ್ದನು. ಇದರ ಬೆನ್ನಲ್ಲಿಯೇ ಈತನ ವಿಚಿತ್ರ ಹಾಗೂ ವಿಭಿನ್ನ ಹವ್ಯಾಸವನ್ನು ಗಮನಿಸಿ ಕಲರ್ಸ್ ಕನ್ನಡ ವಾಹಿನಿಯಿಂದ ಬಿಗ್ ಬಾಸ್ ಸ್ಪರ್ಧೆಗೆ ಆಹ್ವಾನಿಸಿತ್ತು. ಇದೀಗ ಬಿಗ್ ಬಾಸ್ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ಉತ್ತಮ ಆಟವನ್ನು ಆಡುತ್ತಿದ್ದಾರೆ. ಇದರಿಂದ ಪ್ರಭಾವಿತನಾದ ಈ ಕಲ್ಲೇಶ್ ತಳವಾರ ತಾನೂ ವಿಭಿನ್ನವಾಗಿ ಕಾಣಿಸಿಕೊಳ್ಳಲು ಪ್ರಯತ್ನ ಮಾಡಿದ್ದು, ತನ್ನ ಬಳಿ ದೊಡ್ಡ ಮಟ್ಟದಲ್ಲಿ ಬಂಗಾರ ಇಲ್ಲದ ಕಾರಣ ಇರುವ ಹಣದಲ್ಲಿಯೇ ಜನರನ್ನು ತನ್ನತ್ತ ಸೆಳೆಯಲು ನೋಟಿನಿಂದ ತಯಾರಿಸಿದ ಅಂಗಿಯನ್ನು ಧರಿಸಲು ಮುಂದಾಗಿದ್ದಾನೆ.
ಮನೆಯಲ್ಲಿದ್ದ 500 ರೂ. ಮುಖಬೆಲೆಯ 50,000 ರೂ. ಮೌಲ್ಯದ ನೋಟುಗಳನ್ನು ತೆಗೆದುಕೊಂಡು ತಾನು ಜಾತ್ರೆಗೆ ಹಾಕಲು ತೆಗೆದುಕೊಂಡಿದ್ದ ಹೊಸ ಅಂಗಿಗೆ ಸ್ಟಿಕ್ ಮಾಡಿದ್ದಾನೆ. ಅಂಗಿಗೆ 500 ರೂ. ಮುಖಬೆಲೆಯ ನೋಟುಗಳನ್ನು ಅಂಟಿಸಿ ಊರಿನಲ್ಲಿ ಮೆರವಣಿಗೆ ಹೋಗಲು ಮುಂದಾಗಿದ್ದಾನೆ. ಆದರೆ, ಊರಿನಲ್ಲಿ ಜಾತ್ರೆ ಹಾಗೂ ರಥೋತ್ಸವ ಇರುವ ಹಿನ್ನೆಲೆಯಲ್ಲಿ ಯಾವುದೇ ವಾಹನ ಅಥವಾ ಎತ್ತಿನ ಗಾಡಿಗಳನ್ನು ಕೊಂಡೊಯ್ಯಲು ಅವಕಾಶ ಇರುವುದಿಲ್ಲ. ಹೀಗಾಗಿ, ಕೆಲವು ಸಂಗಡಿಗರೊಂದಿಗೆ ಸೇರಿಕೊಂಡು ಈ ನೋಟಿನ ಅಂಗಿಯನ್ನು ಧರಿಸಿ ಜಾತ್ರೆಯಲ್ಲಿ ಹೋಗಿಬರಲು ನಿರ್ಧರಿಸಿದ್ದಾನೆ.
ಇದನ್ನೂ ಓದಿ: ಕಾರಿಗೆ ಗುದ್ದುವ ಮುನ್ನ ಇಲ್ನೋಡಿ ಸ್ವಾಮಿ! ಇನ್ನೂ ಇಎಂಐ ಬಾಕಿಯಿದೆ!
ಅದರಂತೆ, 50,000 ರೂ. ಮೌಲ್ಯದ ನೋಟುಗಳಿಂದ ನಿರ್ಮಿಸಲಾದ ಅಂಗಿಯನ್ನು ತೊಟ್ಟು ಜಾತ್ರೆಯ ಬೀದಿಯಲ್ಲಿ ಹೆಜ್ಜೆ ಹಾಕಿದ್ದಾನೆ. ಆತನ ಸುತ್ತಲೂ ಇರುವವರು ಜೋರಾಗಿ ಸದ್ದು ಮಾಡುವ ಪೀಪಿಯನ್ನು ಊದುತ್ತಾ, ಶಿಳ್ಳೆ, ಕೇಕೆ ಹಾಕುವವರ ನಡುವೆ ಮುಖಕ್ಕೆ ಹೆಲ್ಮೆಟ್ ಧರಿಸಿ ಸಾಗಿದ್ದಾನೆ. ಇನ್ನು ಜಾತ್ರೆಯಲ್ಲಿ ಸೇರಿದ್ದ ಜನರು ಈ ಯುವಕನನ್ನು ನೋಡಿ ನಗಾಡಿದ್ದಾರೆ. ಕೆಲವರು ಈ ಹಣ ನಮಗೆ ಸಿಗಬಾರದೇ ಎಂದುಕೊಂಡರೆ, ಇನ್ನು ಕೆಲವರು ಈತನಿಗೆ ಹುಚ್ಚಾಟ ಶುರುವಾಗಿದೆ ಎಂದು ಕೋಡಗೊಂಡಿದ್ದಾರೆ.