ಮಹಾದೇವಪುರ ವಲಯಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ, ಜನರ ಸಮಸ್ಯೆ ಆಲಿಸಿ, ಒತ್ತುವರಿ ಮಾಹಿತಿ ಪಡೆದ ಮುಖಂಡ
ಬೆಂಗಳೂರು(ಸೆ.09): ಮಳೆಗೆ ಮುಳುಗಡೆಯಾಗಿದ್ದ ಮಹದೇವಪುರ ವಲಯದ ರೇನ್‌ಬೋ ಡ್ರೈವ್ ಲೇಔಟ್, ಬಳಗೆರೆ ಮುಖ್ಯರಸ್ತೆಯಲ್ಲಿರುವ ದಿಶಾ ಸೆಂಟ್ರಲ್‌ಪಾರ್ಕ್ ಅಪಾರ್ಟ್‌ಮೆಂಟ್, ಯಮಲೂರಿನ ಎಪ್ಸಿಲಾನ್ ಲೇಔಟ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚು ಹಾನಿಗೆ ಒಳಗಾಗಿದ್ದ ರೈನ್‌ಬೋ ಡ್ರೈವ್ ಲೇಔಟ್‌ನ 500ಕ್ಕೂ ಅಧಿಕ ಮನೆಗಳಲ್ಲಿ ಶೇಕಡ 50ರಷ್ಟು ಮನೆಗಳಿಗೆ ನೀರು ನುಗ್ಗಿತ್ತು. ಸ್ಥಳೀಯರು ಆಗಮಿಸಿ ತಮಗಾಗಿರುವ ತೊಂದರೆಯನ್ನು ತೋಡಿಕೊಂಡರು. ಅಲ್ಲಿನ ರಾಜಕಾಲುವೆ ಪ್ರದೇಶಕ್ಕೂ ಭೇಟಿ ನೀಡಿದ ಸಿದ್ದರಾಮಯ್ಯ, ಒತ್ತುವರಿ ಆಗಿರುವ ಪ್ರದೇಶಗಳ ಮಾಹಿತಿ ಪಡೆದರು.
ವರ್ತೂರು ಬಳಿಯ ರಾಜಕಾಲುವೆ ಪರಿಶೀಲಿಸಿದ ಅವರು, ನಂತರ 306 ಫ್ಲಾಟ್‌ಗಳಿರುವ ಬಳಗೆರೆ ಮುಖ್ಯ ರಸ್ತೆಯಲ್ಲಿರುವ ದಿಶಾ ಸೆಂಟರ್ ಪಾರ್ಕ್ ಅಪಾರ್ಚ್‌ಮೆಂಟ್‌ನ 1 ಮತ್ತು 2ನೇ ಬ್ಲಾಕ್ ಸಂಪೂರ್ಣ ಜಲಾವೃತವಾಗಿದೆ. ಐಷರಾಮಿ ಕಾರುಗಳು, ಲಿಫ್ಟ್ ಕೂಡ ನೀರಿನಲ್ಲಿ ಮುಳುಗಿ ಬಹುತೇಕ ಹಾಳಾಗಿತ್ತು. ಈ ಆಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಪರಿಶೀಲಿಸಿದ ಸಿದ್ದರಾಮಯ್ಯ ಅವರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಘದ ಅಧ್ಯಕ್ಷ ರಾಮಾಂಜನೇಯಲು ಅವರೊಂದಿಗೆ ಮಾತುಕತೆ ನಡೆಸಿದರು. ಅಪಾರ್ಚ್‌ಮೆಂಟ್‌ಗೆ ನುಗ್ಗಿರುವ ನೀರನ್ನು ಹೊರ ಹಾಕಲು ಕ್ರಮಕೈಗೊಂಡಿರುವುದಾಗಿ ರಾಮಾಂಜನೇಯಲು ಮಾಹಿತಿ ನೀಡಿದರು.
Karnataka Floods: ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ
ಯುಮಲೂರು ಎಪ್ಸಿಲಾನ್ ಲೇಔಟ್‌ನಲ್ಲಿ ಮಳೆ ಹಾನಿ ಹೆಚ್ಚಾಗಿದ್ದು, ಸುಮಾರು ಮೂರ್ನಾಲ್ಕು ಅಡಿ ನೀರು ತುಂಬಿಕೊಂಡಿದೆ. ಸದ್ಯ ಮೋಟಾರು ಪಂಪ್ ಮೂಲಕ ನೀರು ಹೊರ ಹಾಕುವ ಕಾರ್ಯ ಮುಂದುವರೆದಿತ್ತು. ಈ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ ಸಿದ್ದರಾಮಯ್ಯ ಅವರು, ಪರಿಹಾರ ಕಾರ್ಯ ಶೀಘ್ರ ಕೈಗೊಳ್ಳಬೇಕೆಂದು ಸೂಚಿಸಿದರು.
ರೈನ್‌ಬೋ ನಿವಾಸಿಗಳಿಗೆ ನಿರಾಸೆ ಮೂಡಿಸಿದ ಸಿದ್ದು
ರೈನ್‌ಬೋ ಲೇಔಟ್ ಬಹುತೇಕ ಜಲಾವೃತವಾಗಿದ್ದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಲೇಔಟ್ ಒಳಗೆ ಪ್ರವೇಶಿಸಲಿಲ್ಲ. ಬದಲಿಗೆ ಗೇಟ್ ಮುಂಭಾಗದಲ್ಲಿ ನಿಂತು ಪರಿಸ್ಥಿತಿ ಅವಲೋಕಿಸಿದ ಅವರು, ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕೆಲಹೊತ್ತು ಮಾತನಾಡಿದರು. ಸ್ಥಳೀಯರ ಸಮಸ್ಯೆ ಕೇಳಲು ಮುಂದಾಗಲಿಲ್ಲ. ಇದರಿಂದ ರೈನ್‌ಬೋ ಲೇಔಟ್ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
ಬೋಟ್‌ನಲ್ಲಿ ವೀಕ್ಷಣೆ
ಬೆಳ್ಳಂದೂರು ವರ್ತುಲ ರಸ್ತೆಯ ಇಕೋಸ್ಪೇಸ್ ಪ್ರದೇಶಕ್ಕೆ ಬೋಟ್‌ನಲ್ಲಿ ತೆರಳಿ ವೀಕ್ಷಿಸಿದರು. ರಾಜ್ಯ ವಿಕೋಪ ನಿರ್ವಹಣಾ ಪಡೆಯ ಸಿಬ್ಬಂದಿ ಬೋಟ್‌ನಲ್ಲಿ ವಿವಿಧೆಡೆಗೆ ಕರೆದೊಯ್ದು ಪರಿಸ್ಥಿತಿ ಕುರಿತು ವಿವರಣೆ ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು.
Bengaluru rain : ಬೊಮ್ಮನಹಳ್ಳಿಯಲ್ಲಿ 2000 ಜನ ಸಂಕಷ್ಟದಲ್ಲಿ!
ಕೊಳಗೇರಿಗೆ ಭೇಟಿ: ಕಳೆದ ಮೂರು ದಿನಗಳ ಹಿಂದೆ ಸುರಿದ ಮಳೆಗೆ ಸಂಪೂರ್ಣ ಜಲಾವೃತಗೊಂಡಿದ್ದ ಮುನ್ನೇಕೊಳಲು ಕೊಳಗೇರಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ಕೊಳಗೇರಿಯ ನಿವಾಸಿಗಳಿಗೆ ಬೆಡ್‌ಶೀಟ್, ಸೀರೆಗಳನ್ನು ವಿತರಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕೂಡಲೇ ಪರಿಹಾರ ಕ್ರಮಕೈಗೊಂಡು ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು.
ಮೃತ ಯುವತಿ ಕುಟುಂಬಕ್ಕೆ ಸಾಂತ್ವನ
ಜಲಾವೃತಗೊಂಡಿದ್ದ ರಸ್ತೆಯಲ್ಲಿ ಪ್ರಯಾಣಿಸುವಾಗ ವಿದ್ಯುತ್ ಸ್ಪರ್ಶವಾಗಿ ಮೃತರಾದ ಮಹದೇವಪುರದ ಸಿದ್ದಾಪುರ ಗ್ರಾಮದ ಎಇಸಿಎಸ್ ಬಡಾವಣೆಯ ಯುವತಿ ಅಖಿಲಾ ಅವರ ನಿವಾಸಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಯುವತಿ ಕುಟುಂಬಕ್ಕೆ ವೈಯಕ್ತಿಕವಾಗಿ .1 ಲಕ್ಷ ನೀಡಿದ ಸಿದ್ದರಾಮಯ್ಯ ಅವರು, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ರಸ್ತೆ ಗುಂಡಿಯಿಂದ ಅಖಿಲಾ ಬಿದ್ದಿದ್ದಾರೆ. ಪರಿಹಾರವನ್ನು ಬೆಸ್ಕಾಂ ಕೊಡುತ್ತದೆ ಎಂದು ಸಬೂಬು ಹೇಳದೆ ನೀವೇ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.