ಶಿಕಾರಿಪುರದ ನೀರಾವರಿ ಯೋಜನೆ ವಿರೋಧಿಸಿ ಬಿ.ಡಿ. ಹಿರೇಮಠ ಅಮರಣಾಂತ ಉಪವಾಸ| ಹಿರೇಮಠರ ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲ| ರೈತರಿಗೆ ಗೊತ್ತಿಲ್ಲದಂತೆ ಡ್ರೋಣ್ ಮೂಲಕ ಸರ್ವೇ ಮಾಡಿ, ಜಿಲ್ಲಾಧಿಕಾರಿಗಳಿಗೆ ಮಾಹಿತಿ ಇಲ್ಲದೆ ನಡೆಸುತ್ತಿರುವ ಕಾಮಗಾರಿ ಇದಾಗಿದೆ| ಈ ಯೋಜನೆಯಿಂದ ಜಮೀನು ಕಳೆದುಕೊಂಡು ಬೀದಿಪಾಲಾಗಲಿರುವ ರೈತರು|
ರಟ್ಟೀಹಳ್ಳಿ(ಡಿ.10): ಕೆಲವು ಜನರ ಹಿತಾಸಕ್ತಿಗಾಗಿ ಉಳಿದವರನ್ನು ಬಲಿಕೊಡುವದು ಅನ್ಯಾಯ. ಆದ್ದರಿಂದ ಇಂತಹ ಅನ್ಯಾಯವನ್ನು ತಡೆಗಟ್ಟಲು ರೈತಪರ ಚಿಂತಕ, ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಟ್ಟೀಹಳ್ಳಿಗೆ ಆಗಮಿಸುವರು. ಈ ವೇಳೆ ಉಡುಗಣಿ- ತಾಳಗುಂದ ನೀರಾವರಿ ಯೋಜನೆ ವಿರೋಧಿಸಿ ಅಮರಣಾಂತ ಉಪವಾಸ ಕೈಗೊಂಡಿರುವ ಬಿ.ಡಿ.ಹಿರೇಮಠ ಅವರನ್ನು ಭೇಟಿ ಮಾಡಿ ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವರು ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಬುಧವಾರ ಹೇಳಿದ್ದಾರೆ.
ರಟ್ಟೀಹಳ್ಳಿಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶಿಕಾರಿಪುರದ ನೀರಾವರಿ ಯೋಜನೆ ವಿರೋಧಿಸಿ ಅಮರಣಾಂತ ಉಪವಾಸ ಕೈಗೊಂಡಿರುವ ಬಿ.ಡಿ. ಹಿರೇಮಠ ಅವರ ಹೋರಾಟಕ್ಕೆ ಬೆಂಬಲವಾಗಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ರಟ್ಟೀಹಳ್ಳಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿಯ ವತಿಯಿಂದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರೈತ ದೇಶಕ್ಕೆ ಅನ್ನ ಹಾಕುವ ಅನ್ನದಾತ. ಅಂತಹ ರೈತನ ಜಮೀನನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿರುವುದು ವಿಪರ್ಯಾಸ, ರೈತ ಮೊದಲು ಹೋರಾಟ ಮಾಡುವನು ತನ್ನ ಜಮೀನಿನ ಉಳಿವಿಗಾಗಿ ನಂತರ ಅಸಹಾಯಕನಾಗಿ ಉಪವಾಸ ಕೈಗೊಳ್ಳುವನು. ಈ ಅನ್ನದಾತನ ಕುರಿತು ಚಿಂತನೆ ಮಾಡದೆ ಇರುವ ಸರ್ಕಾರವು ಕಣ್ಣು, ಕಿವಿ, ಮೂಗು ಇಲ್ಲದ ರೀತಿಯಲ್ಲಿ ವರ್ತಿಸುತ್ತಿದೆ.
'ಕಾಂಗ್ರೆಸ್‌ನೊಳಗಿನ ಬಿಜೆಪಿ ಏಜೆಂಟರ ಬಗ್ಗೆ ಎಚ್ಚರಿಕೆ ಇರಲಿ'
ಉಡುಗಣಿ- ತಾಳಗುಂದ ನೀರಾವರಿ ಯೋಜನೆ ರೈತ ವಿರೋಧಿ ಯೋಜನೆ, ಅವೈಜ್ಞಾನಿಕವಾಗಿದ್ದು ಇದನ್ನು ನಿಲ್ಲಿಸಬೇಕು. ಈ ರೈತರ ಹಿತಾಸಕ್ತಿಗಾಗಿ ಯೋಜನೆ ವಿರೋಧಿಸಿ ಅಮರಣಾಂತ ಉಪವಾಸ ಕೈಗೊಂಡಿರುವ ಬಿ.ಡಿ. ಹಿರೇಮಠ ಅವರ ಹೋರಾಟಕ್ಕೆ ಬೆಂಬಲವಾಗಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ರಟ್ಟೀಹಳ್ಳಿಗೆ ಆಗಮಿಸುತ್ತಿರುವರು ಎಂದರು.
ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಮಾತನಾಡಿ, ರೈತರಿಗೆ ಗೊತ್ತಿಲ್ಲದಂತೆ ಡ್ರೋಣ್ ಮೂಲಕ ಸರ್ವೇ ಮಾಡಿ, ಜಿಲ್ಲಾಧಿಕಾರಿಗಳಿಗೆ ಮಾಹಿತಿ ಇಲ್ಲದೆ ನಡೆಸುತ್ತಿರುವ ಕಾಮಗಾರಿ ಇದಾಗಿದೆ, ಈ ಯೋಜನೆಯಿಂದ ಬಹಳಷ್ಟು ರೈತರು ಜಮೀನು ಕಳೆದುಕೊಂಡು ಬೀದಿಪಾಲು ಆಗುವುದಕ್ಕೆ ಕಾಂಗ್ರೆಸ್ ಪಕ್ಷ ಬಿಡುವದಿಲ್ಲ. ಅಷ್ಟೊಂದು ಈ ಯೋಜನೆಯ ಅಗತ್ಯ ಇದ್ದರೆ ಪರ್ಯಾಯ ಮಾರ್ಗ ಎಂದರೆ ಸರ್ಕಾರಿ ಜಮೀನು ಬಳಸಿಕೊಂಡು ಪೈಪಲೈನ್ ಹಾಕಿಕೊಳ್ಳಲಿ. 20 ವರ್ಷದಿಂದ ರೈತರ ಜಮೀನು ಕಸಿದುಕೊಂಡು ಪರಿಹಾರ ನೀಡದೆ ಈಗ ಮತ್ತೆ ಜಮೀನು ವಶಪಡಿಸಿಕೊಳ್ಳಲು ಬಂದರೆ ನಾವು ಬಿಡುವದಿಲ್ಲ. ಹಿರೇಮಠರ ಜೊತೆಗೆ ನಾವು ಹೋರಾಟ ಮಾಡುವುದಾಗಿ ತಿಳಿಸಿದರು.
ಪಕ್ಷದ ಮುಖಂಡ ಎ.ಕೆ. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ಪ್ರಚಾರ ಸಮಿತಿಯ ಅಧ್ಯಕ್ಷ ವೀರನಗೌಡ ಪ್ಯಾಟಿಗೌಡ್ರ, ಜಿಪಂ ಮಾಜಿ ಸದಸ್ಯ ಪ್ರಕಾಶ ಬನ್ನಿಕೋಡ್, ದಿಗ್ವಿಜಯ ಹತ್ತಿ, ಎಪಿಎಂಸಿ ಸದಸ್ಯ ವಸಂತ ದ್ಯಾವಕ್ಕಳವರ, ಮುಖಂಡರಾದ ಸರ್ಫರಾಜ ಮಾಸೂರು, ಮಧು ಪಾಟೀಲ, ಸುರೇಶ ಮಡಿವಾಳರ, ಖಲೀಲಅಹ್ಮದ್ ಸವಣೂರು, ಬಿ.ಎನ್. ಬಣಕಾರ ಸೇರಿದಂತೆ ಹಲವರು ಇದ್ದರು.