
ಹುಬ್ಬಳ್ಳಿ(ಮಾ.08): ಕೊರೋನಾ ವೈರಸ್ ಹರಡುವಿಕೆ ನಿಯಂತ್ರಿಸುವ ಸಲುವಾಗಿ ಇದೇ ತಿಂಗಳು 12 ರಂದು ಶ್ರೀ ಸಿದ್ಧಾರೂಢರ ಸ್ವಾಮೀಜಿಯವರ ರಥೋತ್ಸವವ ಸಾಂಕೇತಿಕವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಠದ ಆಡಳಿತ ಮಂಡಳಿ ಚೇರಮನ್ ದೇವೇಂದ್ರಪ್ಪ ಮಾಳಗಿ ತಿಳಿಸಿದ್ದಾರೆ.
ಇಂದು(ಸೋಮವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾಡಳಿದ ನೀಡಿರುವ ಕೊರೋನಾ ಮಾರ್ಗಸೂಚಿಯಂತೆ ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ಭಕ್ತರಿಗೆ ಬರದಂತೆ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಜಾತ್ರೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಗೆ ಒಳಪಡಿಸಲಾಗುತ್ತಿದ್ದು, ಅದಕ್ಕಾಗಿ 8 ಕಡೆಗಳಲ್ಲಿ ಪ್ರತ್ಯೇಕ ಜಾಗಗಳನ್ನ ಗುರುತಿಸಲಾಗಿದೆ. ಉಷ್ಣಾಂಶ 100 ಡಿಗ್ರಿ ಇಲ್ಲವೇ ಹೆಚ್ಚು ಕಂಡು ಬಂದಲ್ಲಿ ಅವರನ್ನು ತಕ್ಷಣ ಆರೋಗ್ಯ ಇಲಾಖೆಗೆ ವಶಕ್ಕೆ ನೀಡಲಾಗುತ್ತದೆ. ಹೆಗ್ಗೇರಿ ಆಯುರ್ವೇದ ಕಾಲೇಜು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿದ್ದು ಮೇಲ್ವಿಚಾರಣೆಯನ್ನ ನೋಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಭಕ್ತರಿಗೆ ಅನ್ನದಾಸೋಹ ಇರಲಿದ್ದು, ನೂಕು ನುಗ್ಗಲು ಉಂಟಾಗದಂತೆ ದಾಸೋಹ ಮಂಟಪ ಹಾಗೂ ಭಕ್ತನಿಲಯ ಹಿಂಭಾಗದಲ್ಲಿ ಬೃಹತ್ ಜಾಗದಲ್ಲಿ 4-5 ಕಡೆಗಳಲ್ಲಿ ಕೌಂಟರ್‌ಗಳನ್ನು ತೆರೆಯಲಾಗುತ್ತದೆ ಎಂದು ವಿವರಿಸಿದರು.
ಭಕ್ತಸಾಗರದ ಮಧ್ಯ ಸಿದ್ಧಾರೂಢರ ರಥೋತ್ಸವ: ಮೂರುವರೆ ಲಕ್ಷಕ್ಕೂ ಅಧಿಕ ಭಕ್ತರು ಭಾಗಿ
ಮಾ.14 ರಂದು ಸಂಪನ್ನ
ಮಾ.6 ರಿಂದಲೇ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಶುರುವಾಗಿದ್ದು, 14 ರಂದು ಕೌದಿ ಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ. 6 ರಿಂದ 11 ರವರೆಗೆ ನಿತ್ಯ ಸಂಜೆ ರಾತ್ರಿ 8 ರಿಂದ ಸಂಗೀತಗಾರರಿಂದ ಸಂಗೀತೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಭಕ್ತರು ಸಾಧ್ಯವಾದಷ್ಟು ಶಿವರಾತ್ರಿಯಂದು ತಾವಿದ್ದ ಊರು, ಮನೆಗಳಲ್ಲಿ ಸಿದ್ಧಾರೂಢರನ್ನು ಸ್ಮರಿಸಿಕೊಂಡು ಶಿವರಾತ್ರಿ ಆಚರಿಸಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
ಆಟೋ ಸೇವೆ
ಜಾತ್ರೆಗೆ ಬರುವ ಭಕ್ತರನ್ನು ಶ್ರೀಮಠಕ್ಕೆ ಕರೆತರಲು ಮಾ. 11 ಹಾಗೂ 12 ರಂದು ಸಿಬಿಟಿ, ಗೋಕುಲ್ ರೋಡ್, ರೈಲ್ವೆ ಸ್ಟೇಶನ್ ಕಡೆಗಳಿಂದ ಉಚಿತ ಆಟೋ ಸೇವೆ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಗೌರವ ಕಾರ್ಯದರ್ಶಿ ಸಿದ್ರಾಮಪ್ಪ ಕೋಳಕೂರ, ಉಪಾಧ್ಯಕ್ಷ ಜಗದೀಶ್ ಮಗಜಿಕೊಂಡಿ, ಜಿ.ಎಸ್. ನಾಯಕ, ಡಾ. ಗೋವಿಂದ ಮಣ್ಣೂರ, ಶಾಮಾನಂದ ಪೂಜೇರ, ವ್ಯವಸ್ಥಾಪಕ ಈರಣ್ಣ ತುಪ್ಪದ ಉಪಸ್ಥಿತರಿದ್ದರು.