ಮೈಸೂರು ದಸರಾದಲ್ಲಿ ಈ ಬಾರಿಯೂ ಶೋಭಾ ವಿಶೇಷ

By Web DeskFirst Published Oct 20, 2018, 7:37 PM IST
Highlights

 ಶೋಭಾ ಕರಂದ್ಲಾಜೆ ಅವರು ದಸರಾ ಆನೆಗಳಿಗೆ ಕಬ್ಬು ತಿನಿಸಿದರು. ಬಳಿಕ ಆನೆಗಳ ಜೊತೆಗೆ ಫೋಟೋ ತೆಗೆಸಿಕೊಂಡರು. ನಂತರ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಖುದ್ದು ಉಪಹಾರ ಬಡಿಸಿದರು.

ಮೈಸೂರು[ಅ.20]: ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಗಜಪಡೆ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಪ್ರತಿ ವರ್ಷದಂತೆ ಸಂಸದೆ ಶೋಭಾ ಕರಂದ್ಲಾಜೆ ಅವರು ಗುರುವಾರ ಮೈಸೂರು ಅರಮನೆ ಆವರಣದಲ್ಲಿ ಉಪಹಾರ ವ್ಯವಸ್ಥೆ ಮಾಡಿದ್ದರು.

ಇದಕ್ಕೂ ಮುನ್ನ ಶೋಭಾ ಕರಂದ್ಲಾಜೆ ಅವರು ದಸರಾ ಆನೆಗಳಿಗೆ ಕಬ್ಬು ತಿನಿಸಿದರು. ಬಳಿಕ ಆನೆಗಳ ಜೊತೆಗೆ ಫೋಟೋ ತೆಗೆಸಿಕೊಂಡರು. ನಂತರ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಖುದ್ದು ಉಪಹಾರ ಬಡಿಸಿದರು.

ಲೈಂಗಿಕ ಕಿರುಕುಳ- ಕ್ರಮಕ್ಕೆ ಆಗ್ರಹ: ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸರಿಯಾಗಿ ರಕ್ಷಣೆ ನೀಡಲು ಆಗದಿದ್ದಲ್ಲಿ ಓಪನ್ ಸ್ಟ್ರೀಟ್ ಫೇಸ್ಟಿವಲ್ ಯಾಕೆ ಮಾಡಬೇಕಾಗಿತ್ತು? ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೂ, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಕೂಡಲೇ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಹೀನ ಕೃತ್ಯ ಎಸಗಿದವರ ವಿರುದ್ಧ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ನಾನು ಚಾಮುಂಡಿಬೆಟ್ಟ ಹತ್ತಿದ್ದೇನೆ. ಅಲ್ಲಿ ಯಾವುದೇ ಸ್ಟ್ರೀಟ್ ಲೈಟ್ ಇರಲಿಲ್ಲ, ತುಂಬಾ ನೋವಾಗಿದೆ. ಚಾಮುಂಡಿಬೆಟ್ಟ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನಾನು ಚಾಮುಂಡಿಬೆಟ್ಟ ಹತ್ತುವಾಗ ಸಾರ್ವಜನಿಕರು ಅಲ್ಲಿನ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ನಾನು ಯಾವ ದಸರೆಯಲ್ಲೂ ಈ ರೀತಿಯ ಅವ್ಯವಸ್ಥೆ ನೋಡಿರಲಿಲ್ಲ. ಈ ಬಾರಿಯ ಅವ್ಯವಸ್ಥೆ ಕಂಡು ನನಗೆ ತುಂಬಾ ಬೇಸರವಾಗಿದೆ ಎಂದು ಅವರು ಹೇಳಿದರು. 

ಕಾಂಗ್ರೆಸ್ ಸಚಿವರು, ಶಾಸಕರು ದಸರೆಯಲ್ಲಿ ಭಾಗವಹಿಸುತ್ತಿಲ್ಲ. ಸಚಿವರಾದ ಜಿ.ಟಿ. ದೇವೇಗೌಡ, ಮಹೇಶ್ ನಡುವೆಯೇ ಕಿತ್ತಾಟ ನಡೆಯುತ್ತಿದೆ. ಈ ಬಾರಿಯೂ ದಸರಾ ಉಪ ಸಮಿತಿ ಮಾಡಿಲ್ಲ. ಮತ್ತೆಲ್ಲಿದೆ ಕಾಂಗ್ರೆಸ್- ಜೆಡಿಎಸ್ ನಡುವಿನ ಹೊಂದಾಣಿಕೆ? ಅವರ ಮೈತ್ರಿ ವಿಧಾನಸೌಧಕ್ಕೆ ಮಾತ್ರ ಸೀಮಿತ. ಗ್ರಾಮಗಳಲ್ಲಿ ಎಲ್ಲಿದೆ ಅವರ ಮೈತ್ರಿ ಎಂಬುದನ್ನು ತೋರಿಸಲಿ ಎಂದು ಅವರು ವಾಗ್ದಾಳಿ ನಡೆಸಿದರು.

click me!