ಕೃಷಿ ಕಾಯ್ದೆ ಹಿಂಪಡೆಯಲು ಸಿದ್ದರಾಮಯ್ಯಗೆ ದಮ್‌ ಇಲ್ಲ: ಕೋಡಿಹಳ್ಳಿ ಚಂದ್ರಶೇಖರ ಕಿಡಿ

By Kannadaprabha News  |  First Published Jul 21, 2023, 11:48 AM IST

ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರವೇ ಹಿಂಪಡೆದಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ವಾಪಸ್‌ ಪಡೆಯುವ ಧಮ್‌ ಇಲ್ಲ ಎಂದು ರೈತ ಸಂಘ ಮತ್ತು ರಾಜ್ಯ ಹಸಿರುಸೇನೆ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ ಕಿಡಿಕಾರಿದರು.


ಶಿರಸಿ (ಜು.21) :  ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರವೇ ಹಿಂಪಡೆದಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ವಾಪಸ್‌ ಪಡೆಯುವ ಧಮ್‌ ಇಲ್ಲ ಎಂದು ರೈತ ಸಂಘ ಮತ್ತು ರಾಜ್ಯ ಹಸಿರುಸೇನೆ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ ಕಿಡಿಕಾರಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ವೇಳೆ ಸುಗ್ರಿವಾಜ್ಞೆ ಮೂಲಕ ರಾಜ್ಯದಲ್ಲಿ ಈ ಕಾಯ್ದೆ ಅನುಷ್ಠಾನಗೊಳಿಸಲಾಗಿದೆ. ಬಳಿಕ ಕೇಂದ್ರ ಸರ್ಕಾರ ವಾಪಸ್‌ ಪಡೆದರೂ ರಾಜ್ಯ ಸರ್ಕಾರ ಕಾಯ್ದೆ ಹಿಂಪಡೆಯಲಿಲ್ಲ. ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ನಮ್ಮನ್ನು ಕರೆಸಿ ಚರ್ಚಿಸಿದ ಪರಿಣಾಮ ನಾವೂ ಕಾಂಗ್ರೆಸ್‌ಗೆ ಮತ ನೀಡಿದ್ದೆವು. ಆದರೆ, ಕಾಂಗ್ರೆಸ್‌ ಸರ್ಕಾರ ಬಂದು ಇಷ್ಟುದಿನಗಳು ಕಳೆದರೂ ಕಾಯ್ದೆ ವಾಪಸ್‌ ಪಡೆಯುವ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿಲ್ಲ. ಅನಗತ್ಯ ಕಾಲಹರಣ ಮಾಡುವ ಮುಖ್ಯಮಂತ್ರಿಗೆ ಅಂದು ನೀಡಿದ್ದ ಭರವಸೆ ಈಡೇರಿಸುವ ಧಮ್‌ ಇಲ್ಲ ಎಂದರು.

Tap to resize

Latest Videos

undefined

 

ಕೊಬ್ಬರಿ ಬೆಳೆಗಾರರ ಹಿತ ಕಾಯುವಲ್ಲಿ ಸರ್ಕಾರ ವಿಫಲ: ಕೋಡಿಹಳ್ಳಿ ಚಂದ್ರಶೇಖರ್‌

ಕೃಷಿ ಕಾಯ್ದೆ ಕಾರ್ಪೊರೇಟ್‌ಗೆ ಪೂರಕವಾಗಿದೆ. ಕಾಯ್ದೆ ಮುಂದುವರಿದಲ್ಲಿ ಮುಂದಿನ 10 ವರ್ಷಗಳಲ್ಲಿ 75% ರೈತರು ಕೃಷಿ ಬಿಡಬೇಕಾಗುತ್ತದೆ. ಕೃಷಿ, ಮಾರುಕಟ್ಟೆ, ಹೈನುಗಾರಿಕೆ ಕಾರ್ಪೊರೇಟ್‌ ವ್ಯಾಪ್ತಿಗೆ ಹೋಗಬಾರದು. ರಾಜ್ಯ ಸರ್ಕಾರ ವಾಪಸ್‌ ಪಡೆಯಲು ಅನಗತ್ಯ ಕಾಲಹರಣ ಮಾಡುತ್ತಿದೆ. ಅಧಿವೇಶನದಲ್ಲಿ ಎಪಿಎಂಸಿ ಕಾಯ್ದೆ ಹೊರತಾಗಿ ಕೃಷಿ ಕಾಯ್ದೆ ಬಗ್ಗೆ ಮಾತನಾಡುತ್ತಿಲ್ಲ. ಪದೇ ಪದೇ ಈ ವಿಷಯ ಮುಂದೆ ಹಾಕ್ತಿದ್ದಾರೆ. ‘ಸಿದ್ದರಾಮಯ್ಯನವರೇ, ನಿಮಗೂ ಬಿಜೆಪಿಗೂ ಹೊಂದಾಣಿಕೆ ಇದೆಯಾ? ಭೂ ಸುಧಾರಣಾ ಕಾಯ್ದೆ ವಾಪಸ್‌ ತೆಗೆಯುವ ದಮ್‌ ಇದೆಯಾ? ಎಂದು ಪ್ರಶ್ನಿಸಿದರು.

ಸ್ವಾಮೀಜಿಗಳೇ ತಲೆಹಾಕಬೇಡಿ!

ಗೋಹತ್ಯಾ ನಿಷೇಧ ಕಾನೂನನ್ನು ಭಾವನಾತ್ಮಕವಾಗಿ ನೋಡುವುದನ್ನು ಬಿಡಬೇಕು. ರೈತರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ಕಾನೂನು ಜಾರಿಗೊಳಿಸಬಾರದು. ಗೋಹತ್ಯೆ ನಿಷೇಧ ಕಾನೂನು ಪರವಾಗಿ ಸ್ವಾಮೀಜಿಗಳೂ ಮಾತನಾಡಲಾರಂಭಿಸಿದ್ದಾರೆ. ಇದು ರೈತರ ವಿಷಯ, ಸ್ವಾಮೀಜಿಗಳೇ ಈ ವಿಷಯದಲ್ಲಿ ತಲೆಹಾಕಬೇಡಿ ಎಂದು ಕೋಡಿಹಳ್ಳಿ ಕಿವಿಮಾತು ಹೇಳಿದರು.

ಗೋ ಹತ್ಯೆ ನಿಷೇಧದ ಹೆಸರಿನಲ್ಲಿ ಹಸು ಸಾಗಾಟ ತಡೆಯಲಾಗುತ್ತಿದೆ. ನಿಜವಾಗಲೂ ಹತ್ಯೆಗಾಗಿ ಒಯ್ಯಲಾಗುತ್ತಿತ್ತಾ ಎಂಬ ಪರಿಶೀಲನೆ ಆಗುತ್ತಿಲ್ಲ. ಗೋಶಾಲೆಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ಆಗುತ್ತಿಲ್ಲ. ಗೋಹತ್ಯಾ ನಿಷೇಧ ಕಾನೂನಿನ ವಿಷಯದಲ್ಲಿ ಸರ್ಕಾರ ಅಥವಾ ಸ್ವಾಮೀಜಿಗಳು ನಿರ್ಧರಿಸದೇ ಈ ವಿಷಯವನ್ನು ರೈತರಿಗೇ ಬಿಡಬೇಕು ಎಂದು ಆಗ್ರಹಿಸಿದರು.

ಅಮೆರಿಕದಲ್ಲಿ 11 ವರ್ಷ ಭಾರತಕ್ಕೆ ಪೂರೈಸಬಹುದಾದಷ್ಟುಹಾಲು ಉತ್ಪನ್ನ ಇದೆ. ಅವರಿಗೆ ಭಾರತ ಮಾರುಕಟ್ಟೆಅಗತ್ಯವಿದೆ. ಹೀಗಾಗಿ, ಇಲ್ಲಿಯ ಹೈನುಗಾರಿಕೆ ನಾಶ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ಎರಡೇ ತಿಂಗಳಲ್ಲಿ 40ಕ್ಕೂ ಅಧಿಕ ರೈತರ ಆತ್ಮಹತ್ಯೆ ಆಗಿದೆ. ಕಾರಣಗಳ ಬಗ್ಗೆ ಅಧ್ಯಯನ ಆಗಬೇಕು. ಕಿಸಾನ್‌ ಸನ್ಮಾನ ಯೋಜನೆಯನ್ನು ಸರ್ಕಾರ ಮುಂದುವರಿಸಬೇಕು. ಮಲೆನಾಡಿನಲ್ಲಿ ಅಡಕೆಗೆ ಎಲೆಚುಕ್ಕಿ ರೋಗ ಆರಂಭವಾಗಿದೆ. ರೋಗ ನಿಯಂತ್ರಕ್ಕೆ ಅಗತ್ಯ ಔಷಧಗಳು ತಕ್ಷಣ ಬಿಡುಗಡೆ ಆಗಬೇಕಿದೆ. ಬೆಳೆ ವಿಮೆಗೆ ಪರಿಹಾರ ನೀಡಲು ಸಮೀಕ್ಷೆ ತಪ್ಪಾಗಿ ನಡೆಯುತ್ತಿದೆ. ವಿಮಾ ಕಂಪನಿಯ ಹಿತದೃಷ್ಟಿಯ ಬದಲು ರೈತರ ಹಿತದೃಷ್ಟಿಆಗಲಿ ಎಂದರು.

 

ಮುಖ್ಯಮಂತ್ರಿಗಳೇ ಪರಿಶೀಲನೆ ಪದ ಕೈಬಿಟ್ಟು, ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ: ಕೋಡಿಹಳ್ಳಿ

ರೈತರ ಸಂಘದ ಪ್ರಮುಖ ರಾಘವೇಂದ್ರ ನಾಯ್ಕ ಕಿರವತ್ತಿ ಇತರರಿದ್ದರು.

click me!