ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಏ.3) : ಕೆಸರು ಗದ್ದೆ ಓಟ (Slush Field Race ) ಅಂದಾಗ ನಮಗೆಲ್ಲ ನೆನಪಾಗೋದು ಕರಾವಳಿ, ಮಲೆನಾಡು. ಉತ್ತರ ಕರ್ನಾಟಕ ಭಾಗದಲ್ಲಿ ಕೆಸರು ಗದ್ದೆ ಓಟ ಆಯೋಜನೆ ಆಗೋದು ಬಲು ಅಪರೂಪ. ಆದ್ರೆ ಗುಮ್ಮಟನಗರಿ ವಿಜಯಪುರ (Vijayapura) ಜಿಲ್ಲೆಯ ಕತ್ನಳ್ಳಿ ಜಾತ್ರೆಯಲ್ಲಿ ಹಮ್ಮಿಕೊಳ್ಳಲಾದ ಕೆಸರುಗದ್ದೆ ಓಟ ಬಲು ಮನರಂಜನೆ ನೀಡಿತು. ಕಳೆದ 2 ವರ್ಷಗಳಿಂದ ಕೊರೊನಾ ಕಾರಣಕ್ಕೆ ಕಾರ್ಯಕ್ರಮಗಳೇ ನಡೆದಿರಲಿಲ್ಲ. ಆದ್ರೆ ಈಗ ಹಮ್ಮಿಕೊಳ್ಳಲಾದ ಕೆಸರುಗದ್ದೆ ಓಟವನ್ನ ಜನರು ಸಖತ್ತಾಗಿ ಎಂಜಾಯ್ ಮಾಡಿದ್ರು.
undefined
ಕೆಸರು ಗದ್ದೆಯಲ್ಲಿ ಮಿಂದೆದ್ದ ಯುವಕರು, ಮಕ್ಕಳು..!: ವಿಜಯಪುರ ತಾಲೂಕಿನ ಕತಕನಹಳ್ಳಿ ( Katakanahalli) ಸದಾಶಿವ ಮುತ್ಯಾನ ಜಾತ್ರೆಯ ಅಂಗವಾಗಿ ಕೆಸರುಗದ್ದೆ ಓಟ ಹಮ್ಮಿಕೊಳ್ಳಲಾಗಿತ್ತು. ಏಪ್ರಿಲ್ 1ರಿಂದ 5ರ ವರೆಗೆ ನಡೆಯುತ್ತಿರುವ ಈ ಜಾತ್ರೆಯಲ್ಲಿ ಐದು ದಿನಗಳ ಕಾಲ ನಿತ್ಯ ಒಂದೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಬಾಲಕರಿಂದ ಹಿಡಿದು ಯುವಕರ ವರೆಗೆ 35ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ರು. ಸುಮಾರು 100 ಮೀಟರ್ ಉದ್ದದ ಕೆಸರು ಗದ್ದೆಯನ್ನು ಸಿದ್ದಪಡಿಸಿ ಅದರಲ್ಲಿ ಓಟವನ್ನು ಆಯೋಜಿಸಲಾಗಿತ್ತು. ಆಯೋಜನಕರು ಗ್ರೀನ್ ಸಿಗ್ನಲ್ ನೀಡಿದ ಕೂಡಲೆ ಒಂದು ಬದಿಯಿಂದ ಓಡಿ ಇನ್ನೊಂದು ಬದಿಗೆ ತಲುಪಿ ಮತ್ತೆ ಮೊದಲಿದ್ದ ಸ್ಥಾನಕ್ಕೆ ಯಾರು ಮೊದಲು ಬರುತ್ತಾರೋ ಅವರೇ ವಿನ್ನರ್ ಆಗಿದ್ರು.
ಇಂತಹ ಸ್ಪರ್ಧೆಯಲ್ಲಿ ಅವರವರ ವಯೋಮಾನಕ್ಕೆ ತಕ್ಕಂತೆ ಬಾಲಕರ ಹಾಗೂ ಯುವಕರ ತಂಡಗಳನ್ನು ಬೇರ್ಪಡಿಸಿ ಕೆಸರು ಗದ್ದೆಯಲ್ಲಿ ಓಟಕ್ಕೆ ಚಾಲನೆ ನೀಡಲಾಗಿತ್ತು. ಕೆಸರು ಗದ್ದೆಯಲ್ಲಿ ಸ್ಪರ್ಧಾಳುಗಳು ಓಡುತ್ತಿದ್ರೆ ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಓಟಕ್ಕಿತ್ತವರಿಗೆ ಚಪ್ಪಾಳೆ ತಟ್ಟಿ ಬೆಂಬಲ ನೀಡುತ್ತಿದ್ರು. ಕೇವಲ ಜಾತ್ರೆಯನ್ನು ಮಾತ್ರ ನಡೆಸದೆ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿರುವ ಸಮಯದಲ್ಲಿ ಈ ರೀತಿ ಕೆಸರುಗದ್ದೆ ಓಟ ಆಯೋಜಿಸಿ, ಮತ್ತೆ ಸಂಭ್ರಮಿಸುವಂತೆ ಮಾಡಿದ್ದು ಸದಾಶಿವ ಮುತ್ಯಾನ ಜಾತ್ರಾ ಕಮೀಟಿ.
NIMHANS RECRUITMENT 2022 ಖಾಲಿ ಇರುವ 9 ಹುದ್ದೆಗಳಿಗೆ ನೇಮಕಾತಿ
ಮಲೆನಾಡ ವೈಭವ ನೆನಪಿಸಿದ ಕೆಸರುಗದ್ದೆ ಓಟ..!: ಈ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಕ್ರೀಡಾಪಟುಗಳು ಹಾಗೂ ವೀಕ್ಷಣೆ ಮಾಡಲು ಉಕ್ಕಲಿ, ಉಕುಮನಾಳ, ಹೆಗಡಿಹಾಳ ಸೇರಿದಂತೆ ಹತ್ತಾರು ಹಳ್ಳಿಗಳಿಂದ ಜನರು ಆಗಮಿಸಿದ್ದರು. ಮಲೆನಾಡಿನ ಭಾಗದಲ್ಲಿನ ಪ್ರಮುಖ ಗ್ರಾಮೀಣ ಕ್ರೀಡೆಗಳಲ್ಲೊಂದಾದ ಕೆಸರುಗದ್ದೆ ಓಟವನ್ನು ನೋಡಿ ಜನರು ಸಖತ್ ಎಂಜಾಯ್ ಮಾಡಿದ್ರು. ಜೊತೆಗೆ ಕೆಸರು ಗದ್ದೆ ಓಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಮಲೆನಾಡ ವೈಭವ ಕಣ್ಮುಂದೆ ಬಂದಂತಾಯ್ತು.
ಬೇಸಿಗೆ ಬಂದ್ರೆ ಬರದಿಂದ ನೀರಿನ ಅಭಾವವೇ ಹೆಚ್ಚಿರುವ ವಿಜಯಪುರ ಜಿಲ್ಲೆಯಲ್ಲಿ ಕೆಸರು ಗದ್ದೆ ಓಟದಂತ ಆಟಗಳ ಆಯೋಜನೆ ಕಡಿಮೆ. ಆದ್ರೆ ಜನರಿಗೆ ಒಂದಿಷ್ಟು ಮನೋರಂಜನೆ ಇರಲಿ ಎನ್ನುವ ಕಾರಣಕ್ಕೆ ಕತ್ನಳ್ಳಿ ಸದಾಶಿವ ಅಜ್ಜನ ಜಾತ್ರಾ ಕಮೀಟಿ ಈ ಮೂಲಕ ಬರದ ನಾಡಿನಲ್ಲೂ ಕೆಸರುಗದ್ದೆ ಓಟ ನಡೆಸಿ ಸೈ ಎನಿಸಿಕೊಂಡಿದೆ.
ದಾವಣಗೆರೆ ಜಿಲ್ಲೆ ಸೈನಿಕ ಗ್ರಾಮ ತೋಳಹುಣಸೆಗೆ ಮತ್ತೊಂದು ಗರಿ!
ಹಿಂದೂ-ಮುಸ್ಲಿಂ ಯುವಕರು ಕ್ರೀಡೆಯಲ್ಲಿ ಭಾಗಿ..!: ರಾಜ್ಯದಲ್ಲಿ ಹಿಂದೂ ವ್ಯಾಪಾರ ಧರ್ಮ, ಜಟ್ಕಾ-ಹಲಾಲ್ ಯುದ್ಧ ನಡೆಯುತ್ತಿರುವಾಗ ಈ ಜಾತ್ರೆಯಲ್ಲಿ ಹಿಂದೂ, ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ಎಲ್ಲರು ಪಾಲ್ಗೊಳ್ತಾರೆ. ಐದು ದಿನಗಳ ಕಾಲ ನಡೆಯುವ ಈ ಜಾತ್ರೆ, ಯಾವುದೇ ಜಾತಿಭೇದವಿಲ್ಲದೆ ಸರ್ವ ಧರ್ಮದ ಶಾಂತಿಯ ತೋಟದಂತೆ ನಡೆಯುತ್ತದೆ. ಇಲ್ಲಿ ನಡೆಯುವ ಪ್ರತಿ ಕ್ರೀಡಾ ಸ್ಪರ್ಧೆಗಳಲ್ಲು ಹಿಂದೂಗಳಂತೆ ಸರಿಸಮಾನವಾಗಿ ಮುಸ್ಲಿಂ ಯುವಕರು, ಮಕ್ಕಳು ಪಾಲ್ಗೊಳ್ಳುತ್ತಾರೆ. ಕೆಸರು ಗದ್ದೆ ಓಟದಲ್ಲು ಮುಸ್ಲಿಂ ಯುವಕರು ಪಾಲ್ಗೊಂಡು ಗೆಲುವು ಕೂಡ ಸಾಧಿಸಿದ್ದಾರೆ. ಇಲ್ಲಿ ಯಾವುದೇ ಜಾತಿ-ಭೇದವಿಲ್ಲದೆ ಪ್ರತಿಯೊಂದು ಕಾರ್ಯಕ್ರಮಗಳು ನಡೆಯೋದು ವಿಶೇಷ..
ಮುಸ್ಲಿಂ ಯುವಕನಿಗೆ ಪ್ರಥಮ ಬಹುಮಾನ..!: ಕೆಸರುಗದ್ದೆ ಓಟದಲ್ಲಿ ಗೆದ್ದವರಿಗೆ ಪ್ರಥಮ, ದ್ವೀತಿಯ, ತೃತಿಯ ಬಹುಮಾನಗಳನ್ನ ನೀಡಲಾಯಿತು. ಪ್ರಥಮ ಬಹುಮಾನ ಐದು ಸಾವಿರ, ದ್ವಿತೀಯ ಬಹುಮಾನ ಎರಡೂವರೆ ಸಾವಿರ ಹಾಗೂ ತೃತೀಯ ಬಹುಮಾನ ಒಂದು ಸಾವಿರ ನಿಗದಿ ಮಾಡಲಾಗಿತ್ತು. ಈ ಬಾರಿ ಉಕ್ಕಲಿಯ ಮುಸ್ಲಿಂ ಯುವಕ ಶಾನುಸಾಬ ಕರೋಷಿ ಪ್ರಥಮ ಬಹುಮಾನ ಪಡೆದುಕೊಂಡಿದ್ದು ವಿಶೇಷವಾಗಿತ್ತು
ಆದರ್ಶವಾದ ಕತ್ನಳ್ಳಿ ಜಾತ್ರೆ..!: ಗುರು ಚಕ್ರವರ್ತಿ ಸದಾಶಿವ ಅಜ್ಜನ ಮಠದ ಶಿವಯ್ಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಜಾತ್ರೆಯಲ್ಲಿ ಹತ್ತು ಹಲವು ವಿಶೇಷತೆಗಳು ಮನೆಮಾಡಿವೆ. ಹಿಂದೂ-ಮುಸ್ಲಿಂ ಎಂದು ಕೋಮುಗಲಭೆ ಎಬ್ಬಿಸುವವರ ಮದ್ಯೆ ಕತಕನಹಳ್ಳಿಯಲ್ಲಿನ ಸದಾಶಿವ ಮುತ್ಯಾನ ಮಠದಲ್ಲಿ ಹಿಂದೂ-ಮುಸ್ಲಿಂ ಸೇರಿ ಭಾವೈಕ್ಯತೆಯಿಂದ ಜಾತ್ರೆ ಮಾಡುತ್ತಿದ್ದಾರೆ. ಈ ಮೂಲಕ ನಾವೆಲ್ಲ ಒಂದೇ ಎಂಬ ಸಂದೇಶವನ್ನು ಸಾರುತ್ತಿದೆ ಈ ಮಠ.