Council Election Karnataka : ಚುನಾವಣೆ ವೇಳೆ ಬೆಳ್ಳಿ ನಾಣ್ಯ ಹಂಚಿಕೆ ಆರೋಪ

Kannadaprabha News   | Asianet News
Published : Dec 05, 2021, 03:04 PM IST
Council Election Karnataka : ಚುನಾವಣೆ ವೇಳೆ ಬೆಳ್ಳಿ ನಾಣ್ಯ ಹಂಚಿಕೆ ಆರೋಪ

ಸಾರಾಂಶ

ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮತದಾರರಿಗೆ ಬೆಳ್ಳಿ ನಾಣ್ಯ ಹಂಚುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬೆಳ್ಳಿ ನಾಣ್ಯದ ಫೋಟೋ ತೋರಿಸಿದ ಮುಖಂಡ

ಮೈಸೂರು (ಡಿ.05):  ವಿಧಾನ ಪರಿಷತ್‌ ಚುನಾವಣೆ (MLC Election) ಹಿನ್ನೆಲೆಯಲ್ಲಿ ಮೈಸೂರಿನಲ್ಲಿ (Mysuru) ಮತದಾರರಿಗೆ ಬೆಳ್ಳಿ ನಾಣ್ಯ (Silver Coin) ಹಂಚುತ್ತಿದ್ದಾರೆ ಎಂದು ಕೆಪಿಸಿಸಿ (KPCC) ವಕ್ತಾರ ಎಂ. ಲಕ್ಷ್ಮಣ (M Laxman ) ಆರೋಪಿಸಿದರು.  ಕಾಂಗ್ರೆಸ್‌ (Congress) ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬೆಳ್ಳಿ ನಾಣ್ಯದ ಫೋಟೋ ತೋರಿಸುತ್ತಾ ಮಾತನಾಡಿದ ಅವರು, ಬಿಜೆಪಿ (BJP) ಅಥವಾ ಜೆಡಿಎಸ್‌ನಿಂದ (JDS) ಧರ್ಮಸ್ಥಳ ಮಂಜುನಾಥ ಸ್ವಾಮಿಯ (Dharmasthala Manjunatha swami) ಚಿತ್ರವುಳ್ಳ ಬೆಳ್ಳಿ ನಾಣ್ಯವನ್ನು ಹಂಚಲಾಗುತ್ತಿದೆ. ಅಲ್ಲದೆ, ಮತದಾರರಿಗೆ ಹಣ ಸಹ ನೀಡುತ್ತಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದರು. ಈ ಬೆಳ್ಳಿ ನಾಣ್ಯವು ಬಿಟ್‌ ಕಾಯಿನ್‌ (Bit Coin) ಮಾದರಿಯಂತೆ ಕಾಣುತ್ತಿದೆ. ಬಿಟ್‌ ಕಾಯಿನ್‌ಗೂ ಈ ಬೆಳ್ಳಿ ನಾಣ್ಯಕ್ಕೂ ಸಂಬಂಧ ಇರುವ ಅನುಮಾನವಿದೆ ಎಂದು ಅವರು ದೂರಿದರು.

ಜೆಡಿಎಸ್‌ ಬಿಜೆಪಿಯಲ್ಲಿ ವಿಲೀನ: ಆರೋಪ

ಉಪ ಚುನಾವಣೆ ವೇಳೆ ಬಿಜೆಪಿ (BJP) ಹಾಗೂ ಆರ್‌ಎಸ್‌ಎಸ್‌ (RSS) ಅನ್ನು ಜೆಡಿಎಸ್‌ (JDS) ನಾಯಕರು ವ್ಯಾಪಕವಾಗಿ ಟೀಕೆ ಮಾಡಿದ್ದರು. ಉಪ ಚುನಾವಣೆ(By Election) ಮುಗಿಯುವವರೆಗೂ ಆರ್‌ಎಸ್‌ಎಸ್‌ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದವರು. ಆ ಬಳಿಕ ಮೌನವಾಗಿದ್ದಾರೆ. ಇದೀಗ ಎಚ್‌.ಡಿ. ದೇವೆಗೌಡರು (HD Devegowda ) ಪ್ರಧಾನಿ ಮೋದಿ (Prime Minister Narendra Modi)  ಅವರನ್ನು ಭೇಟಿ ಮಾಡಿರುವುದರ ಉದ್ದೇಶವೇನು ಎಂಬುದನ್ನು ಬಹಿರಂಗ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಜೆಡಿಎಸ್‌  (JDS) ಬಿಜೆಪಿಯ ಬಿ ಟೀಮ್‌ ಎಂಬುದು ಸಾಬೀತಾಗಿದೆ. ಮುಂಬರುವ ದಿನಗಳಲ್ಲಿ ಜೆಡಿಎಸ್‌ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಲಿದ್ದಾರೆ. ಇದೇ ಕಾರಣದಿಂದ ಪ್ರಧಾನಿ ಮೋದಿ ಅವರನ್ನು ಎಚ್‌.ಡಿ. ದೇವೇಗೌಡರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.

ಜಾತ್ಯಾತೀತತೆ ಬಗ್ಗೆ ಜೆಡಿಸ್‌ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ದೇವೇಗೌಡರ ಕುಟುಂಬದ 12ನೇಯವರಾಗಿ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಈ ಸಂಖ್ಯೆ 15ಕ್ಕೆ ಏರಲಿದೆ ಎಂದು ಅವರು ಕುಟುಕಿದರು.

ಪೊಲೀಸರ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಆಕ್ಷೇಪಾರ್ಹವಾಗಿದೆ. ಈ ಮೂಲಕ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಲಾಗಿದೆ. ಅಲ್ಲದೆ, ಭ್ರಷ್ಟಾಚಾರ ನಡೆಯುತ್ತಿರುವುದನ್ನು ಒಪ್ಪಿಕೊಂಡಂತಾಗಿದೆ. ಪೊಲೀಸರ (Police) ಬಗ್ಗೆ ಹಗುರವಾಗಿ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಕಿಡಿಕಾರಿದರು.

ಪಡುವಾರಹಳ್ಳಿಯ ಮಾತೃ ಮಂಡಳಿ ವೃತ್ತದಲ್ಲಿದ್ದ ಡಾ. ಅಂಬೇಡ್ಕರ್‌ ಪುತ್ಥಳಿ ತೆರವುಗೊಳಿಸಿರುವುದನ್ನು ಖಂಡಿಸುತ್ತೇವೆ. ಈ ಬೆಳವಣಿಗೆ ಬಿಜೆಪಿಯ ದಲಿತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಸರ್ಕಾರದ ಅಧಿಕಾರಿಗಳು ಬಲವಂತವಾಗಿ ಅಂಬೇಡ್ಕರ್‌ ಪುತ್ಥಳಿ ತೆರವು ಮಾಡಿರುವುದು ಸರಿಯಲ್ಲ. ಪ್ರತಿಮೆಯನ್ನು ಪುನರ್‌ ಸ್ಥಾಪಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಎಂ. ಶಿವಣ್ಣ, ಕುರುಬಾರಹಳ್ಳಿ ಪ್ರಕಾಶ್‌, ಬಸವಣ್ಣ ಇದ್ದರು.

ಕಾಂಗ್ರೆಸ್‌ ಪಕ್ಷದ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು, ಡಿ.11 ರಂದು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 65 ವಾರ್ಡುಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ. ಇದನ್ನು ಪಕ್ಷದ ಕಾರ್ಯಕರ್ತರು ಸದುಪಯೋಗ ಪಡಿಸಿಕೊಳ್ಳಬೇಕು. ಈಗಾಗಲೇ ಪಕ್ಷದ ಕಾರ್ಯಕರ್ತರಾಗಿರುವವರು ಸದಸ್ಯತ್ವ ನವೀಕರಣ ಮಾಡಿಕೊಳ್ಳಬೇಕು.

- ಆರ್‌. ಮೂರ್ತಿ, ನಗರಾಧ್ಯಕ್ಷ, ಕಾಂಗ್ರೆಸ್‌ ಪಕ್ಷ

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ