ಬಸ್‌ ಪಾಸ್‌ ಇಂದೇ ಕೊನೆ ದಿನ, ನಾಳೆಯಿಂದ ಏನು?

By Kannadaprabha NewsFirst Published Dec 10, 2020, 11:39 AM IST
Highlights

ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಮಸ್ಯೆ| ಸರ್ಕಾರ ಎಚ್ಚೆತ್ತು ಸಮಸ್ಯೆ ಬಗೆಹರಿಸುವುದೇ?| ಕೆಎಸ್‌ಆರ್‌ಟಿಸಿಯಿಂದ ಇನ್ನೂ ಪ್ರಾರಂಭವಾಗದ ಪಾಸ್‌ ವಿತರಣೆ| ಕೋವಿಡ್‌ ಇರುವುದರಿಂದ ಬಹುತೇಕ ಪಾಲಕರಲ್ಲಿ ಆದಾಯವೇ ಇಲ್ಲ, ಇಂಥ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಬಸ್‌ ಪಾಸ್‌ ಮೊತ್ತವನ್ನು ಪಾವತಿ ಮಾಡುವುದು ತೊಂದರೆ|  
 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.10):  ಕೋವಿಡ್‌ ಹಿನ್ನೆಲೆ ಬಸ್‌ ಪಾಸ್‌ ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಅವಧಿ ಡಿ. 10ಕ್ಕೆ ಮುಗಿಯಲಿದ್ದು, ನಂತರ ಏನು ಎನ್ನುವುದು ರಾಜ್ಯಾದ್ಯಂತ ಇರುವ ಪದವಿ ಕಾಲೇಜು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ. 

ಕೆಎಸ್‌ಆರ್‌ಟಿಸಿಯಿಂದ ಇನ್ನೂ ಪಾಸ್‌ ವಿತರಣೆ ಪ್ರಾರಂಭವಾಗಿಲ್ಲ. ಸರ್ಕಾರವೂ ಬಸ್‌ ಪಾಸ್‌ ಅವಧಿಯನ್ನು ವಿಸ್ತರಣೆ ಮಾಡಿಲ್ಲ. ಹೀಗಾಗಿ ಕಾಲೇಜಿಗೆ ಬರುವ ಲಕ್ಷಾಂತರ ವಿದ್ಯಾರ್ಥಿಗಳು ಸಮಸ್ಯೆಯಲ್ಲಿ ಸಿಲುಕಲಿದ್ದಾರೆ. ಕಾಲೇಜು ಪ್ರಾರಂಭವಾಗಿದ್ದರೂ ಸ್‌ ಇಲ್ಲದೇ ವಿದ್ಯಾರ್ಥಿಗಳು ಕಾಲೇಜಿಗೆ ಗೈರು ಹಾಜರಾಗುವಂತಾಗಲಿದೆ.=

ಏನಿದು ಸಮಸ್ಯೆ?:

ಕೋವಿಡ್‌ ಹಿನ್ನೆಲೆ ಕಾಲೇಜುಗಳು ಕಳೆದ ಮಾರ್ಚ್‌ ತಿಂಗಳಲ್ಲಿಯೇ ಬಂದ್‌ ಆಗಿದ್ದವು. ಅಲ್ಲದೆ ಸರ್ಕಾರ ಬಸ್‌ ಪಾಸ್‌ ವಿತರಣೆ ವ್ಯವಸ್ಥೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ತಂದಿದೆ.ಪೋರ್ಟಲ್‌ ವ್ಯವಸ್ಥೆಯಲ್ಲಿ ಇನ್ನೂ ಪಾಸ್‌ ವಿತರಣೆ ಪ್ರಾರಂಭವಾಗಿಲ್ಲ. ನ. 17ರಿಂದ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ ಹಳೆ ವರ್ಷದ ಬಸ್‌ ಪಾಸ್‌, ಈ ವರ್ಷದ ಕಾಲೇಜು ಪ್ರವೇಶದ ರಸೀದಿಯನ್ನು ತೋರಿಸಿ ಡಿ. 10ರವರೆಗೂ ಬಸ್‌ನಲ್ಲಿ ಸಂಚಾರ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿತ್ತು.

ಗ್ರಾಮ ಪಂಚಾಯಿತಿ ಚುನಾವಣೆ: 2 ದಿನವಾದರೂ ಕೇವಲ 58 ನಾಮಪತ್ರ ಸಲ್ಲಿಕೆ

ಈ ಆಧಾರದಲ್ಲಿಯೇ ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಡಿ. 10ಕ್ಕೆ ಬಸ್‌ ಪಾಸ್‌ ಕೊನೆಗೊಳ್ಳುವುದರಿಂದ ಮುಂದೇನು ಎನ್ನುವುದೇ ವಿದ್ಯಾರ್ಥಿಗಳ ಮುಂದಿರುವ ಸಮಸ್ಯೆ. ರಾಜ್ಯಾದ್ಯಂತ ಪದವಿ ಮತ್ತು ಸ್ನಾತಕೊತ್ತರ ಕಾಲೇಜುಗಳಿಗೆ ಶೇ. 90ರಷ್ಟುವಿದ್ಯಾರ್ಥಿಗಳು ಬರುವುದೇ ಬಸ್‌ ಪಾಸ್‌ ಮೂಲಕ.

ಕೋವಿಡ್‌ನಿಂದಾಗಿ ಕಾಲೇಜು ಪ್ರಾರಂಭವಾಗಿದ್ದರೂ ವಿದ್ಯಾರ್ಥಿಗಳು ಬರುತ್ತಿರುವುದೇ ಅಪರೂಪ. ಅಂಥದ್ದರಲ್ಲಿ ಬಸ್‌ ಪಾಸ್‌ ಇಲ್ಲದಿದ್ದರೆ ವಿದ್ಯಾರ್ಥಿಗಳು ಬರುವುದು ಅನುಮಾನ. ಪದವಿ ಮತ್ತು ಸ್ನಾತಕೊತ್ತರ ಕಾಲೇಜು ಪ್ರಾರಂಭವಾಗಿದ್ದರೂ ವಿದ್ಯಾರ್ಥಿಗಳು ಇಲ್ಲದಂತಾಗುತ್ತದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಕಾಲೇಜು ಪ್ರಾಂಶುಪಾಲರು. ಅಲ್ಲದೇ ಸರ್ಕಾರ ಕೂಡಲೇ ಪಾಸ್‌ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸುತ್ತಾರೆ.

ಉಚಿತ ಮಾಡಲಿ:

ಕೋವಿಡ್‌ ಇರುವುದರಿಂದ ಬಹುತೇಕ ಪಾಲಕರಲ್ಲಿ ಆದಾಯವೇ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಬಸ್‌ ಪಾಸ್‌ ಮೊತ್ತವನ್ನು ಪಾವತಿ ಮಾಡುವುದು ತೊಂದರೆಯಾಗುತ್ತದೆ. ಆದ್ದರಿಂದ ಸರ್ಕಾರ ವಿದ್ಯಾರ್ಥಿಗಳ ಬಸ್‌ ಪಾಸ್‌ಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಬೇಕು ಎನ್ನುವುದು ವಿದ್ಯಾರ್ಥಿ ಸಂಘಟನೆಗಳ ಆಗ್ರಹ.

ಸರ್ಕಾರ ಡಿ. 10ರ ವರೆಗೂ ವಿಸ್ತರಣೆ ಮಾಡಿದ್ದ ಬಸ್‌ ಪಾಸ್‌ ಅವಧಿ ಮುಗಿಯುತ್ತಿದ್ದು, ಕೂಡಲೇ ಸರ್ಕಾರ ಪ್ರಸಕ್ತ ಶೈಕ್ಷಣಿಕ ಅವಧಿ ಪೂರ್ಣಗೊಳ್ಳುವವರೆಗೆ ವಿಸ್ತರಣೆ ಮಾಡಬೇಕು. ರಾಜ್ಯಾದ್ಯಂತ ಶೇ. 90ರಷ್ಟು ವಿದ್ಯಾರ್ಥಿಗಳು ಬಸ್‌ ಪಾಸ್‌ ಅವಲಂಬಿಸಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ  ಅಮರೇಶ ಕಡಗದ ತಿಳಿಸಿದ್ದಾರೆ.  
 

click me!