ಅಮ್ಮನನ್ನು ನೋಡಿ ವೇದಿಕೆ ಮೇಲೆಯೇ ಕಣ್ಣೀರಿಟ್ಟ ವರ; 57 ಲಕ್ಷ ವ್ಯೂವ್ ಪಡೆದ ವಿಡಿಯೋ

Published : Nov 18, 2026, 12:47 PM IST
Groom

ಸಾರಾಂಶ

ಶಿವಮೊಗ್ಗದಲ್ಲಿ ನಡೆದ ಮದುವೆಯೊಂದರಲ್ಲಿ, ವರ ಭಾವುಕರಾಗಿ ಕಣ್ಣೀರು ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ 57 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ವರನ ಈ ಕಣ್ಣೀರಿಗೆ ಕಾರಣವಾಗಿದ್ದು ಅಮ್ಮ. ಈ ವಿಡಿಯೋ ನೋಡಿದ ನೆಟ್ಟಿಗರು ಸಹ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಶಿವಮೊಗ್ಗ: ಕೆಲವೊಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಕಾರಣಗಳಿಂದ ವೈರಲ್ ಆಗುತ್ತವೆ. ಹಾಗೆಯೇ ನೋಡುಗರನ್ನು ಸಹ ಒಂದು ಕ್ಷಣ ಭಾವುಕರನ್ನಾಗಿಸುತ್ತದೆ. ವೈರಲ್ ಆಗುತ್ತಿರುವ ಈ ಸುಂದರ ವಿಡಿಯೋಗೆ 57 ಲಕ್ಷಕ್ಕೂ ಅಧಿಕ ವ್ಯೂವ್, 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 800ಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. ವೇದಿಕೆ ಮೇಲೆ ನಿಂತಿದ್ದ ವರ ವಿಶ್ವಾಸ್ ಕಣ್ಣೀರು ಹಾಕುತ್ತಿದ್ದಂತೆ ಕಲ್ಯಾಣಮಂಟಪದಲ್ಲಿದ್ದ ಎಲ್ಲರೂ ಭಾವುಕರಾಗಿದ್ದಾರೆ. ಅಷ್ಟಕ್ಕೂ ವರ ಕಣ್ಣೀರು ಹಾಕಿದ್ಯಾಕೆ ಎಂಬುದನ್ನು ನೋಡೋಣ ಬನ್ನಿ.

ಮದುವೆ ಅಂದ್ರೆ ಅಲ್ಲಿ ಸಂತೋಷ ಮತ್ತು ಸಂಭ್ರಮ ಮನೆ ಮಾಡಿರುತ್ತದೆ. ಇಂತಹ ಸಂದರ್ಭದಲ್ಲಿ ಭಾವನಾತ್ಮಕ ಸನ್ನಿವೇಶಗಳು ಸೃಷ್ಟಿಯಾಗಿ ಎಲ್ಲರೂ ಭಾವುಕರಾಗಿ ಕಣ್ಣೀರು ಹಾಕುತ್ತಾರೆ. ಇತ್ತೀಚೆಗೆ ಮದುವೆಯಲ್ಲಿ ಪ್ರೀವೆಡ್ಡಿಂಗ್ ಶೂಟ್ ವಿಡಿಯೋಗಳನ್ನ ಬೃಹತ್ ಎಲ್‌ಇಡಿ ಪರದೆ ಮೇಲೆ ಹಾಕಲಾಗುತ್ತದೆ. ಹಾಗೆಯೇ AI ಬಳಸಿ ತಮ್ಮನಗಲಿದ ಕುಟುಂಬಸ್ಥರನ್ನು ಜೀವಂತವಾಗಿ ಎಲ್ಇಡಿ ಪರದೆ ಮೇಲೆ ತೆಗೆದುಕೊಂಡು ಬರಲಾಗುತ್ತದೆ. ಇದೇ ರೀತಿ ದೂರವಾದವರ ಫೋಟೋಗಳನ್ನು ಸಹ ಮದುವೆಯಲ್ಲಿ ನೀಡಲಾಗುತ್ತದೆ.

ಏನಿದು Lightning Painting Art?

ಶಿವಮೊಗ್ಗದಲ್ಲಿ ನಡೆದ ಮದುವೆಯೊಂದರಲ್ಲಿ ವರನಿಗೆ Lightning Painting Art ನೀಡಲಾಗಿದೆ. ಈ ಕಪ್ಪು ಕ್ಯಾನ್ವಸ್ ಮೇಲೆ ಬಿಳಿ ಬಣ್ಣದಿಂದ ಪೇಂಟಿಂಗ್ ಮಾಡಲಾಗಿರುತ್ತದೆ. ಈ ಪೇಂಟಿಂಗ್ ಮೇಲೆ ಮಿಂಚು ಹಾಕಿದ್ಮೇಲೆ ಸುಂದರವಾದ ಚಿತ್ರ ರಚನೆಯಾಗುತ್ತದೆ. ಇದೊಂದು ಸರ್ಪೈಸ್ ಪೇಟಿಂಗ್ ಅಂತಾನೇ ಹೇಳಬಹುದು. ಇಂತಹವುದೇ ಒಂದು ಪೇಟಿಂಗ್‌ ವರನಿಗೆ ಕೊಡಲು ವಧು ಲತಾ ಪ್ಲಾನ್ ಮಾಡಿಕೊಂಡಿದ್ದಾರೆ.

ಮದುವೆಗೆ ಕೆಲ ತಿಂಗಳ ಮುಂಚೆಯೇ ವರನ ತಾಯಿ ನಿಧನರಾಗಿದ್ದರು. ಈ ಹಿನ್ನೆಲೆ ವರನಿಗೆ ತಾಯಿಯ Lightning Painting Art ನೀಡಲು ವಧು ನಿರ್ಧರಿಸಿದ್ದರು. ಇದಕ್ಕಾಗಿ ಕಲಾವಿದ ಪೂರ್ಣಚಂದ್ರ (poorna_chandra63) ಅವರನ್ನು ಸಂಪರ್ಕಿಸಿದ್ದರು. ವರನ ತಾಯಿಯ ಫೋಟೋ ನೀಡಿ, ಪೇಂಟಿಂಗ್ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಅಂತೆಯೇ ಪೂರ್ಣಚಂದ್ರ, ತಮ್ಮ ಕುಂಚದಿಂದ ವರನ ತಾಯಿಯನ್ನು ಜೀವಂತವಾಗಿಸಿದ್ದಾರೆ.

ಫೋಟೋ ನೋಡಿ ಕಣ್ಣೀರಿಟ್ಟ ವರ!

ಆರಂಭದಲ್ಲಿ ಯಾವುದೋ ಫೋಟೋ ಇರಬಹುದು ಎಂದು ವರ ವಿಶ್ವಾಸ್, ಪೇಂಟಿಂಗ್ ಮೇಲೆ ಮಿಂಚು ಹಾಕಲು ಮುಂದಾಗಿದ್ದಾರೆ. ಪೇಂಟಿಂಗ್ ಮೇಲೆ ಮಿಂಚು ಹರಡುತ್ತಿದ್ದಂತೆ ಅಲ್ಲಿ ಅಮ್ಮನನ್ನು ಕಂಡು ವರ ಅಕ್ಷರಶಃ ಭಾವುಕರಾಗಿ ಕಣ್ಣೀರು ಹಾಕಲು ಆರಂಭಿಸಿದ್ದಾರೆ. ಕೂಡಲೇ ವೇದಿಕೆಯಿಂದ ಹಿಂದೆ ಸರಿಯುವ ಮೂಲಕ ಕಣ್ಣೀರು ಮರೆಮಾಚಲು ಪ್ರಯತ್ನಿಸಿದ್ದಾರೆ. ವರ ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದು, ಅಮ್ಮನನ್ನು ನೋಡುತ್ತಿದ್ದಂತೆ ಭಾವುಕರಾಗಿದ್ದಾರೆ.

PREV
Read more Articles on
click me!

Recommended Stories

ಕೃಷಿಯಲ್ಲೇ ಬಂಪರ್ ಸಾಧನೆ ಮಾಡಿದ ಚಿಕ್ಕಬಳ್ಳಾಪುರದ ರೈತ; 126 ಎಕರೆ ಫಾರ್ಮ್, 120 ಕಾರ್ಮಿಕರು; ತಿಂಗಳಿಗೆ ₹20 ಲಕ್ಷ ಖರ್ಚು
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮಂಡ್ಯದ ಕಾಂಗ್ರೆಸ್ ಮುಖಂಡನ ಅದ್ಧೂರಿ ಬರ್ತಡೇ; ಖರ್ಗೆಗೆ ತಿವಿದ ಬಿಜೆಪಿ!