
ಕೋಲಾರ (ಡಿ.10): ರಾಜಕಾರಣಕ್ಕಾಗಿ ಜಾತಿಗಳನ್ನ ಒಡೆಯುವುದರಲ್ಲಿ ಬಿಜೆಪಿ- ಕಾಂಗ್ರೆಸ್ ಒಂದೇ. ಇಡೀ ದೇಶದಲ್ಲಿ ಇನ್ಮುಂದೆ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರೋದಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಬಿ ಟೀಮ್ ಎಂದು ಕಾಂಗ್ರೆಸ್ ಬಿಂಬಿಸಿದ್ದರಿಂದಾಗಿ ಜೆಡಿಎಸ್ ಕೆಲವು ಸೀಟುಗಳನ್ನ ಕಳೆದುಕೊಳ್ಳಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರ ಹೊರವಲಯದ ಕಲ್ಯಾಣ ಮಂಟಪದಲ್ಲಿ ಗ್ರಾಪಂ ಚುನಾವಣೆ ಸಂಬಂಧ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ, ರಾಜಕೀಯ ಶಕ್ತಿ ಕೊಟ್ಟವರು ದೇವೇಗೌಡರು. ಆದರೆ ಕಾಂಗ್ರೆಸ್ ಕೊಡುಗೆ ಏನು ಅನ್ನೋದನ್ನ ಪ್ರಶ್ನೆ ಮಾಡ್ಬೇಕು ಎಂದರು
ಮುಸ್ಲಿಮರು ಅರ್ಥಮಾಡಿಕೊಳ್ಳಲಿ
ರಾಜಕೀಯ ಲಾಭಕ್ಕಾಗಿ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಎಂದು ಕಾಂಗ್ರೆಸ್ ಬಿಂಬಿಸಿದೆ. ಆದರೆ ನಾವು ಬಿಜೆಪಿ ವಿರುದ್ಧವಾಗಿಯೇ ಕೆಲಸ ಮಾಡಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಬಿ ಟೀಮ್ ಎಂದು ಹೇಳಿದ್ದ ಕಾಂಗ್ರೆಸ್‌ನವರ ಜೊತೆಗೆ ಅಧಿಕಾರ ಮಾಡಿದ್ದೇವೆಯೇ ಹೊರತು ಬಿಜೆಪಿ ಜೊತೆಯಲ್ಲಿ ಅಲ್ಲ ಅನ್ನೋದನ್ನ ಮುಸ್ಲಿಂ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ರಾಜದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದಿದ್ದು ಯಾರು ಅನ್ನೋದನ್ನ ಮುಸ್ಲಿಂ ಸಮುದಾಯ ಗಮನಿಸಬೇಕು. ನಾನೇನು ಬಿಜೆಪಿ- ಕಾಂಗ್ರೆಸ್ ಗುಲಾಮನಲ್ಲ, ನಮಗೂ ಸ್ವಾಭಿಮಾನ ಇದೆ. ನಮಗೆ ಸ್ವತಂತ್ರವಾಗಿ ಅಧಿಕಾರ ನಡೆಸೋದಿಕ್ಕೆ ಬಹುಮತ ಸಿಕ್ಕರೆ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ ಎಂದು ಹೇಳಿದರು.
ಹಣ ನೀಡಿದವರ ಆಯ್ಕೆ ಸರಿಯಲ್ಲ
ಗ್ರಾಪಂ ಚುನಾವಣೆ ನಡೆಯಲಿದೆ. ಆದರೆ ಗ್ರಾಪಂಗಳ ಉದ್ದೇಶವೇ ಬದಲಾಗಿದೆ. ದೇವಾಲಯ ನಿರ್ಮಾಣಕ್ಕೆ ಹಣ ನೀಡುವವರನ್ನು ಅವಿರೋಧ ಆಯ್ಕೆ ಮಾಡಿಕೊಳ್ಳೊದು ಉತ್ತಮ ಬೆಳವಣಿಗೆಯಲ್ಲ.
ಜೆಡಿಎಸ್ ಎಂಲ್‌ಸಿಗಳಿಗೆ ತಲಾ 8 ಕೋಟಿ ರೂ.: ಕುಮಾರಸ್ವಾಮಿ ವಿರುದ್ಧ ಡೀಲಿಂಗ್ ಬಾಂಬ್ ..
ಮುಂದಿನ ದಿನಗಳಲ್ಲಿ ಜೆಡಿಎಸ್ ಬಹುಮತ ಪಡೆಯುವುದು ನನ್ನ ಕೊನೆ ಆಸೆಯಾಗಿದ್ದು, ತಾ.ಪಂ, ಜಿ.ಪಂನಲ್ಲಿ ಚುನಾವಣೆಯಲ್ಲಿ ಬಹುಮತ ಪಡೆಯಬೇಕು ಎಂದರು.
ಶಾಸಕ ಕೆ.ಶ್ರೀನಿವಾಸಗೌಡ, ಮಾತನಾಡಿ, ಜೆಡಿಎಸ್‌ಗೆ ಕಾರ್ಯಕರ್ತರ ಪಡೆಯಿದ್ದು, ನಿಖಿಲ್ ಕುಮಾರಸ್ವಾಮಿ ಬಂದರೆ 10 ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ ಎಂದರು.
ಸಭೆಯಲ್ಲಿ ಎಂಎಲ್‌ಸಿ ಗೋವಿಂದ ರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ,ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್,ಗೋಪಾಲಕೃಷ್ಣ, ಉಪಾಧ್ಯಕ್ಷ ಮೂರಂಡಹಳ್ಳಿ ಗೋಪಾಲ್, ಜಿಪಂ ಸದಸ್ಯ ಕೆ.ಎಸ್.ನಂಜುಂಡಪ್ಪ, ನಗರಸಭೆ ಉಪಾಧ್ಯಕ್ಷ ಪ್ರವೀಣ್‌ಗೌಡ, ಮುಖಂಡರಾದ ಕುರ್ಕಿ ರಾಜೇಶ್ವರಿ, ಜಿ.ನರೇಶ್‌ಬಾಬು ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ನಗರದ ಆರ್.ಟಿ.ಓ ಕಚೇರಿ ಬಳಿ ಇರುವ ಜೆಡಿಎಸ್ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಮಾಜಿ ಸಿ.ಎಂ.ಕುಮಾರಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದರು.