ಮೋದಿಯವರೇ ಉಡುಪಿಗೆ ಬನ್ನಿ, ನಡು ಬೀದಿಯಲ್ಲಿ ಉರುಳು ಸೇವೆ ಮಾಡಿದ ಸಾಮಾಜಿಕ ಕಾರ್ಯಕರ್ತ!

By Gowthami K  |  First Published Sep 13, 2022, 1:11 PM IST

ರೈಲ್ವೆ ಬ್ರಿಜ್ ಬಳಿಯ ಹೊಂಡಾ ಗುಂಡಿ ರಸ್ತೆಯಿಂದ ಉಡುಪಿ- ಮಣಿಪಾಲದ ನಾಗರಿಕರು ರೋಸಿ ಹೋಗಿದ್ದಾರೆ. ಹೀಗಾಗಿ ಉಡುಪಿಯ ಸಾಮಾಜಿಕ ಹೋರಾಟಗಾರ ನಿತ್ಯಾನಂದ ಒಳಕಾಡು ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ.


ವರದಿ: ಶಶಿಧರ ಮಾಸ್ತಿ ಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ  (ಸೆ.13): ಉಡುಪಿ ಮಣಿಪಾಲ ರಸ್ತೆ ನಡುವಿನ ಇಂದ್ರಾಳಿ ರೈಲ್ವೆ ಬ್ರಿಜ್ ಬಳಿ, ಇಂದು ಬೆಳಿಗ್ಗೆ ವಿಚಿತ್ರ ದೃಶ್ಯಾವಳಿಯೊಂದು ಕಂಡು ಬಂತು. ಹದಗೆಟ್ಟ ರಸ್ತೆಯ ಗುಂಡಿಯಲ್ಲಿ ವ್ಯಕ್ತಿಯೊಬ್ಬರು ಉರುಳು ಸೇವೆ ನಡೆಸಿದ ಚಿತ್ರಣವನ್ನು ಕಂಡು ಒಂದು ಕ್ಷಣ ನಾಗರಿಕರು ಬೆಚ್ಚಿಬಿದ್ದರು. ರಾಷ್ಟ್ರೀಯ ಹೆದ್ದಾರಿಯ ಈ ಮಾರ್ಗದಲ್ಲಿ ಕೆಲಕಾಲ ಸಂಚಾರ ವ್ಯತ್ಯಯಗೊಂಡಿತು. ಸಂಪೂರ್ಣ ಕೆಸರಿನಲ್ಲಿ ಈಜಾಡಿದ ಆ ವ್ಯಕ್ತಿ, ಬೇರ್ಯಾರು ಅಲ್ಲ ಉಡುಪಿಯ ಸಾಮಾಜಿಕ ಹೋರಾಟಗಾರ ನಿತ್ಯಾನಂದ ಒಳಕಾಡು! ಇಂತಹ ಅನೇಕ ಹೋರಾಟಗಳ ಮೂಲಕ ಕರಾವಳಿ ಭಾಗದಲ್ಲಿ ಗಮನ ಸೆಳೆದಿರುವ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಈ ಬಾರಿಯೂ ಅದೇ ಕಳಕಳಿಯಿಂದ ಹೋರಾಟ ನಡೆಸಿದ್ದಾರೆ. ಉಡುಪಿಯಿಂದ ಮಣಿಪಾಲಕ್ಕೆ ತೆರಳುವ ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿ. ಉಡುಪಿ ನಗರದ ಅತ್ಯಂತ ಜನನಿಬಿಡ ಹಾಗೂ ಅತಿ ಹೆಚ್ಚು ವಾಹನ ಸಂಚಾರ ನಡೆಯೋದು ಈ ರಸ್ತೆಯಲ್ಲಿ. ಉಡುಪಿ ಜಿಲ್ಲಾ ಕೇಂದ್ರದ ಮಾನ, ಪ್ರಾಣ ಎಲ್ಲವೂ ಈ ರಸ್ತೆಯಲ್ಲೇ ಅಡಗಿದೆ. ಇಷ್ಟಾದರೂ ಇಂದ್ರಾಳಿ ಬಳಿಯ ರೈಲ್ವೆ ಬ್ರಿಡ್ಜ್ ನ ಹೊಂಡಾ ಗುಂಡಿಗಳಿಗೆ ಹಲವು ವಾರ್ಷಿಕೋತ್ಸವ ನಡೆದರೂ ಮುಕ್ತಿ ಸಿಕ್ಕಿಲ್ಲ. 

Latest Videos

undefined

ಈ ರಸ್ತೆ ದುರಸ್ತಿಗೆ ಹಲವು ಅಡೆತಡೆಗಳಿವೆ. ಮೊದಲನೆಯದಾಗಿ ಇದು ರೈಲ್ವೆ ಇಲಾಖೆಗೆ ಒಳಪಟ್ಟ ಕಾಮಗಾರಿ. ಇಲಾಖೆಯವರು ಹಲವು ತಕರಾರುಗಳ ನಂತರ ಸೇತುವೆ ವಿಸ್ತರಣೆಗೆ ಕಾಮಗಾರಿ ಆರಂಭಿಸಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ವಾಹನ ಸಂಚಾರ ಕಡಿಮೆ ಇದ್ದಾಗ ಆರಂಭವಾದ ಕಾಮಗಾರಿ ಸದ್ಯ ಅರ್ಧಕ್ಕೆ ನಿಂತಿದೆ. ಆರಂಭದಲ್ಲಿ ಹೊಸ ಸೇತುವೆಯ ವಿನ್ಯಾಸಕ್ಕೆ ಇದ್ದ ತಕರಾರು ನಂತರ ಬಗೆಹರಿದಿತ್ತು. ಬಳಿಕ ಯೋಜನಾ ವೆಚ್ಚದಲ್ಲಿ ಹೆಚ್ಚಳವಾಯಿತು. ಹೆಚ್ಚಳವಾದ ಯೋಜನಾ ವೆಚ್ಚದ ಬಗ್ಗೆ ಅಂಗೀಕಾರ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು.. ಸದ್ಯಕ್ಕಂತೂ ಕಾಮಗಾರಿ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ.

ರೈಲ್ವೆ ಬ್ರಿಜ್ ಬಳಿಯ ಹೊಂಡಾ ಗುಂಡಿ ರಸ್ತೆಯಿಂದ ಉಡುಪಿ- ಮಣಿಪಾಲದ ನಾಗರಿಕರು ರೋಸಿ ಹೋಗಿದ್ದಾರೆ. ಪ್ರತಿದಿನ ಮಣಿಪಾಲಕ್ಕೆ ಸಾವಿರಾರು ಉದ್ಯೋಗಿಗಳು ವಿದ್ಯಾರ್ಥಿಗಳು ಓಡಾಡುತ್ತಾರೆ, ಮಣಿಪಾಲ ಆಸ್ಪತ್ರೆ ಕಡೆಗೆ ಹತ್ತಾರು ಆಂಬುಲೆನ್ಸ್ ಗಳು ಇದೇ ರಸ್ತೆಯಲ್ಲಿ ಹೋಗಬೇಕು. ಬ್ರಿಡ್ಜ್ ನ ಪಕ್ಕದಲ್ಲಿ ಪುಟ್ಟ ಪುಟ್ಟ ಮಕ್ಕಳು ಕಲಿಯುವ ಶಾಲೆ ಇದೆ. ರೈಲ್ವೆ ನಿಲ್ದಾಣಕ್ಕೆ ಹೋಗುವಾಗಲೂ ಈ ರೈಲ್ವೆ ಬ್ರಿಡ್ಜ್ ಸಾಗಿಯೇ ಮುಂದಕ್ಕೆ ಬರಬೇಕು. ಎಲ್ಲಾ ಕಾರಣಗಳಿಂದ ಇಂದ್ರಾಳಿಯ ಈ ಪ್ರದೇಶ, ಅತ್ಯಂತ ಸೂಕ್ಷ್ಮವೆನಿಸಿದೆ.

ಸ್ಥಳೀಯ ಜನಪ್ರತಿನಿಧಿಗಳ ಬಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ಜನ ರೋಸಿ ಹೋಗಿದ್ದಾರೆ. ಇತ್ತೀಚಿನ ಕೆಲವು ತಿಂಗಳುಗಳಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು ಉಡುಪಿಗೆ ಬೇಟಿ ಕೊಟ್ಟಾಗ, ಅವರು ಮಣಿಪಾಲದಲ್ಲಿ ತಂಗುವ ಕಾರಣ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು. ಗಣ್ಯ ರಾಜಕಾರಣಿಗಳು ವಾರಕ್ಕೊಮ್ಮೆಯಾದರೂ ಉಡುಪಿಗೆ ಬರಲಿ ಎಂದು ನಾಗರಿಕರು ಹಾರೈಸುತಿದ್ದಾರೆ

ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ವ್ಯವಸ್ಥೆಯನ್ನು ಅಪಹಾಸ್ಯ ಮಾಡುವ ದೃಷ್ಟಿಯಿಂದ ಕೆಸರು ಗುಂಡಿಯಲ್ಲಿ ಉರುಳು ಸೇವೆ ನಡೆಸಿದ್ದಾರೆ. ಮೈಯೆಲ್ಲಾ ಮಣ್ಣು ಮಾಡಿಕೊಂಡು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅಂತರಾಷ್ಟ್ರೀಯ ನಗರಿ ಮಣಿಪಾಲದ ಬಸ್ ನಿಲ್ದಾಣ ಬಳಿಯೂ ರಸ್ತೆ ಹದಗೆಟ್ಟಾಗ ನಿತ್ಯಾನಂದ ಒಳಕಾಡು ಹೋರಾಟ ನಡೆಸಿ ಯಶಸ್ವಿಯಾಗಿದ್ದರು.

ಸದ್ಯ ನಿತ್ಯಾನಂದ ಒಳಕಾಡು ರಸ್ತೆಯಲ್ಲಿ ನಡೆಸಿರುವ ಈ ಉರುಳು ಸೇವೆಯ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ, ಮುಂದುವರಿದ ಜಿಲ್ಲೆ ಎಂದು ಕರೆಸಿಕೊಳ್ಳುವ ಉಡುಪಿಯ ಮಾನಹರಾಜು ಹಾಕುತ್ತಿದೆ.

ತಮಿಳುನಾಡಿನವರು ಮೋದಿ ಜನ್ಮದಿನಕ್ಕೆ ಕೊಟ್ಟ ಉಡುಗೊರೆಗೆ ಉಡುಪಿಯಲ್ಲಿ ನಿರಂತರ ಪೂಜೆ!

ನಿತ್ಯಾನಂದ ಸುಮಾರು15 ನಿಮಿಷ ಇಂದ್ರಾಳಿ ಸೇತುವೆ ಮೇಲಿನ ರಸ್ತೆಯಲ್ಲಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಉರುಳುಸೇವೆ ಮಾಡಿದರು.ವಾಹನ ನಿಬಿಡ ಹೆದ್ದಾರಿ ಇದಾಗಿದ್ದು ಇವರು ಉರುಳು ಸೇವೆ ಮಾಡುವಾಗ ಪೊಲೀಸರು ಕೆಲ ಹೊತ್ತು ರಸ್ತೆ ಸಂಚಾರ ಬಂದ್ ಮಾಡಿದರು. ಸುರಿಯುವ ಮಳೆಯಲ್ಲಿ ಹೊಂಡದ ರಸ್ತೆಯಲ್ಲಿ ಉರುಳುಸೇವೆ ಮಾಡುತ್ತಿದ್ದ ನಿತ್ಯಾನಂದರನ್ನು ನೋಡಿದ ಜನ ,ಇನ್ನಾದರೂ ರಸ್ತೆ ರಿಪೇರಿಯಾಗಲಿ ಎಂದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

 ಅನಾಥ ಶವಗಳಿಗೆ ಹೆಗಲು ಕೊಟ್ಟ ಉಡುಪಿ ನ್ಯಾಯಾಧೀಶೆ

ಬಳಿಕ ಮಾತನಾಡಿದ ಅವರು ಪ್ರಧಾನಿ ಮೋದಿ ಬಂದಾಗ ರಸ್ತೆ ರಿಪೇರಿಯಾಗುತ್ತದೆ.ಇಲ್ಲಿಗೂ ಅವರು ಬರಲಿ.ಜನ ಈ ರಸ್ತೆಯಲ್ಲಿ ಸಾಯುತ್ತಿದ್ದಾರೆ.ಹಲವು ಅಪಘಾತಗಳು ನಿತ್ಯ ಸಂಭವಿಸುತ್ತಿವೆ.ಆದರೂ ಜನಪ್ರತಿನಿಧಿಗಳಿಗೆ ಅರ್ಥವಾಗುತ್ತಿಲ್ಲ.ಅವರ ಗಮನ ಸೆಳೆಯಲು ಉರುಳುಸೇವೆ ಪ್ರತಿಭಟನೆ ಹಮ್ಮಿಕೊಂಡಿದ್ದಾಗಿ ಹೇಳಿದರು.

click me!