ಬಿಜೆಪಿಯಲ್ಲಿ ಯಡಿಯೂರಪ್ಪಗೆ ಪರ್ಯಾಯ ನಾಯಕರಿಲ್ಲ: ಸಿದ್ದರಾಮಯ್ಯ

By Kannadaprabha News  |  First Published May 29, 2021, 2:55 PM IST

* ಕೋವಿಡ್‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ
* ಯಡಿಯೂರಪ್ಪ ಮೇಲೆ ನನಗೆ ಪ್ರೀತಿಯೂ ಇಲ್ಲ, ದ್ವೇಷವೂ ಇಲ್ಲ
* ಮುಖ್ಯಮಂತ್ರಿಯಾಗಿ ಕೆಲಸ ಮಾಡುವಲ್ಲಿ ಯಡಿಯೂರಪ್ಪ ವಿಫಲರಾಗಿರುವುದು ಸ್ಪಷ್ಟ     
 


ಹುಬ್ಬಳ್ಳಿ(ಮೇ.29):  ಬಿಜೆಪಿಯಲ್ಲಿ ಯಡಿಯೂರಪ್ಪಗೆ ಪರ್ಯಾಯ ಸಮರ್ಥ ನಾಯಕರೇ ಇಲ್ಲ. ಹಾಗಾಗಿ ಸದ್ಯ ಯಡಿಯೂರಪ್ಪ ಅವರನ್ನು ಬದಲಾಯಿಸದಿರಲು ನಿರ್ಧರಿಸಿರಬಹುದು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.  

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಬೀದಿ ಕಾಳಗ ನಡೆಯುತ್ತಿದೆ. ಯಡಿಯೂರಪ್ಪ ಅವರನ್ನು ಬದಲಿಸಬೇಕೆಂದು ಹೈಕಮಾಂಡ್‌ ಈ ಮೊದಲು ತೀರ್ಮಾನಿಸಿತ್ತು. ಕೆಲ ಬಿಜೆಪಿ ಶಾಸಕರೂ ನಾಯಕತ್ವ ಬದಲಾವಣೆ ಬಯಸಿದ್ದರು. ಆದರೆ ಕೊರೋನಾ ಬಂದಿದ್ದರಿಂದ ಉಳಿಸಿಕೊಂಡಿರಬಹುದು. ಇದರೊಂದಿಗೆ ಯಡಿಯೂರಪ್ಪಗೆ ಪರ್ಯಾಯ ಸಮರ್ಥ ನಾಯಕ ಬಿಜೆಪಿಯಲ್ಲಿ ಇಲ್ಲದಿರುವುದೂ ಕಾರಣವಿರಬಹುದು ಎಂದರು.

Latest Videos

undefined

ಒಂದು ವೇಳೆ ಯಡಿಯೂರಪ್ಪ ಅವರನ್ನು ಬದಲಿಸಿದರೂ ಸರ್ಕಾರ ಪತನವಾಗುತ್ತದೆ ಎಂದೇನೂ ನನಗೆ ಅನಿಸುವುದಿಲ್ಲ ಎಂದ ಅವರು, ಯಡಿಯೂರಪ್ಪ ಮೇಲೆ ನನಗೆ ಪ್ರೀತಿಯೂ ಇಲ್ಲ. ದ್ವೇಷವೂ ಇಲ್ಲ. ಮನುಷ್ಯತ್ವದ ಸಂಬಂಧವಿದೆ ಅಷ್ಟೇ. ಆದರೆ ಮುಖ್ಯಮಂತ್ರಿಯಾಗಿ ಕೆಲಸ ಮಾಡುವಲ್ಲಿ ಯಡಿಯೂರಪ್ಪ ವಿಫಲರಾಗಿರುವುದು ಸ್ಪಷ್ಟ ಎಂದರು.

ಕಾಂಗ್ರೆಸ್ಸಿಗೆ ಬಂದ ಮೇಲೆ ಸಿದ್ದರಾಮಯ್ಯ ಡಿಎನ್‌ಎ ಬದಲಾಗಿದೆ: ಪ್ರಹ್ಲಾದ ಜೋಶಿ

ಅವರ ಪಕ್ಷದ ಕೆಲವರು ನಾಯಕತ್ವ ಬದಲಾವಣೆ ಬಯಿಸಿದ್ದಾರೆ. ಅದಕ್ಕೆ ಅವರಲ್ಲೇ ಪರವಿರೋಧ ನಡೆದಿದೆ. ಲೂಟಿ ಹೊಡೆಯುವ ಖಾತೆಗಾಗಿ ಕೆಲವರು ನಾಯಕತ್ವ ಬದಲಾವಣೆ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೇ ಹೇಳಿದ್ದಾರೆ. ಒಟ್ಟಿನಲ್ಲಿ ನಾಯಕತ್ವ ಬದಲಾವಣೆ ವಿಚಾರ ಆ ಪಕ್ಷದಲ್ಲಿ ಬೀದಿ ಕಾಳಗವಾದಂತಾಗಿದೆ ಎಂದರು.

ಕೊರೋನಾ ನಿರ್ವಹಣೆ ವಿಫಲ:

ಕೋವಿಡ್‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಯಾವುದು ಬೇಕು ಅದನ್ನು ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದ ಅವರು, 2ನೆಯ ಅಲೆ ಬರುತ್ತದೆ ಎಂಬುದು ಗೊತ್ತಿದ್ದು ಕೂಡ ಯಾವ ಸೌಲಭ್ಯಗಳನ್ನು ಕಲ್ಪಿಸಬೇಕಿತ್ತು. ಆ ಸಿದ್ಧತೆ ಮಾಡಿಕೊಂಡಿರಲಿಲ್ಲ. ಈಗಲೂ ಸಾವಿನ ಸಂಖ್ಯೆ ಹೆಚ್ಚಿದೆ ಎಂದರು.

ಮಂತ್ರಿಗಳು, ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಚಾಮರಾಜನಗರದಲ್ಲಿನ ಸಾವಿನ ಸಂಖ್ಯೆ ವಿಷಯದಲ್ಲಿ ಆರೋಗ್ಯ ಸಚಿವ ಕೆ. ಸುಧಾಕರ ಮೊದಲು ಸುಳ್ಳು ಹೇಳಿದ್ದರು. ಬಳಿಕ ತಾವು ಹೋಗಿ ಸಭೆ ನಡೆಸಿದ ಮೇಲೆ ಸತ್ಯಾಂಶ ಬೆಳಕಿಗೆ ಬಂದಿತು. ಇದೀಗ ಸರ್ಕಾರವೇ 24 ಜನರಿಗೆ ಪರಿಹಾರ ಕೊಟ್ಟಿದೆ ಎಂದರು.

ಇದೇ ರೀತಿ ಬೇರೆ ಬೇರೆ ಕಡೆಯೂ ಸುಳ್ಳು ಹೇಳಿದ್ದಾರೆ. ಸತ್ಯ ಎಲ್ಲಿ ಹೊರಗೆ ಬರುತ್ತದೆ ಎಂಬ ಭಯದಿಂದ ವಿರೋಧ ಪಕ್ಷದ ನಾಯಕರಾದ ತಮಗೆ ಅಧಿಕಾರಿಗಳ ಸಭೆ ನಡೆಸಲು ಅನುಮತಿ ನೀಡಲಿಲ್ಲ ಎಂದು ಟೀಕಿಸಿದ ಅವರು, 3ನೆಯ ಅಲೆ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಬರುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಸರ್ಕಾರ ಈ ಸಂಬಂಧ ಯಾವುದೇ ಬಗೆಯ ಸಿದ್ಧತೆ ಮಾಡಿಕೊಂಡಿಲ್ಲ ಎಂದರು.
 

click me!