ಸಾಮಾಜಿಕ ಮತ್ತು ವಚನ ಕ್ರಾಂತಿಗಾಗಿ ನಾಡಿನೆಲ್ಲಡೆ ಸಂಚಾರ ಮಾಡಿ, ಜನಸಾಮಾನ್ಯರಲ್ಲಿ ಪಸರಿಸಿ ತನ್ಮೂಲಕ ಸಮಾಜೋದ್ಧಾರಕ್ಕಾಗಿ ಕ್ರಾಂತಿ ಮಾಡಿದ ಶಿವಶರಣರಲ್ಲೊಬ್ಬರಾದ ಶ್ರೀ ಗುರುಸಿದ್ದರಾಮೇಶ್ವರರ ಕಾಯಕನಿಷ್ಠೆ, ಕೃಷಿಪರತೆ, ಆದರ್ಶ ಗುಣಗಳು ಸಮಾಜಕ್ಕೆ ಸದಾ ಪ್ರೇರಕವಾಗಲಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ತಿಪಟೂರು (ಜ.15): ಸಾಮಾಜಿಕ ಮತ್ತು ವಚನ ಕ್ರಾಂತಿಗಾಗಿ ನಾಡಿನೆಲ್ಲಡೆ ಸಂಚಾರ ಮಾಡಿ, ಜನಸಾಮಾನ್ಯರಲ್ಲಿ ಪಸರಿಸಿ ತನ್ಮೂಲಕ ಸಮಾಜೋದ್ಧಾರಕ್ಕಾಗಿ ಕ್ರಾಂತಿ ಮಾಡಿದ ಶಿವಶರಣರಲ್ಲೊಬ್ಬರಾದ ಶ್ರೀ ಗುರುಸಿದ್ದರಾಮೇಶ್ವರರ ಕಾಯಕನಿಷ್ಠೆ, ಕೃಷಿಪರತೆ, ಆದರ್ಶ ಗುಣಗಳು ಸಮಾಜಕ್ಕೆ ಸದಾ ಪ್ರೇರಕವಾಗಲಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ನಗರದ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಶನಿವಾರ ತಾಲೂಕಿನ ಕೆರೆಗೋಡಿ-ರಂಗಾಪುರ ಗುರುಪರದೇಶಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಶ್ರೀ ಗುರುಸಿದ್ದರಾಮೇಶ್ವರರ 850ನೆಯ ಸುವರ್ಣ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಸಿದ್ದರಾಮೇಶ್ವರರು ಶರಣರ ಕಾಲದಲ್ಲಿಯೇ ಜನರ ಒಳಿತಿಗಾಗಿ ನೀರಿನ ದಾಹ ನೀಗಿಸುವಲ್ಲಿ ಶ್ರಮಿಸಿದವರು. ಶಿವಶರಣ ಸಹಕಾರದಿಂದ ಅನೇಕ ಜನೋಪಯೋಗಿ ಕೆಲಸಕಾರ್ಯಗಳನ್ನು ಮಾಡುವ ಮೂಲಕ ಕಾಯಕಯೋಗಿಗಳಾದರು. ಅವರ ಆದರ್ಶಗಳು, ತತ್ವಗಳು ಎಲ್ಲರ ಬಾಳಿಗೂ ಬೆಳಕಾಗಲಿವೆ. ಕೆರೆಗೋಡಿ-ರಂಗಾಪುರ ಸುಕ್ಷೇತ್ರವು ಪರಮಪಾವನ ಕ್ಷೇತ್ರವಾಗಿದ್ದು ದೀನದುರ್ಬಲರ ಬಗ್ಗೆ ಕಾಳಜಿ, ಸಮಾಜ ಸೇವೆ, ಶಿಕ್ಷಣ ಮೊದಲಾದ ಉದಾತ್ತ ಗುಣಗಳಿಂದ ಕೂಡಿರುವ ಶ್ರೀಮಠದ ಪರಂಪರೆ ಮೆಚ್ಚುವಂತಹದ್ದು ಎಂದರು.
undefined
ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ: ಸಂಸದ ತೇಜಸ್ವಿ ಸೂರ್ಯ
ರಾಜ್ಯ ಮಟ್ಟದ ಕೃಷಿ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವೆ ಶೋಭ ಕರಂದ್ಲಾಜೆ, 12ನೇ ಶತಮಾನದಲ್ಲಿದ್ದ ಜಾತೀಯತೆ 21ನೇ ಶತಮಾನವಾದರೂ ತಾಂಡವವಾಡುತ್ತಿದೆ. ಅಂದು ಜಾತಿ ಪದ್ದತಿ ಹೋಗಲಾಡಿಸಲು ಸಿದ್ದರಾಮರು ಬೆಳ್ಳಿ ಕಿರಣವಾಗಿ ಮೂಡಿಬಂದರು. ತುಳಿತಕ್ಕೊಳಗಾದ ಮಹಿಳೆಯರಿಗೆ ಸಮಾನತೆಯ ಸಂದೇಶ ಸಾರಿದರು ಎಂದರು. ತಿಪಟೂರು ಕೊಬ್ಬರಿಗೆ ಅದರದ್ದೇ ಆದ ಬೇಡಿಕೆ ಇದ್ದು ಕೊಬ್ಬರಿ ದೆಹಲಿ, ದುಬೈಗೆ ಸೀಮಿತವಾಗದೆ ಯುರೋಪಿಯನ್, ಅಮೇರಿಕಕ್ಕೂ ಹೋಗಬೇಕು. ದೇಶದ ಆಹಾರ ಧಾನ್ಯಗಳನ್ನು ವಿಶೇಷ ಬ್ರ್ಯಾಂಡ್ ರೂಪದಲ್ಲಿ ರಪ್ತು ಮಾಡಲು ಕೇಂದ್ರ ಸರ್ಕಾರ ತಾಂತ್ರಿಕತೆ ಅಳವಡಿಸಿಕೊಳ್ಳಲು 1 ಲಕ್ಷ ಕೋಟಿ ಹಣವನ್ನು ಮೀಸಲಿರಿಸಿದ್ದು ಈ ಬಗ್ಗೆ ಅಧಿಕಾರಿಗಳು ರೈತರಿಗೆ ಮಾಹಿತಿ ತಿಳಿಸಬೇಕೆಂದರು.
ಸಿದ್ದಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಸಿದ್ದರಾಮರು ಕ್ರಾಂತಿಯ ಬೆಳಕಾಗಿದ್ದು ಶರಣ ಸಂಕುಲದ ಆಧಾರಸ್ತಂಭವಾಗಿದ್ದಾರೆ. ಅವರ ಸ್ಮರಣೆಯಿಂದ ಬದುಕು ಹಸನಾಗಲಿದ್ದು ಮನಸ್ಸು, ಶರೀರ, ಭಾವನೆಗಳು ಶುದ್ಧಿಯಾಗಲಿವೆ. 12ನೇ ಶತಮಾನದಲ್ಲಿಯೇ ಇಂದಿನ ಸರ್ಕಾರಗಳ ಯೋಜನೆಗಳನ್ನು ಅಂದೇ ಮಾಡಲಾಗಿತ್ತು. ಅಂತಹ ವ್ಯಕ್ತಿಯನ್ನು ಜಯಂತಿಯನ್ನು ನಡೆದಾಡುವ ದೇವರು ರಂಗಾಪುರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಎಂದರು.
ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಿ, ಸರ್ಕಾರ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವ ಬದಲು ಶಿಕ್ಷಕರಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಅದರಂತೆ ಎಲ್ಲಾ ರಾಜಕೀಯ ಮುಖಂಡರಿಗೆ ಮೊದಲು ನೈತಿಕ ಶಿಕ್ಷಣ ಅನಿವಾರ್ಯವಾಗಿದೆ. ರಾಜಕೀಯ ಸಭೆಗಳಲ್ಲಿ ನಿಂದನೆ, ವೈಯಕ್ತಿಕ ವಿಷಯಗಳ ಪ್ರಸ್ತಾಪ, ಅವಹೇಳನಕಾರಿ ಮಾತು ಹೆಚ್ಚಾಗುತ್ತಿದ್ದು ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದ್ದು ನಾಲಿಗೆಯ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದಾರೆ. ವ್ಯಕ್ತಿಗತ, ವೈಯಕ್ತಿಕ ನಿಂದನೆಗಳು ಜನರಿಗೆ ಕೆಟ್ಟಸಂದೇಶ ರವಾನೆಯಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ಶಾಸನ ತರಬೇಕೆಂದ ಶ್ರೀಗಳು ಪ್ರಜಾಪ್ರಭುತ್ವದಲ್ಲಿ ಕುಂಟುವ, ನಿಂದನೆ ಮಾಡುವ ವ್ಯಕ್ತಿಯನ್ನು ಆಯ್ಕೆಮಾಡಬೇಡಿ ಎಂದು ಜನರಿಗೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಕೆರೆಗೋಡಿ-ರಂಗಾಪುರದ ಗುರುಪರದೇಶಿಕೇಂದ್ರ ಸ್ವಾಮೀಜಿ, ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಮಠದ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸದ ಜಿ.ಎಸ್. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನೊಳಂಬವಾಣಿ, ಗುರುಸಿದ್ದರಾಮ, ಕಾಯಕಯೋಗಿಗಳು ಹಾಗೂ ಒಳನಾಡಿನ ಒಡನಾಟ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ವಿದ್ವಾಂಸ ಡಾ. ಬಿ. ರಾಜಶೇಖರಪ್ಪಗೆ ಸಿದ್ದರಾಮ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಸಚಿವರಾದ ಬಿ.ಸಿ. ನಾಗೇಶ್, ಗೋವಿಂದಕಾರಜೋಳ, ಶಾಸಕರಾದ ಹರೀಶ್, ಜ್ಯೋತಿಗಣೇಶ್, ಮಸಾಲೆ ಜಯರಾಂ, ಮಾಜಿ ಶಾಸಕರಾದ ಶಿವಣ್ಣ, ಎಂ.ಡಿ. ಲಕ್ಷ್ಮೀನಾರಾಯಣ್, ನೊಳಂಬ ಲಿಂಗಾಯತ ಸಂಘದ ರಾಜ್ಯಾಧ್ಯಕ್ಷರ ಎಸ್.ಆರ್. ಪಾಟೀಲ್, ನಟರಾದ ಮುಖ್ಯಮಂತ್ರಿ ಚಂದ್ರು, ಡಾಲಿ ಧನಂಜಯ್, ಮನು ಬಸವರಾಜು, ಉದ್ಯಮಿ ಅರುಣ್‌ಕುಮಾರ್, ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ, ಕೆ.ಎಂ.ಎಫ್. ನಿರ್ದೇಶಕರಾದ ಮಾದೀಹಳ್ಳಿ ಪ್ರಕಾಶ್, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸ್ವಾಗತ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಮಾರಂಭಕ್ಕೂ ಮುನ್ನ ಗೋಡೆಕೆರೆ ಭೂಸುಕ್ಷೇತ್ರಾಧಿದೈವ ಸಿದ್ದರಾಮೇಶ್ವರ ಸ್ವಾಮಿಯವರ ವೈಭವದ ಮೆರವಣಿಗೆಯು ನಗರದ ಶ್ರೀ ಕಲ್ಲೇಶ್ವರ ದೇವಸ್ಥಾನದಿಂದ ಹರಗುರು ಚರಮೂರ್ತಿಗಳೊಂದಿಗೆ ಸಕಲ ಬಿರುದು-ಬಾವಲಿಗಳೊಂದಿಗೆ, ಸುಮಂಗಲೆಯರಿಂದ 850 ಪೂರ್ಣಕುಂಭಗಳು ಜೊತೆ ನಂದಿಧ್ವಜ, ಚಿಟ್ಟಿಮೇಳ, ಲಿಂಗದವೀರರ ಕುಣಿತ, ಕರಡಿ ವಾದ್ಯ, ಡೊಳ್ಳುಕುಣಿತ, ಸ್ಥಳೀಯ ತಮಟೆ ವಾದ್ಯ, ನಾದಸ್ವರ, ಕೇರಳದ ಚಂಡೇವಾದ್ಯ, ಗೊಂಬೆ ಕುಣಿತ ಮೊದಲಾದ ವಿವಿಧ ಜಾನಪದ ಸಾಂಸ್ಕೃತಿಕ ಕಲಾಪ್ರದರ್ಶನಗಳೊಂದಿಗೆ ರಾಜಬೀದಿಗಳಲ್ಲಿ ವೈಭವಯುತ ಸುಮಾರು 3ಕಿಮೀ ಸಾಗಿ ಸಭಾಮಂಟಪ ತಲುಪಿತು.
ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳನ್ನು ಗೆಲ್ಲೋಣ: ಶಾಸಕ ತಿಪ್ಪಾರೆಡ್ಡಿ
ರಾಜ್ಯ ಮಟ್ಟದ ಕೃಷಿ ಪ್ರದರ್ಶನ: ಕೃಷಿ ಪ್ರದರ್ಶನವು ಬೆಂಗಳೂರಿನ ಜಿಕೆವಿಕೆಯನ್ನು ಮೀರಿಸುವಂತಿತ್ತು. 250ಕ್ಕೂ ಹೆಚ್ಚು ಕೃಷಿ ಮಳಿಗೆಗಳನ್ನು ತೆರೆಯಲಾಗಿತ್ತು. ವಿವಿಧ ವೈಜ್ಞಾನಿಕ, ತಾಂತ್ರಿಕ ಆಕರ್ಷಕ ಕೃಷಿ ಯಂತ್ರೋಪಕರಣಗಳು ಎಲ್ಲರ ಗಮನಸೆಳೆದವು.
ಜನಸ್ತೋಮ: ಸಿದ್ದರಾಮ ಜಯಂತಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಎಲ್ಲರಿಗೂ ಊಟ, ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರದ ಬಿಎಚ್ ರಸ್ತೆಯಿಂದ ಹಾಸನ ರಸ್ತೆಯುದ್ದಕ್ಕೂ ಜನರ ದಂಡು ಸಾಗುತ್ತಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದರು.