ಇಂಡಿ ಆಸ್ಪತ್ರೆಯಲ್ಲಿ ಎಲ್ಲವೂ ಇದೆ. ಆದರೆ, ಸರಿಯಾದ ನಿರ್ವಹಣೆ, ಬಳಕೆ ಇಲ್ಲದೇ ಇರುವುದರಿಂದ ಎಲ್ಲ ಯಂತ್ರೊಪಕರಣಗಳು ಧೂಳು ತಿನ್ನುತ್ತಿವೆ. 2003ರಲ್ಲಿ ಖರೀದಿಸಿರುವ ಸ್ಕ್ಯಾನಿಂಗ್ ಯಂತ್ರ ಆಪರೇಟರ್ ಇಲ್ಲದಕ್ಕಾಗಿ ಧೂಳುಹಿಡಿದಿವೆ.
ಖಾಜು ಸಿಂಗೆಗೋಳ
ಇಂಡಿ(ಆ.25): ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಒಂದೆಡೆಯಾದರೆ, ವಿಮೆಯ ಅವಧಿ ಮುಗಿದು ಶೆಡ್ ಸೇರಿರುವ ನಗುಮಗು ಆಂಬುಲೆನ್ಸ್, ದಿನಕ್ಕೆರಡು ಬಾರಿ ಕೆಟ್ಟುನಿಲ್ಲುವ 108 ಆಂಬುಲೆನ್ಸ್. ಇದ್ದೂ ಇಲ್ಲದಂತಾಗಿರುವ ತುಕ್ಕುಹಿಡಿದ ಜನರೇಟರ್. ರಿಪೇರಿಗೆ ಬಂದಿರುವ ಎಕ್ಸರೇ ಯಂತ್ರ, ಧೂಳು ಹಿಡಿದಿರುವ ಸ್ಕ್ಯಾನಿಂಗ್ ಯಂತ್ರ. ಇವೆಲ್ಲ ದುಃಸ್ಥಿತಿಯನ್ನು ನೋಡಿದರೆ ಇಂಡಿಯ ಸರ್ಕಾರಿ ಆಸ್ಪತ್ರೆಗೇ ತುರ್ತು ಚಿಕಿತ್ಸೆ ನೀಡಬೇಕಿದೆ ಎಂದೆನಿಸದೇ ಇರದು!
100 ಹಾಸಿಗೆಯುಳ್ಳ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸುಧಾರಣೆ ಆಗುವುದು ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರನ್ನು ಬಹುದಿನಗಳಿಂದ ಕಾಡುತ್ತಿದೆ. ಹೀಗಾಗಿ, ಇಂಡಿ ಸರ್ಕಾರಿ ಆಸ್ಪತ್ರೆಯಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗಲಿದೆ ಎಂಬ ಭರವಸೆ ಜನರಿಗೆ ಸಿಗುವುದಾದರೂ ಯಾವಾಗ?
ಬೇಕಾದಾಗ ಬಂದುಹೋಗುವ ಸಿಬ್ಬಂದಿ:
ಬೆಳಗ್ಗೆ 9 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಬೇಕಾದ ವೈದ್ಯರು, ಸಿಬ್ಬಂದಿ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಮನಸಿಗೆ ಬಂದ ಸಮಯಕ್ಕೆ ಆಸ್ಪತ್ರೆಗೆ ಬರುತ್ತಾರೆ. ಕಾಟಾಚಾರಕ್ಕೆ ನಾಲ್ಕೈದು ರೋಗಿಗಳ ತಪಾಸಣೆ ನಡೆಸುತ್ತಾರೆ. ಅಷ್ಟರಲ್ಲಿ ಮಧ್ಯಾಹ್ನದ ಊಟದ ಸಮಯ ಎಂದು ಮತ್ತೆ ಗಂಟೆಗಟ್ಟಲೇ ಬಿಡುವು ಪಡೆಯುತ್ತಾರೆ ಎಂದು ಸಾರ್ವಜನಿಕರೇ ದೂರುತ್ತಿದ್ದಾರೆ.
ನಾವು ‘ಆಪರೇಷನ್ ಹಸ್ತ’ ಮಾಡುತ್ತಿಲ್ಲ, ಅವರೇ ಬರ್ತಿದ್ದಾರೆ: ಸಚಿವ ಎಂ.ಬಿ.ಪಾಟೀಲ್
ಧೂಳುಹಿಡಿದ ಯಂತ್ರಗಳು:
ಈ ಆಸ್ಪತ್ರೆಯಲ್ಲಿ ಎಲ್ಲವೂ ಇದೆ. ಆದರೆ, ಸರಿಯಾದ ನಿರ್ವಹಣೆ, ಬಳಕೆ ಇಲ್ಲದೇ ಇರುವುದರಿಂದ ಎಲ್ಲ ಯಂತ್ರೊಪಕರಣಗಳು ಧೂಳು ತಿನ್ನುತ್ತಿವೆ. 2003ರಲ್ಲಿ ಖರೀದಿಸಿರುವ ಸ್ಕ್ಯಾನಿಂಗ್ ಯಂತ್ರ ಆಪರೇಟರ್ ಇಲ್ಲದಕ್ಕಾಗಿ ಧೂಳುಹಿಡಿದಿದೆ. ಉದ್ಘಾಟನೆ ಆದಾಗಿನಿಂದ ಒಮ್ಮೆಯೂ ಬಳಕೆಯಾಗದ ಸ್ಕಾ್ಯನಿಂಗ್ ಯಂತ್ರ ತುಕ್ಕುಹಿಡಿಯುವ ಸ್ಥಿತಿ ತಲುಪಿದೆ. ಎಕ್ಸರೇ ಯಂತ್ರ ಕೆಟ್ಟುನಿಂತು ಒಂದು ವಾರವಾದರೂ ಇಲ್ಲಿಯವರೆಗೆ ಅದನ್ನು ದುರಸ್ತಿ ಮಾಡಿಸಿಲ್ಲ. ಹೀಗಾಗಿ, ಎಕ್ಸರೇ ಮಾಡಿಸಿಕೊಳ್ಳಲು ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆ ರೋಗಿಗಳಿಗೆ ಬಂದೊದಗಿದೆ.
ವೈದ್ಯರು, ಸಿಬ್ಬಂದಿ ಕೊರತೆ:
ಇಂಡಿ ಸರ್ಕಾರಿ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ ಸೇರಿ ಒಟ್ಟು 78 ಹುದ್ದೆಗಳ ಮಂಜೂರಾತಿ ಇದೆ. ಪ್ರಸ್ತುತ 33 ಜನ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, 45 ಹುದ್ದೆಗಳು ಖಾಲಿ ಇವೆ. ತುರ್ತುಚಿಕಿತ್ಸೆ ವೈದ್ಯರು, ಸ್ತ್ರೀರೋಗ ತಜ್ಞ, ಮಾನಸಿಕ ರೋಗ ತಜ್ಞ , ಶುಶ್ರೂಷಕರು ಸೇರಿ ಹಲವು ಹುದ್ದೆಗಳು ಖಾಲಿ ಇದ್ದು, 13 ವರ್ಷಗಳಿಂದ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು ಇಲ್ಲದ ಕಾರಣಕ್ಕಾಗಿ ಸಂಬಂಧಿಸಿದ ಚಿಕಿತ್ಸೆಗೆ ರೋಗಿಗಳು ವಿಜಯಪುರಕ್ಕೆ ಹೋಗುವುದು ಅನಿವಾರ್ಯವಾಗಿದೆ.
ಕತ್ತಲೆಯ ಸುಳಿಯಲ್ಲಿ ಆಸ್ಪತ್ರೆ:
ಆಸ್ಪತ್ರೆಯ ಸುತ್ತ ವಿದ್ಯುತ್ ಕಂಬಗಳು ಇದ್ದರೂ ಅವುಗಳಿಗೆ ದೀಪಗಳು ಇಲ್ಲದ ಕಾರಣಕ್ಕಾಗಿ ಸಂಜೆಯಾದರೆ ಆಸ್ಪತ್ರೆಯ ಆವರಣದಲ್ಲಿ ಕತ್ತಲು ಆವರಿಸುತ್ತದೆ. ಇದರಿಂದ ರಾತ್ರಿ ಚಿಕಿತ್ಸೆಗೆಂದು ಬರುವ ರೋಗಿಗಳು, ಸಂಬಂಧಿಗಳು ಪರದಾಡಬೇಕಿದೆ. ಕತ್ತಲಲ್ಲಿ ಆಸ್ಪತ್ರೆ ಭೂತಬಂಗಲೆಯಂತೆ ಕಾಣುತ್ತದೆ. ಆಸ್ಪತ್ರೆಯಲ್ಲಿ ಜನರೇಟರ್ ಇದ್ದರೂ, ಅದಕ್ಕೆ ಡಿಸೇಲ್ ಹಾಕದ ಕಾರಣ ಅದು ಸ್ಥಗಿತಗೊಂಡಿದೆ.
Chandrayaan-3: ಇಸ್ರೋ ಸಾಧನೆಯ ಹಿಂದೆ ವಿಜಯಪುರ ಜಿಲ್ಲೆಯ ವಿಜ್ಞಾನಿಗಳು..!
ಇಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಉಪಕರಣಗಳ ಸೌಲಭ್ಯ ಇದ್ದರೂ, ಉಪಕರಣಗಳ ನಿರ್ವಹಣೆ ಮಾಡುವ ಸಿಬ್ಬಂದಿಯ ಕೊರತೆಯಿಂದ ಉಪಕರಣಗಳ ಉಪಯೋಗ ಸಾರ್ವಜನಿಕರಿಗೆ ದೊರೆಯುತ್ತಿಲ್ಲ. ಅಲ್ಲದೇ, ಪ್ರಸ್ತುತ ಆಸ್ಪತ್ರೆಯಲ್ಲಿ ಇರುವ ವೈದ್ಯರು ಹಾಗೂ ಸಿಬ್ಬಂದಿ ಕೂಡ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರುತ್ತಿಲ್ಲ. ಈ ಅವ್ಯವಸ್ಥೆ ಕೊನೆಯಾಗಬೇಕು ಎಂದು ಕರ್ನಾಟಕ ಪ್ರದೇಶ ಮಾದಿಗರ ಸಂಘ ಅಧ್ಯಕ್ಷ ಚಂದ್ರಶೇಖರ ಹೊಸಮನಿ ಹೇಳಿದ್ದಾರೆ.
ಇಂಡಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರ ಹುದ್ದೆ ಖಾಲಿ ಇರುವುದರಿಂದ ಹೆರಿಗೆ, ಸೀಜೆರಿಯನ್ ಮಾಡುವುದು ಸಾಧ್ಯವಾಗುತ್ತಿಲ್ಲ. ಸ್ತ್ರೀರೋಗ ತಜ್ಞರನ್ನು ಒದಗಿಸಲು ಮತ್ತು ಖಾಲಿ ಇರುವ ಇನ್ನಿತರ ಹುದ್ದೆಗಳನ್ನು ಭರ್ತಿ ಮಾಡಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ವಿದ್ಯುತ್ ಸಮಸ್ಯೆಯಿಂದ ಎಕ್ಸರೇ ಯಂತ್ರ ಸುಟ್ಟಿದೆ. ಇನ್ನೊಂದು ಎಕ್ಸರೇ ಯಂತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಇಂಡಿ ಸಾರ್ವಜನಿಕ ಆಸ್ಪತ್ರೆ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ.ಜಬುನ್ನೀಸಾ ಬೀಳಗಿ ತಿಳಿಸಿದ್ದಾರೆ.