RSS ಕೈವಾಡ ಇರೋದ್ರಿಂದ ಕುರುಬ ಹೋರಾಟಕ್ಕೆ ಹೋಗಲ್ಲ: ಸಿದ್ದರಾಮಯ್ಯ

By Kannadaprabha News  |  First Published Dec 4, 2020, 11:53 AM IST

ರೈತರ ಹೋರಾಟಕ್ಕೆ ಬೆಂಬಲ| ಸರ್ಕಾರ ಟೇಕ್‌ಆಫ್‌ ಆಗಿಲ್ಲ, ಸಿಎಂ ಬಿಎಸ್‌ವೈ ಬದಲಾಗ್ತಾರೆ| ಲವ್‌ ಜಿಹಾದ್‌ ಕುರಿತು ಮಾತನಾಡುವಾಗ ಅದು ಅಸಂವಿಧಾನಿಕ ಅಂತ ನಾನು ಹೇಳಿದ್ದೀನಿ. ಅದನ್ನು ಬೇರೆಯವರು ಬೇರೆ ರೀತಿಯಲ್ಲಿ ಅರ್ಥ ಕಲ್ಪಿಸಿಕೊಂಡರೆ ಏನು ಮಾಡುವುದು: ಸಿದ್ದರಾಮಯ್ಯ| 


ಮೈಸೂರು(ಡಿ.03): ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರದಲ್ಲಿ ಆರ್‌ಎಸ್‌ಎಸ್‌ ಕೈವಾಡ ಇರುವುದರಿಂದ ನಾನು ಈ ಹೋರಾಟಕ್ಕೆ ಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರನ್ನು ಆರ್‌ಎಸ್‌ಎಸ್‌ನವರು ಕೈಗೊಂಬೆಯಂತೆ ಆಟ ಆಡಿಸುತ್ತಿದ್ದಾರೆ. ಕುರುಬರ ಪರವಾಗಿ ಈಶ್ವರಪ್ಪ ಈ ಮೊದಲು ಯಾವಾಗ ಹೋರಾಟ ಮಾಡಿದ್ದರ? ಎಂದು ಪ್ರಶ್ನಿಸಿದರು.

Tap to resize

Latest Videos

undefined

ಈಶ್ವರಪ್ಪನವರು ಅವರ ಸ್ವಂತ ಲಾಭಕ್ಕಾಗಿ ಸಂಗೊಳಿ ರಾಯಣ್ಣ ಬ್ರಿಗೇಡ್‌ ಮಾಡಿದ್ದರು. ಈಗ ಬ್ರಿಗೇಡ್‌ ಏನಾಯಿತು? ಉಡುಪಿಯಲ್ಲಿ ಕನಕ ಗೋಪುರ ಒಡೆದು ಹಾಕಲಾಯಿತು. ಆಗ ಕನಕನ ಕಿಂಡಿಯನ್ನೇ ಒಡೆದು ಹಾಕುವ ಪ್ರಯತ್ನ ನಡೆಯಿತು. ಆ ವೇಳೆಯೂ ಈಶ್ವರಪ್ಪ ದೇಗುಲದವರ ಪರವಾಗಿಯೇ ಮಾತನಾಡಿದರು. ಇವರಿಗೆ ಕೆಳ ವರ್ಗದ ಪರವಾಗಲಿ ಅಥವಾ ಬಡವರ ಪರವಾಗಲಿ ಕಾಳಜಿ ಇಲ್ಲ ಎಂದು ಅವರು ಟೀಕಿಸಿದರು.

ಸಂಸದ ಅನಂತಕುಮಾರ್‌ ಹೆಗಡೆ ಸಂವಿಧಾನವನ್ನೇ ಸುಟ್ಟು ಹಾಕಬೇಕು ಎಂದಾಗ ಇವರು ಹೋರಾಟ ಮಾಡಿದ್ದರೆ? ಕುರುಬರಿಗೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಜನರ ದಾರಿ ತಪ್ಪಿಸಲಾಗುತ್ತಿದೆ. ಈ ವಿಚಾರದಲ್ಲಿ ನನ್ನ ಮೇಲೆ ಕೆಟ್ಟಹೆಸರು ಬರುವಂತೆ ಮಾಡಲಾಗುತ್ತಿದೆ. ಇದೆಲ್ಲದರ ಹಿಂದೆ ಆರ್‌ಎಸ್‌ಎಸ್‌ ಕೈವಾಡವಿದೆ ಎಂದು ಅವರು ದೂರಿದರು.

ಯಾವ್ ಕಾರಣಕ್ಕೂ ಹೀಗ್ ಮಾಡ್ಬೇಡಿ : BSY ಗೆ ಸಿದ್ದರಾಮಯ್ಯ ಪತ್ರ

ಕುರುಬರ ಮೀಸಲಾತಿ ಹೋರಾಟದಲ್ಲಿ ನನ್ನನ್ನು ಗುರಿಯಾಗಿಸಿಕೊಳ್ಳಲಾಗಿದೆ. ನನ್ನನ್ನು ಐಸೋಲೆಟ್‌ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ. ಈ ಹೋರಾಟಕ್ಕೆ ನನ್ನನ್ನು ನೂರಕ್ಕೆ ನೂರರಷ್ಟುಕರೆದಿಲ್ಲ. ಒಂದೆ ಒಂದು ಬಾರಿ ಈಶ್ವರಪ್ಪ ಪೋನ್‌ ಮಾಡಿದ್ದರು. ಅದನ್ನು ಬಿಟ್ಟರೆ ನನ್ನನ್ನು ಕರೆದಿಲ್ಲ. ಪೋನ್ನಲ್ಲೆ ಇಲ್ಲಪ್ಪ ನಾನು ಬರೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದೆ. ಆ ಹೋರಾಟ ರಾಜಕಿಯೇತರ ಹೋರಾಟ ಆಗಿದ್ದರೆ ನಾನು ಹೋಗುತ್ತಿದ್ದೆ. ಅದು ಆರ್‌ಎಸ್‌ಎಸ್‌ ಮಾಡಿಸುತ್ತಿರುವ ಹೋರಾಟ. ಕುರುಬರನ್ನು ಒಡೆಯವ ಹುನ್ನಾರ ಅದು. ಅದಕ್ಕೆ ಈಶ್ವರಪ್ಪನವರು ಕೈಗೊಂಬೆಯಾಗಿದ್ದಾರೆ. ಈಶ್ವರಪ್ಪ ಕುರುಬರ ಪರವಾಗಿ ಅದ್ಯಾವಾಗ ಹೋರಾಟ ಮಾಡಿದ್ದಾರೆ ಹೇಳಿ. ಸ್ವಾರ್ಥಕ್ಕಾಗಿ ರಾಯಣ್ಣ ಬ್ರಿಗೇಡ್‌ ಮಾಡಿದ್ದರು. ಕುರುಬರ ಮಠ ಕಟ್ಟುವಾಗ ಎಲ್ಲಿದ್ದರು ಎಂದು ಅವರು ಹರಿಹಾಯ್ದರು.

ಸರ್ಕಾರ ಟೇಕ್‌ ಆಫ್‌ ಆಗಿಲ್ಲ

ರಾಜ್ಯ ಸರ್ಕಾರ ಈವರೆಗೂ ಟೇಕ್‌ ಅಪ್‌ ಆಗಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ಇದೆ. ಸರ್ಕಾರ ಇದ್ದೂ ಇಲ್ಲದಂತಾಗಿದೆ. ಯಡಿಯೂರಪ್ಪ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಆಗಿದ್ದಾರೆ.

ರೈತರ ಹೋರಾಟಕ್ಕೆ ಬೆಂಬಲ

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಬೃಹತ್‌ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ನಮ್ಮ ಪಕ್ಷದ ಕಾರ್ಯಕರ್ತರೂ ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ನಮ್ಮ ಪಕ್ಷವೂ ರೈತರ ಹೋರಾಟಕ್ಕೆ ಬೆಂಬಲ ನೀಡಿದೆ. ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ಕೇಳಿ ಪರಿಹರಿಸಬೇಕು. ಸಮಿತಿಯೊಂದನ್ನು ಮಾಡಿ ಅದರಿಂದ ಸಮಸ್ಯೆಗೆ ಉತ್ತರ ಹುಡುಕುತ್ತೀವಿ ಅಂತ ಹೇಳಿದರೆ ಅರ್ಥವಿಲ್ಲ ಎಂದರು.

'ಹಿಂದೂ -ಮುಸ್ಲಿಂ ಕ್ರಾಸ್ ಬೀಡ್‌ನಿಂದ ಬಹಳಷ್ಟು ಜನ ಹುಟ್ಟಿದಾರ್ರಿ...'

ಲವ್‌ ಜಿಹಾದ್‌ ಕುರಿತು ಮಾತನಾಡುವಾಗ ಅದು ಅಸಂವಿಧಾನಿಕ ಅಂತ ನಾನು ಹೇಳಿದ್ದೀನಿ. ಅದನ್ನು ಬೇರೆಯವರು ಬೇರೆ ರೀತಿಯಲ್ಲಿ ಅರ್ಥ ಕಲ್ಪಿಸಿಕೊಂಡರೆ ಏನು ಮಾಡುವುದು. ನಾನು ಹೇಳಿದ್ದು ಆ ಕಾನೂನು ನ್ಯಾಯಾಲಯದಲ್ಲಿ ನಿಲ್ಲೋದಿಲ್ಲ ಅಂತ. ಮದುವೆಯಾಗುವುದು ಅವರವರ ಆಯ್ಕೆ. ಅದಕ್ಕೆ ಕಾನೂನು ಮಾಡಿದರೆ ಹೇಗೆ. ಸಾಲ ಮಾಡಿ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು ಎಂಬ ಸಚಿವ ಬಿ ಸಿ ಪಾಟೀಲ್‌ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ. ಅವರು ಆ ರೀತಿ ಹೇಳಿಕೆ ನೀಡಿದ್ದರೆ ಅದು ತಪ್ಪು. ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆ ರೀತಿಯ ಹೇಳಿಕೆ ನೀಡಬಾರದು ಎಂದು ಅವರು ಕಿವಿಮಾತು ಹೇಳಿದರು.

ಯಡಿಯೂರಪ್ಪ ಬದಲಾವಣೆ ಆಗುತ್ತಾರೆ

ಬಿಜೆಪಿಗೆ ನಾನೇನು ಹೈಕಮಾಂಡ್‌ ಅಲ್ಲ. ಅಲ್ಲಿನ ಮಾಹಿತಿ ಕಲೆ ಹಾಕಲು ಹೈಕಮಾಂಡ್‌ ಜೊತೆ ಸಂಪರ್ಕದಲ್ಲಿ ಇರಬೇಕು ಎಂದೇನು ಇಲ್ಲ. ಆ ಬಗ್ಗೆ ಮಾಹಿತಿ ಕಲೆ ಹಾಕಲು ಬೇಕಾದಷ್ಟುಸುದ್ದಿ ಮೂಲಗಳಿವೆ. ಆ ಮೂಲಗಳಿಂದ ನನಗೆ ಮಾಹಿತಿ ಲಭ್ಯವಾಗಿದೆ. ನನಗೆ ಬಂದಿರುವ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಆಗುತ್ತಾರೆ. ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲಿದೆ. ಸದ್ಯ ಈಗ ರಾಜ್ಯದಲ್ಲಿ ಸರ್ಕಾರ ಇದೆ ಎಂದು ನನಗಂತೂ ಅನಿಸುತ್ತಿಲ್ಲ. ಯಡಿಯೂರಪ್ಪ ಒಬ್ಬ ಅಸಮರ್ಥ ಮುಖ್ಯಮಂತ್ರಿ. ಈ ಹಿಂದೆಯೂ ಸಮರ್ಥವಾಗಿ ಇರಲಿಲ್ಲ, ಈಗಲೂ ಇಲ್ಲ ಎಂದು ಕಟುವಾಗಿ ಟೀಕಿಸಿದರು.

ಜಿಟಿಡಿ ಬಗ್ಗೆ ಆರೋಪಿಸಿಲ್ಲ

ಶಾಸಕ ಜಿ.ಟಿ. ದೇವೇಗೌಡರು ಹಣ ಪಡೆದು ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ನಾನು ಹೇಳಿಯೇ ಇಲ್ಲ. ಅದು ಕ್ಲೋಸ್‌ ಡೋರ್‌ ಮೀಟಿಂಗ್‌ನಲ್ಲಿ ಚರ್ಚೆ ಆಗಿರುವ ವಿಷಯ. ನಾನು ಹೀಗೆ ಹೇಳಿದೆ ಅಂತ ನಿಮಗೆ ಹೇಳಿದವರು ಯಾರು? ನಾನು ಕೆಲ ವಿಚಾರಗಳನ್ನು ಹೇಳಿರುವುದು ಸತ್ಯ. ಆದರೆ ಜಿ.ಟಿ. ದೇವೇಗೌಡರು ಹಣ ಪಡೆದು ಬಿಜೆಪಿಗೆ ಕೆಲಸ ಮಾಡಿದ್ದಾರೆ ಅಂತ ಹೇಳಿಲ್ಲ. ನಾವು ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಾರದಿತ್ತು ಅಂತ ಹೇಳಿದೆ. ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ನಾವು ಮೈಸೂರು, ಮಂಡ್ಯ, ತುಮಕೂರು ಎಲ್ಲಾ ಕಡೆ ಗೆಲುತ್ತ ಇದ್ದೆವು. ಜೆಡಿಎಸ್‌ ಕಾರ್ಯಕರ್ತರಿಗೂ ನಮಗೂ ಹೊಂದಾಣಿಕೆ ಆಗಲಿಲ್ಲ. ಈ ರೀತಿ ನಾನು ಮಾತನಾಡಿದೆ. ಆದರೆ ಜಿಟಿಡಿ ವಿಷಯದಲ್ಲಿ ವದಂತಿ ಹಬ್ಬಿಸಲಾಗಿದೆ ಎಂದು ಅವರು ದೂರಿದರು.

ಸೂಪರ್‌ ಸ್ಟಾರ್‌ ರಜನಿಕಾಂತ್‌ಗೆ ಒಳ್ಳೆಯದಾಗಲಿ. ಅವರ ಭವಿಷ್ಯ ಉಜ್ವಲವಾಗಲಿ. ರಜನಿಕಾಂತ್‌ ಮಾತ್ರವಲ್ಲ, ಎಲ್ಲರಿಗು ನಾನು ಶುಭಕೋರುತ್ತೇನೆ. ಭ್ರಷ್ಟಮುಕ್ತ ಮಾಡುತ್ತೇನೆ ಎಂದು ಎಲ್ಲರು ಹೊಸ ಪಕ್ಷ ಕಟ್ಟುತ್ತಾರೆ. ಆದರೆ ಅದು ಆಗಿದೆಯಾ ಎಂದು ಅವರು ಪ್ರಶ್ನಿಸಿದರು.

ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಸಿ.ಪಿ. ಯೋಗೇಶ್ವರ್‌ ಹಣ ಪಡೆದಿದ್ದಾರೆ ಎಂದು ಎಚ್‌. ವಿಶ್ವನಾಥ್‌ ಆರೋಪಿಸಿದ್ದಾರೆ. ಅದು ಕಪ್ಪು ಹಣನಾ ಅಲ್ಲವೋ ಎಂಬ ಕುರಿತು ತನಿಖೆ ಆಗಬೇಕು. ಅಷ್ಟೊಂದು ದೊಡ್ಡ ಮೊತ್ತದ ಹಣ ಕೊಟ್ಟಿದ್ದು ಯಾರು? ಯಡಿಯೂರಪ್ಪ ಕೊಟ್ಟಿದ್ದರಾ? ಉಳಿದ 16 ಕ್ಷೇತ್ರಗಳಿಗೂ ಅಷ್ಟೇ ಪ್ರಮಾಣದ ಹಣ ಹೋಗಿತ್ತಾ? ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಯಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 
 

click me!