ಟೇಕಲ್ ಹೋಬಳಿಯ ನೂಟುವೆ ಗ್ರಾಮ ಪಂಚಾಯಿತಿಗೆ ಸೇರಿದ ದೊಡ್ಡನಾಯಕನಹಳ್ಳಿಯ ರೇಷ್ಮೆ ಬೆಳೆಯುವ ರೇಷ್ಮೆ ಬೆಳೆಗಾರರು, ಕಲ್ಲು ಗಣಿಗಾರಿಕೆಯಿಂದ ಬೆಳೆ ನಷ್ಟಅನುಭವಿಸುವಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಟೇಕಲ್(ಅ.07): ಟೇಕಲ್ ಹೋಬಳಿಯ ನೂಟುವೆ ಗ್ರಾಮ ಪಂಚಾಯಿತಿಗೆ ಸೇರಿದ ದೊಡ್ಡನಾಯಕನಹಳ್ಳಿಯ ರೇಷ್ಮೆ ಬೆಳೆಯುವ ರೇಷ್ಮೆ ಬೆಳೆಗಾರರು, ಕಲ್ಲು ಗಣಿಗಾರಿಕೆಯಿಂದ ಬೆಳೆ ನಷ್ಟಅನುಭವಿಸುವಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದಕ್ಕೆ ಮುಖ್ಯ ಕಾರಣವಾಗಿ ಸಮೀಪ ಕಲ್ಲು ಗಣಿಗಾರಿಕೆ (Mining) ನಡೆಯುವುದರಿಂದ ಬರುವ ಧೂಳು ಹಾಗೂ ರಸಾಯನಿಕಗಳಿಂದ ಕೈಗೆ ಬಂದ ರೇಷ್ಮೆ ಹುಳು, ರೇಷ್ಮೆ (Solk) ನೂಲು ಕಟ್ಟದೆ ಸಾಯುವಂತಾಗಿರುವುದರಿಂದ ಬೆಳೆ ನಷ್ಟಆಗಿ ರೈತರು (Farmers) ಸಾಲಗಾರರಾಗುವ ಪರಿಸ್ಥಿತಿ ಏರ್ಪಟ್ಟಿದೆ. ಈ ಬಗ್ಗೆ ರೇಷ್ಮೆ ಬೆಳೆದು ನಷ್ಟಅನುಭವಿಸಿದ ರೈತ ಎಂ.ವೆಂಕಟಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಹಾಗೂ ಸ್ವಾರ್ಥ ರಾಜಕಾರಣಿಗಳ ಮತ್ತು ಉದ್ಯಮಿಗಳ ದುರಾಸೆಗೆ ರೈತರು ಬಲಿಯಾಗುತ್ತಿದ್ದು ಗಣಿಗಾರಿಕೆ ನಡೆಸಲು ಹಾಗೂ ಸಿಡಿಮದ್ದು ಸಿಡಿಸುವುದರಿಂದ ಬರುವ ಧೂಳು ರೇಷ್ಮೆ ಬೆಳೆ ಮೇಲೆ ಬಿದ್ದು ಅದನ್ನು ರೇಷ್ಮೆ ಹುಳು ತಿಂದು ಸಾಯುತ್ತಿದ್ದು, ಗ್ರಾಮದ 5 ಮಂದಿ ರೈತರ ರೇಷ್ಮೆ ಬೆಳೆಯಿಂದ ಸುಮಾರು 15 ಲಕ್ಷ ರೂಪಾಯಿ ಅಂದಾಜಿನ ನಷ್ಟಉಂಟಾಗಿದೆ ಎಂದರು.
ಗ್ರಾಮದ ಸಮೀಪವಿರುವ ಅರ್ಧಕೊತ್ತೂರು, ಆನಿಮಿಟ್ಟನಹಳ್ಳಿ ಬರುವ ಕೆಲವು ಸ್ಟೋನ್ ಕ್ರಷರ್‌ಗಳಿಂದ ಬರುವ ಧೂಳುನಿಂದ ರೇಷ್ಮೆ ಬೆಳೆ ನಾಶವಾಗುತ್ತಿದೆ ಎಂದು ಆರೋಪಿಸಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಪಶ್ಚಿಮದಿಂದ ಪೂರ್ವಕ್ಕೆ ಗಾಳಿ ಬೀಸುವ ಸಮಯದಲ್ಲಿ ಗಣಿಗಾರಿಕೆಯ ಧೂಳು ರೇಷ್ಮೆ ಬೆಳೆಯ ಎಲೆಗಳ ಮೇಲೆ ಬಿದ್ದು ಅದನ್ನು ರೇಷ್ಮೆ ಹುಳ ತಿಂದು ಸಾಯುತ್ತಿದೆ ಎಂದು ಗ್ರಾಮದ ರೈತರು ಹುಳುಗಳನ್ನು ಮತ್ತು ರೇಷ್ಮೆ ಎಲೆಯನ್ನು ಪ್ರದರ್ಶಿಸಿದರು. ಈ ಬಗ್ಗೆ ಜಿಲ್ಲಾಡಳಿತ ಪರಿಹಾರ ಹಾಗೂ ಕ್ರಮ ಕೈಗೊಳ್ಳಬೇಕೆಂದರು.
ಸ್ಥಳಕ್ಕೆ ಅಧಿಕಾರಿ ಭೇಟಿ: ಗ್ರಾಮಕ್ಕೆ ಆಗಮಿಸಿದ ಮಾಲೂರು ತಾಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರರವರು ಪರಿಸ್ಥಿತಿಯನ್ನು ಗಮನಿಸಿ ಹಾಗೂ ರೇಷ್ಮೆ ಬೆಳೆಗಳನ್ನು ಪರಿಶೀಲಿಸಿ ನಂತರ ಮಾತನಾಡಿ, ಸತ್ತ ರೇಷ್ಮೆ ಹುಳುಗಳನ್ನು ಹಾಗೂ ಧೂಳು ಶೇಖರವಾಗಿದ್ದ ಹಿಪ್ಪು ನೇರಳೆ ಸೊಪ್ಪುಗಳನ್ನು ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಇಲಾಖೆಯ ಸಂಶೋಧನಾ ಕೇಂದ್ರಕ್ಕೆ ಕಳಿಸಲಾಗುವುದು ಎಂದು ತಿಳಿಸಿದರು.
ವರದಿ ಬಂದ ನಂತರ ಜಿಲ್ಲಾಮಟ್ಟದ ರೇಷ್ಮೆ ಇಲಾಖಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿ ಇದಕ್ಕೆ ಪರಿಹಾರಕ್ಕೆ ಇಲಾಖೆಗೆ ಮಾಹಿತಿ ನೀಡುವುದಾಗಿ, ತಾತ್ಕಾಲಿಕವಾಗಿ ಧೂಳು ತಡೆಯುವುದಕ್ಕೆ ಹಿಪ್ಪು ನೇರಳೆ ತೋಟದ ಸುತ್ತ ಮೆಷ್‌ಅನ್ನು ಹಾಕಲು ಇಲಾಖೆಯಿಂದ ಸಬ್ಸಿಡಿ ದರದಲ್ಲಿ ರೈತರಿಗೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೇಷ್ಮೆ ಬೆಳೆಯನ್ನು ಬೆಳೆದ ರೈತರಾದ ವಿ.ಶ್ರೀನಾಥ, ವೆಂಕಟರಾಮಯ್ಯ, ಸುಬ್ರಮಣಿ, ವೆಂಕಟರಾಮಪ್ಪ, ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಮತ್ತು ಗಣಿಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅವ್ಯಾಹತ ಕಲ್ಲು ಗಣಿಕಾರಿಕೆಗಳು ನಿಯಮ ಮತ್ತು ಮಾರ್ಗಸೂಚಿ ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಿದ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಜಿಲ್ಲಾಡಳತಕ್ಕೆ ನಿರ್ದೇಶನ ನೀಡಿದ್ದಾರೆ.
ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಅವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಬೆಳಗಾವಿ ಲೋಕಾಯುಕ್ತ ಅಧೀಕ್ಷಕರಿಗೆ ವರ್ಗಾವಣೆ ಮಾಡಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಪ್ರಕರಣದಲ್ಲಿ ಜಿಲ್ಲಾಧಿಕಾರಿ ಪೊಲೀಸ್ ಅಧೀಕ್ಷಕರು, ಬೆಳಗಾವಿ, ಗಣಿ ಮತ್ತು ಭೂವಿಜ್ಞಾನ ಉಪನಿರ್ದೇಶಕರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಮತ್ತು ಬೈಲಹೊಂಗಲ ತಹಸೀಲ್ದಾರ್ ಅವರು ಜನರ, ಮನೆ, ಅಣೆಕಟ್ಟು, ರಸ್ತೆ ಮತ್ತು ಕೃಷಿ ಬೆಳೆಗಳಿಗೆ ಉಂಟಾದ ಹಾನಿಗಳನ್ನು ಪರಿಶೀಲಿಸಲು ಮತ್ತು ಈ ಕಲ್ಲು ಕ್ರಷರ್‌ಗಳ ಪರಿಸರ ಮತ್ತು ಅದರ ವರದಿಯನ್ನು ಅ. 20 ರೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ.
ಬೆಳಗಾವಿ: ಕಲ್ಲು ಗಣಿಗಾರಿಕೆ, ಅಪಾಯದಲ್ಲಿ ಡ್ಯಾಮ್..!
ಕಲ್ಲು ಕ್ರಷರಗಳು ಮಾಡಿದ ಉಲ್ಲಂಘನೆಗಳ ಬಗ್ಗೆ ಗಂಭೀರತೆಯನ್ನು ಕಂಡು, ಕರ್ನಾಟಕದ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು, ತಮ್ಮ ಆದೇಶದಲ್ಲಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯು ನಿಗದಿಪಡಿಸಿದ ಮಾರ್ಗಸೂಚಿಗಳು ಮತ್ತು ಷರತ್ತುಗಳ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ವರದಿಯಿಂದ ಕಂಡುಬರುತ್ತದೆ. 2011ರ ಕರ್ನಾಟಕ ಕಲ್ಲು ಕ್ರಷರ ಕಾಯ್ದೆಯ ಸೆಕ್ಷನ್ 6 ರ ಉಪವಿಭಾಗ 6 ರಿಂದ 9 ರವರೆಗೆ ಮಾಲಿನ್ಯ ನಿಯಂತ್ರಣ ಕ್ರಮಗಳು, ನಿಬಂಧನೆಗಳು, ಪರಿಸರ ಸಂರಕ್ಷಣಾ ಕಾಯ್ದೆ ಮತ್ತು ನಿಯಮಗಳನ್ನು ಪಾಲಿಸದೇ ಉಲ್ಲಂಘಿಸಲಾಗಿದೆ. ಜಿಲ್ಲಾಧಿಕಾರಿಗಳು ಪ್ರತಿ ಕಲ್ಲು ಕ್ರಷರನ್ನು ವರ್ಷಕ್ಕೊಮ್ಮೆಯಾದರೂ ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿದ್ದರೆ ಕಲ್ಲು ಕ್ರಷರಗಳಿಂದ ಮನೆಗಳಿಗೆ, ಕೃಷಿ ಬೆಳೆಗಳಿಗೆ ಹಾನಿ, ಜನರ ಆರೋಗ್ಯಕ್ಕೆ ಹಾನಿ ಮತ್ತು ಹತ್ತಿರದ ಅಣೆಕಟ್ಟಿಗೆ ಅಪಾಯವನ್ನು ತಡೆಯಬಹುದು. ಮರಿಕಟ್ಟಿಮತ್ತು ಗಣಿಕೊಪ್ಪ ಗ್ರಾಮಗಳಲ್ಲಿರುವ ಕಲ್ಲು ಕ್ರಷರಗಳ ಸಮರ್ಪಕ ಪರಿಶೀಲನೆ ಕೊರತೆ ಇದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಎಲ್ಲ ಕಲ್ಲು ಕ್ರಷರ್‌ಗಳಿಗೆ ನೋಟಿಸ್ ನೀಡಿದ್ದು ಬಿಟ್ಟರೆ ಕ್ರಿಮಿನಲ್ ಮೊಕದ್ದಮೆಗೆ ಕ್ರಮಕೈಗೊಂಡಿಲ್ಲ. ಆರೋಗ್ಯದ ಅಪಾಯದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಪರಿಹಾರದ ಮೊತ್ತವನ್ನು ನಿರ್ಧರಿಸಲು ಈ ಕಾಯ್ದೆಯು ಅವಕಾಶ ನೀಡುತ್ತದೆ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.