DKS ಪುತ್ರಿ ನಿಶ್ಚಿತಾರ್ಥಕ್ಕೆ ಯಾರಿಗೂ ಆಹ್ವಾನ ಇರಲಿಲ್ಲ : SMK ಆಹ್ವಾನದ ಮೇರೆಗೆ ಆಗಮಿಸಿದ್ದ ಬಿಜೆಪಿಗರು

By Kannadaprabha NewsFirst Published Nov 21, 2020, 11:22 AM IST
Highlights

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ನಿಶ್ಚಿತಾರ್ಥಕ್ಕೆ ಯಾವುದೇ ನಾಯಕರನ್ನೂ ಆಹ್ವಾನಿಸಿರಲಿಲ್ಲ. ಆದರೆ ಎಸ್‌ ಎಂಕೆ ಆಹ್ವಾನದ ಮೇರೆಗೆ ಬಿಜೆಪಿಗರು ಆಗಮಿಸಿದ್ದರು. 

ಬೆಂಗಳೂರು (ನ.21):  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪುತ್ರಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೊರೋನಾ ನಿಯಮಾವಳಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಸೇರಿದಂತೆ ಯಾವುದೇ ಪಕ್ಷದ ನಾಯಕರನ್ನೂ ಡಿ.ಕೆ. ಶಿವಕುಮಾರ್‌ ಆಹ್ವಾನಿಸಿರಲಿಲ್ಲ ಎಂದು ತಿಳಿದುಬಂದಿದೆ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಮೊಮ್ಮಗ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗ್ಡೆ ಪುತ್ರ ಅಮತ್ರ್ಯ ಹೆಗ್ಡೆ ಅವರೊಂದಿಗೆ ಡಿ.ಕೆ. ಶಿವಕುಮಾರ್‌ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ ಗುರುವಾರ ನೆರವೇರಿದೆ.

ಡಿಕೆಶಿ ಕಾಂಗ್ರೆಸ್‌ಗೆ ಕರೆದಿದ್ದಾರೆ : ಜೆಡಿಎಸ್‌ ನಾಯಕ ಮಧು ಬಂಗಾರಪ್ಪ

ಈ ವೇಳೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿ ಬಿಜೆಪಿಯ ಹಲವು ನಾಯಕರು ಭಾಗವಹಿಸಿದ್ದರು. ಆದರೆ ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿರಲಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಡಿ.ಕೆ. ಶಿವಕುಮಾರ್‌ ಕುಟುಂಬದ ಮೂಲಗಳು ಸ್ಪಷ್ಟನೆ ನೀಡಿದ್ದು, ಕುಟುಂಬ ಸದಸ್ಯರು ಹಾಗೂ ಆಪ್ತ ವಲಯ ಹೊರತುಪಡಿಸಿ ರಾಜಕೀಯ ಕ್ಷೇತ್ರದ ಯಾರೊಬ್ಬರನ್ನೂ ಡಿ.ಕೆ. ಶಿವಕುಮಾರ್‌ ಅವರು ಆಹ್ವಾನಿಸಿರಲಿಲ್ಲ.

ಎಸ್‌.ಎಂ. ಕೃಷ್ಣ ಅವರ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್‌ ಚಂದ್ರಶೇಖರ್‌, ಸಚಿವರಾದ ಆರ್‌. ಅಶೋಕ್‌, ಡಾ.ಕೆ. ಸುಧಾಕರ್‌, ಕಾಂಗ್ರೆಸ್‌ ವಕ್ತಾರ ಬಿ.ಎಲ್‌. ಶಂಕರ್‌ ಸೇರಿ ಹಲವರು ಹಾಜರಿದ್ದರು. ಈ ನಾಯಕರನ್ನು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಆಹ್ವಾನಿಸಿದ್ದರು. ಆದರೆ, ಡಿ.ಕೆ. ಶಿವಕುಮಾರ್‌ ಯಾವುದೇ ರಾಜಕೀಯ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲ ಎಂದು ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.

click me!