ಲೋಕಾಯುಕ್ತ ಅಧಿಕಾರ ಕಸಿದು ಎಸಿಬಿ ಸ್ಥಾಪಿಸಿದ್ದ ಸಿದ್ದರಾಮಯ್ಯ: ಹಿರೇಮಠ

By Kannadaprabha NewsFirst Published Sep 13, 2022, 1:50 PM IST
Highlights

ಉಚ್ಚ ನ್ಯಾಯಾಲಯ ಎಸಿಬಿ ರದ್ದುಪಡಿಸಿ ಅಭೂತಪೂರ್ವ ತೀರ್ಪು ನೀಡಿರುವುದಕ್ಕೆ ಸ್ವಾಗತ: ಎಸ್‌.ಆರ್‌.ಹಿರೇಮಠ

ಬಾಗಲಕೋಟೆ(ಸೆ.13):  2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಭ್ರಷ್ಟಅಧಿಕಾರಿಗಳು, ಮಂತ್ರಿಗಳು, ಜನಪ್ರತಿನಿಧಿಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಅಂಸವಿಧಾನಿಕ ಕ್ರಮದ ಮೂಲಕ ಲೋಕಾಯುಕ್ತ ಅಧಿಕಾರವನ್ನು ಕಸಿದುಕೊಂಡು ಎಸಿಬಿ ಸಂಸ್ಥೆಯನ್ನು ಸ್ಥಾಪಿಸಿದ್ದರು. ಕರ್ನಾಟಕ ಉಚ್ಚ ನ್ಯಾಯಾಲಯ ಎಸಿಬಿಯನ್ನು ರದ್ದುಪಡಿಸಿ ಅಭೂತಪೂರ್ವ ತೀರ್ಪು ನೀಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಸಮಾಜ ಪರಿವರ್ತನಾ ಸಮುದಾಯ ಸಂಘಟನೆಯ ಸಂಸ್ಥಾಪಕ ಎಸ್‌.ಆರ್‌.ಹಿರೇಮಠ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತರನ್ನು ದುರ್ಬಲಗೊಳಿಸುವುದಕ್ಕಾಗಿ ಸಂವಿಧಾನದ ಮತ್ತು ಕಾರ್ಯಾಂಗದ ಅಧಿಕಾರವನ್ನು ಪಕ್ಕಕ್ಕೆ ತಳ್ಳಿ ಸ್ಥಾಪಿಸಿದ್ದ ಎಸಿಬಿಯನ್ನು ರದ್ದುಪಡಿಸಿ ಲೋಕಾಯುಕ್ತದ ಮೂಲ ಅಧಿಕಾರಗಳನ್ನು ಮರುಸ್ಥಾಪಿಸಿದೆ. ಉಚ್ಛ ನ್ಯಾಯಾಲಯದ ತೀರ್ಪಿನ ಭಾಗ 16 ರಲ್ಲಿ ಚಿಂತನೀಯವಾದ ಐದು ಶಿಫಾರಸ್ಸುಗಳನ್ನು ಮಾಡಿದೆ ಇವುಗಳನ್ನು ಕೂಡಲೇ ಸರ್ಕಾರ ಅನುಷ್ಠಾನಕ್ಕೆ ತರಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಸರ್ಕಾರಕ್ಕೆ ತಿಳಿಸುವ ಉದ್ದೇಶದಿಂದ ಜಾಥಾವನ್ನು ನಡೆಸುತ್ತೇವೆ ಎಂದರು.

ನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ಬಿಜೆಪಿಯವರಿಗೆ ಈಗಲೇ ಭಯ: ಸಿದ್ದು ಮಾತಿನ ಅರ್ಥವೇನು?

ಸರ್ಕಾರ ನಡೆಸುವವರು ಭ್ರಷ್ಟಾಚಾರದಲ್ಲಿ ಮುಳಗುತ್ತಿದ್ದಾರೆ. ಶೇ.40ರಷ್ಟು ಕ್ರಿಮಿನಲ್‌ ಪ್ರಕರಣದಲ್ಲಿ ಭಾಗಿಯಾದವರೇ ಜನಪ್ರತಿನಿಧಿಗಳಾಗುತ್ತಿರುವುದರಿಂದ ರಾಜ್ಯದಲ್ಲಿ ಲೂಟಿ ಮಾಡುವುದು ಮುಂದುವರೆದಿದೆ ಇದಕ್ಕೆ ಕಡಿವಾಣ ಹಾಕಲು ಪ್ರತಿಯೊಬ್ಬ ನಾಗರಿಕರು ಜಾಗೃತರಾಗಬೇಕು ಎಂದರು.

ಲೋಕಾಯುಕ್ತದಲ್ಲಿ ಯಾವುದೇ ಅಧಿಕಾರಿಗಳು ನಿಯುಕ್ತಗೊಂಡ ನಂತರ 3 ವರ್ಷ ಸೇವೆಯನ್ನು ಸಲ್ಲಿಸಬೇಕು. ಲೋಕಾಯುಕ್ತರ ಪರವಾಣಿಗೆ ಇಲ್ಲದೇ ಸಿಬ್ಬಂದಿಯನ್ನು ವರ್ಗಾವಣೆ ಮಾಡುವಂತಿಲ್ಲ. ಲೋಕಾಯುಕ್ತಕ್ಕೆ ಬಂದ ಪ್ರಕರಣ ತನಿಖೆ ಶೀಘ್ರ ಇತ್ಯರ್ಥವಾಗಬೇಕು. ಹಿರಿಯ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ನೇಮಿಸಬೇಕು ಎಂದು ಹೈಕೋರ್ಟ್‌ ಆದೇಶ ನೀಡಿದ್ದು ಇದನ್ನು ಸರ್ಕಾರ ಪಾಲಿಸಬೇಕು ಎಂದು ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಕನಿಷ್ಠ ಬೆಂಬಲ ಬೆಲೆ ಕಾರ್ಯಕ್ರಮ ಹಾಗೂ ಅದರಡಿಯಲ್ಲಿ ಧಾನ್ಯಗಳ ಸಂಗ್ರಹ ಕ್ರಮವನ್ನು ಕಾಯ್ದೆಬದ್ದಗೊಳಿಸುವ ಸಂಬಂಧಪಟ್ಟಂತೆ ಹಾಗೂ ಲೋಕಾಯುಕ್ತ ಬಲಪಡಿಸುವ ಕುರಿತು ಚರ್ಚೆ ನಡೆಸಲು ಸೆ.25ರಂದು ರಾಜ್ಯಮಟ್ಟದ ಒಂದು ದಿನದ ಚಿಂತನಾ ಶಿಬಿರ ಆಯೋಜಿಸಲಾಗಿದೆ. ಹಿಂದೆ ನಡೆಸಿದ ರಾಷ್ಟ್ರೀಯ ದುಂಡು ಮೇಜಿನ ಪರಿಷತ್ತು ಮತ್ತು ಜನರ ಬದುಕಿನ ಸಮಾವೇಶಗಳಲ್ಲಿ ಆಶಯಗಳನ್ನು ಕೇಂದ್ರದಲ್ಲಿಟ್ಟುಕೊಂಡು ಸತ್ಯಾಗ್ರಹದ ಸಿದ್ಧಾಂತ ಮತ್ತು ಆಚರಣೆ ಬಗ್ಗೆ ಚರ್ಚೆ ಮಾಡುವ ಉದ್ದೇಶದಿಂದ ತುಮಕೂರಿನ ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ ಒಂದು ದಿನದ ಚಿಂತನಾ ಶಿಬಿರವನ್ನು ಜನಾಂದೋಲನ ಮಹಾಮೈತ್ರಿ ಮತ್ತು ಇತರ ಸಮಾನ ಮನಸ್ಕರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಎಲ್ಲ ಧರ್ಮಕ್ಕೆ ಮಿಗಿಲಾಗಿದ್ದು ಮನುಷ್ಯ ಧರ್ಮ; ಸಿದ್ದರಾಮಯ್ಯ

ಗೋಷ್ಠಿಯಲ್ಲಿ ಗ್ರಾಮ ಗಣರಾಜ್ಯ ವೇದಿಕೆಯ ಜಿ.ಎನ್‌.ಸಿಂಹ, ಜನ ಸಂಗ್ರಾಮ ಪರಿಷತ್‌ ಎಂ.ಎ.ಅಗಸಿಮುಂದಿನ, ಸಯ್ಯದ್‌ ಹೈದರ್‌, ಕಲ್ಕುಟಕರ ಉಪಸ್ಥಿತರಿದ್ದರು.

ಲೋಕಾಯುಕ್ತವನ್ನು ಬಲಪಡಿಸುವುದು ಹಾಗೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣವನ್ನು ಖಂಡಿಸಿ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ವಿಚಾರವನ್ನು ಇಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸಲು ಜಾಥಾವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಅಂತ ಸಮಾಜ ಪರಿವರ್ತನಾ ಸಮುದಾಯ ಸಂಘಟನೆಯ ಸಂಸ್ಥಾಪಕ ಎಸ್‌.ಆರ್‌.ಹಿರೇಮಠ ತಿಳಿಸಿದ್ದಾರೆ. 
 

click me!