
ಬೆಂಗಳೂರು (ಆ.25): ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಭಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಮವು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ಹಳದಿ ಮತ್ತು ಕೆಂಪು ಬಣ್ಣದ ಧ್ವಜ ಹಾಗೂ ಭುವನೇಶ್ವರಿ ತಾಯಿಯ ಪರಿಕಲ್ಪನೆಯನ್ನು ಒಪ್ಪದ ಭಾನು ಮುಷ್ತಾಕ್ ಅವರು ದುಷ್ಟರ ಸಂಹಾರ ಮಾಡಿದ ಚಾಮುಂಡೇಶ್ವರಿ ದೇವಿಯನ್ನು ಹೇಗೆ ಒಪ್ಪಲು ಸಾಧ್ಯ ಎಂದು ಪ್ರಶ್ನಿಸಿದರು.
"2023ರ ಜನಸಮ್ಮೇಳನದಲ್ಲಿ ಭಾನು ಮುಷ್ತಾಕ್, 'ಕನ್ನಡ ಭುವನೇಶ್ವರಿಯನ್ನು ಅರಿಶಿನ ಕುಂಕುಮದ ಬಾವುಟದಿಂದ ಮಾಡಿಬಿಟ್ಟಿದ್ದೀರಿ, ನಾನು ಎಲ್ಲಿ ನಿಲ್ಲಬೇಕು?' ಎಂದು ಪ್ರಶ್ನಿಸಿದ್ದರು. ಕನ್ನಡ ಧ್ವಜವನ್ನೇ ಒಪ್ಪದವರು ಚಾಮುಂಡೇಶ್ವರಿಯನ್ನ ಹೇಗೆ ಒಪ್ಪುತ್ತಾರೆ? ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ" ಎಂದು ಶೋಭಾ ಕರಂದ್ಲಾಜೆ ಆಪಾದಿಸಿದ್ದಾರೆ.
ದಸರಾ ಮಹೋತ್ಸವವು ಮಹಿಷಾಸುರನನ್ನು ಸಂಹಾರ ಮಾಡಿದ ತಾಯಿ ಚಾಮುಂಡೇಶ್ವರಿಯ ವಿಜಯದ ಸಂಕೇತವಾಗಿದೆ ಎಂದು ಹೇಳಿದ ಕರಂದ್ಲಾಜೆ, ಈ ಆಚರಣೆ ಮತ್ತು ದೇವಸ್ಥಾನಕ್ಕೆ ಅಪಮಾನ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡಿದೆ ಎಂದು ದೂರಿದರು. "ಭಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟ ಹತ್ತಬಾರದು. ಕೂಡಲೇ ಆಹ್ವಾನವನ್ನು ವಾಪಸ್ ಪಡೆಯಬೇಕು" ಎಂದು ಆಗ್ರಹಿಸಿದರು.
"ಭಾನು ಮುಷ್ತಾಕ್ ಅವರು ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರು ಮತ್ತು ಮೂರ್ತಿ ಪೂಜೆ ಒಪ್ಪದವರು. ಅವರು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮತ್ತು ದೀಪ ಹಚ್ಚುವ ಕೆಲಸ ಮಾಡುತ್ತಾರೆ ಎಂದರೆ ಉದ್ಘಾಟನೆಗೆ ಬರಲಿ, ನಮ್ಮ ವಿರೋಧವಿಲ್ಲ. ಇಲ್ಲವಾದರೆ, ದೇವಸ್ಥಾನಗಳಿಗೆ ಅಪಮಾನ ಮಾಡುವುದು ಜಾತ್ಯತೀತೆಯಲ್ಲ" ಎಂದು ಅವರು ಸರ್ಕಾರ ಮತ್ತು ಭಾನು ಮುಷ್ತಾಕ್‌ಗೆ ಸವಾಲು ಹಾಕಿದ್ದಾರೆ.
ಇದನ್ನ ಯಾವುದೇ ಕಾರಣಕ್ಕೂ ಒಪ್ಪಲ್ಲ. ಎಲ್ಲಾ ಭಕ್ತಾದಿಗಳು ವಿರೋಧ ಮಾಡಬೇಕು. ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹ ಮಾಡಬೇಕು. ಯಾವುದೇ ವಿಚಾರಗಳಿಗೆ ನಮ್ಮ ವಿರೋಧ ಇಲ್ಲ. ಜಾತ್ಯಾತೀತವನ್ನೂ ಅಳವಡಿಸಿಕೊಂಡು ಬಂದಿದ್ದೇವೆ. ಹಾಗಂತ ಹಿಂದೂ ಧರ್ಮವನ್ನ ವಿರೋಧ ಮಾಡೋದಲ್ಲ. ತಕ್ಷಣವೇ ಬಾನು ಮುಷ್ತಾಕ್ ಅವರನ್ನ ಸಂಪರ್ಕ ಮಾಡಬೇಕು. ಅವರು ಮೂರ್ತಿ ಪೂಜೆಗೆ ಒಪ್ಪಿದ್ರೆ ಮಾತ್ರ ಅವರಿಗೆ ಆಹ್ವಾನ ನೀಡಬೇಕು ಎಂದು ಹೇಳಿದ್ದಾರೆ.
ಅವರು ದಸರಾ ಆಚರಣೆ ಮಾಡಿರಬಹುದು. ಆದರೆ, ತಾಯಿ ಚಾಮುಂಡೇಶ್ವರಿ ಪೂಜೆಯನ್ನ ಮಾಡಿಲ್ಲ. ಮಹಾರಾಜರ ಕಾಲದಲ್ಲಿ ಏನಾದರೂ ಆಗಿರಬಹುದು. ಟಿಪ್ಪು ಸುಲ್ತಾನ್ ಹೋಗಿರಬಹುದು, ಪೂಜೆ ಮಾಡಿದ್ದಾರಾ? ಬಾನು ಮುಷ್ತಾಕ್ ಪುಷ್ಪಾರ್ಚನೆ ಮಾಡ್ತಾರೆ ಅಂದ್ರೆ ನಮ್ಮ ವಿರೋಧ ಇಲ್ಲ. ಆದರೆ, ತಾಯಿ ಭುವನೇಶ್ವರಿಗೆ ವಿರೋಧ ಮಾಡೋರನ್ನ ಸಹಿಸಲ್ಲ. ತಾಯಿ ಭುವನೇಶ್ವರಿ ದೇವಸ್ಥಾನ ಇದೆ ನಮ್ಮ ರಾಜ್ಯದಲ್ಲಿ. ಭುವನೇಶ್ವರಿಯನ್ನ ನಾವು ಕನ್ನಡ ಮಾತೆ ಅಂತ ತಿಳಿದಿದ್ದೇವೆ. ಕುವೆಂಪು ಅವರು ಕೂಡ ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಅಂತ. ಕಾಂಗ್ರೆಸ್ ನಾಯಕರಿಗೆ ಏನಾಗಿದೆ.? ಎಷ್ಟು ದಿನ ಓಲೈಕೆ ರಾಜಕಾರಣ ಮಾಡ್ತೀರಿ? ಇದು ನವರಾತ್ರಿ, ದುರ್ಗೆಗೆ ಸಂಬಂಧಿಸಿದ್ದು. ಒಂಭತ್ತು ದಿನಗಳ ಕಾಲ ಆರಾಧನೆ ಮಾಡ್ತೇವೆ ಎಂದು ಹೇಳಿದ್ದಾರೆ.