ಮಠಾಧೀಶರ ಉಡುಪಿನ ಬಗ್ಗೆ ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ

By Suvarna News  |  First Published Mar 25, 2022, 4:51 PM IST

 ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಗೆ ದುಪ್ಪಟ್ಟ ಹಾಕಿದರೆ ತಪ್ಪೇನು ಎಂಬಂತೆ ಮಾತನಾಡಿರುವ ಸಿದ್ದರಾಮಯ್ಯ ಇದನ್ನು ಸಮರ್ಥಿಸುವ ಭರದಲ್ಲಿ ಸಿದ್ದು ಮಠಾಧೀಶರ ಉಡುಪಿನ ಬಗ್ಗೆ ಮಾತನಾಡಿದ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. 


 ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಮೈಸೂರು(ಮಾ.25): ರಾಜ್ಯದಲ್ಲಿ ಹೊತ್ತಿ ಉರಿದು ತಣ್ಣಗಾಗಿದ್ದ ಬೆಂಕಿಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah ) ತುಪ್ಪ ಸುರಿದಿದ್ದಾರೆ. ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ಅವರು ಮಾತನಾಡಿದ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರ ಮಾತಿನಿಂದ ಕೆರಳಿದ ಮಠಾಧೀಶರು (pontiff) ಕ್ಷಮೆ ಕೇಳುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರುತ್ತೆ ಎಂದು ಎಚ್ಚರಿಸಿದ್ದಾರೆ.  

Tap to resize

Latest Videos

ಹೌದು, ಊರ ಹಬ್ಬ ಸಿದ್ದರಾಮೇಶ್ವರ ಚಿಕ್ಕಮ್ಮತಾಯಿ ಜಾತ್ರಾ ಮಹೋತ್ಸವಕ್ಕಾಗಿ ಸಿದ್ದರಾಮನ ಹುಂಡಿಯಲ್ಲಿ ಉಳಿದುಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಜಾಲಿ ಮೂಡ್‌ನಲ್ಲಿ ಇದ್ದಾರೆ. ರಾಜಕೀಯ ಜಂಜಾಟ ಮರೆತು ಜಾಲಿಯಾಗಿರುವ ಸಿದ್ದರಾಮಯ್ಯ  ಗ್ರಾಮ ದೇವತೆಯಾದ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಬರೊಬ್ಬರಿ 45 ನಿಮಿಷ ವೀರ ಕುಣಿತ ಕುಣಿದು ಕುಪ್ಪಳಿಸಿದ್ರು. ಅದೇ ಮೂಡನ್ನು ಇಂದೂ ಮುಂದುವರಿಸಿದ ಅವರು ಬೆಳಿಗ್ಗೆಯಿಂದ ಊರ ದೇವರ ಪೂಜೆ ಹಾಗು ದೇವರ ಉತ್ಸವಗಳಲ್ಲಿ ಭಾಗವಹಿಸಿದರು.

ತಮ್ಮ ಮನೆಯ ಪಡಸಾಲೆ ಮೇಲೆ ಮಾತನಾಡುತ್ತಿದ್ದ ಅವರು ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಗೆ ದುಪ್ಪಟ್ಟ ಹಾಕಿದರೆ ತಪ್ಪೇನು ಎಂಬಂತೆ ಮಾತನಾಡಿದ್ದಾರೆ. ಇದನ್ನು ಸಮರ್ಥಿಸುವ ಭರದಲ್ಲಿ ಸಿದ್ದು ಮಠಾಧೀಶರ ಉಡುಪಿನ ಬಗ್ಗೆ ಮಾತನಾಡಿದ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಹಿಜಾಬ್ ವಿವಾದ ಆಗಲು ಬಿಜೆಪಿ ಕಾರಣವಾಗಿದ್ದು, ಮುಸ್ಲಿಂ ಹೆಣ್ಣು ಮಕ್ಕಳು ಒಂದು ದುಪ್ಪಟ್ಟ ತಲೆ ಮೇಲೆ ಹಾಕಿಕೊಳ್ಳುತ್ತೇನೆ ಎಂದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ ಎನ್ನುತ್ತಾ ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುತ್ತಾರೆ. ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಎಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ಇನ್ಫಿ ಸುಧಾಮೂರ್ತಿ ರಾಷ್ಟ್ರಪತಿಯಾಗಬೇಕೆಂದು ಹಂಪಿಯ ವಿರೂಪಾಕ್ಷನಿಗೆ ಪೂಜೆ 

ಇನ್ನು ಸ್ಪೀಕರ್ ಸದನದಲ್ಲಿ ಆರ್‌ಎಸ್‌ಎಸ್ ಬಗ್ಗೆ ಆಡಿದ ಮಾತಿಗೂ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸ್ಪೀಕರ್ ಆ ಕುರ್ಚಿಯಲ್ಲಿ ಕೂತು ನಮ್ಮ ಆರ್ ಎಸ್ ಎಸ್ ಅಂದಿದ್ದು ತಪ್ಪು ಎಂದಿದ್ದಾರೆ. ಸ್ಪೀಕರ್ ಆದ ತಕ್ಷಣ ಅವರು ಪಕ್ಷಾತೀತರಾಗಿ ಇರಬೇಕು. ಆದರೆ, ನಿನ್ನೆ ನಮ್ಮ ಆರ್‌ಎಸ್‌ಎಸ್   ಅಂದಿದ್ದು ಸರಿಯಲ್ಲ. ಆರ್‌ಎಸ್‌ಎಸ್ ಮನುಸ್ಮೃತಿ, ಶ್ರೇಣೀಕೃತ ವ್ಯವಸ್ಥೆ, ಜಾತಿ ವ್ಯವಸ್ಥೆ ಜಾರಿಗೊಳಿಸುತ್ತದೆ ಜೊತೆಗೆ ಸಮಾಜ ಒಡೆಯುವುದೇ ಆರ್‌ಎಸ್‌ಎಸ್  ಅಜೆಂಡಾವಾಗಿದ್ದು ಇದಕ್ಕಾಗಿ ನಾನು ಆರ್‌ಎಸ್‌ಎಸ್ ವಿರೋಧಿಸುತ್ತೇನೆ ಎಂದರು.

ಭಾವನಾತ್ಮಕ‌ ವಿಚಾರಗಳಿಂದ‌ ಬಿಜೆಪಿಯವರೇ ಇಕ್ಕಟ್ಟಿಗೆ ಸಿಲುಕುತ್ತಾರೆ ಎಂದಿರುವ ಸಿದ್ದರಾಮಯ್ಯ ಜನ ದಡ್ಡರಲ್ಲ, ಎಲ್ಲವನ್ನೂ ಗಮನಿಸುತ್ತಾರೆ ಎಂದರು. ಪರಿಹಾರದಲ್ಲಿ ಬಿಜೆಪಿ ತಾರತಮ್ಯ ಮಾಡುತ್ತಿದ್ದು, ಶಿವಮೊಗ್ಗ ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಟ್ಟವರು ಕರಾವಳಿಯ ದಿನೇಶ್ ಕುಟುಂಬಕ್ಕೆ ಕೊಟ್ರಾ.? ಅಂತ ಪ್ರಶ್ನೆ ಮಾಡಿದ್ರು. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದರು.

Chikkamagaluru: ತಾನು ಓದಿದ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಐಎಎಸ್ ಅಧಿಕಾರಿ 

ಮತ್ತೊಂದೆಡೆ ಮುಂದಿನ ಚುನಾವಣೆಯಲ್ಲಿ ತಮ್ಮ ಕ್ಷೇತ್ರ ಗೊಂದಲದ ಬಗ್ಗೆ ಮಾತನಾಡಿದ ಸಿದ್ದು ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದರು. ವರುಣ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ,  ಬಾದಾಮಿ, ಕೋಲಾರ ಹೀಗೆ ಅಲ್ಲಿಯ ಕ್ಷೇತ್ರದ ಜನ ನನಗೆ ಆಹ್ವಾನ ನೀದಿದ್ದಾರೆ. ಆದರೆ  ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ತೀರ್ಮಾನ ಮಾಡಿಲ್ಲ. ಎಲ್ಲಿ ನನಗೆ ರಾಜಕೀಯ ಪುನರ್ ಜನ್ಮ ಸಿಕ್ತೋ ಅಲ್ಲಿಯೇ ಸೋಲಿಸಿದ್ರು ಎನ್ನುವ ಮೂಲಕ ಚಾಮುಂಡೇಶ್ವರಿ ಸೋಲು ತಮ್ಮ ಮನದಿಂದ ಹೋಗಿಲ್ಲ ಎಂಬುದನ್ನು ವ್ಯಕ್ತಪಡಿಸಿದರು. ಮುಂದಿನ ಚುನಾವಣೆಯೇ ಕೊನೆ ಎಂದಿರುವ ಅವರು ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ ಎಂದರು.

ಒಟ್ಟಾರೆ ರಾಜ್ಯವ್ಯಾಪಿ ಜ್ವಾಲೆಯಂತೆ ಹರಡಿ ತಣ್ಣಗಾಗುತ್ತಿದ್ದ ವಿವಾದವನ್ನು ತಮ್ಮ ಮಾತಿನ ಮೂಲಕ ಮತ್ತೆ ಕಾಡ್ಗಿಚ್ಚು ಆಗುವಂತೆ ಮಾಡಿದ್ದಾರೆ ಸಿದ್ದರಾಮಯ್ಯ. ಸಿದ್ದರಾಮಯ್ಯ ಮಾತಿನಿಂದ ಕೆರಳಿರುವ ಸ್ವಾಮೀಜಿಗಳ ಕೋಪ ಯಾವ ರೂಪ ಪಡೆಯುತ್ತೆ ಕಾದು ನೋಡಬೇಕಿದೆ.

click me!