
ಶಿವಮೊಗ್ಗ: 9ನೇ ತರಗತಿಯ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪದಲ್ಲಿ ನಡೆದಿದೆ. ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದು, ಮೃತ ವಿದ್ಯಾರ್ಥಿಯನ್ನು 9ನೇ ತರಗತಿಯ ಸೃಷ್ಟಿ ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿನಿಯ ಪಾಲಕರು ಇನ್ನಿಬ್ಬರು ಮಕ್ಕಳೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ತೆರಳಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿ ಆಕೆ ಪಾಲಕರೊಂದಿಗೆ ಯಾವುದೇ ಸಮಸ್ಯೆ ಹೇಳಿಕೊಂಡಿರಲಿಲ್ಲವಂತೆ. ಶಾಲೆಯಲ್ಲೂ ಚೆನ್ನಾಗಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ತನ್ನ ಸಾವಿಗೆ ತಾನೇ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾರೆ. ತಂಗಿ ಹುಟ್ಟಿದ ಮೇಲೆ ತನ್ನನ್ನು ಪೋಷಕರು ನಿರ್ಲಕ್ಷ ವಹಿಸಿದ್ದಾರೆ. ಮನೆಯಲ್ಲಿ ತನ್ನ ವಿದ್ಯಾಭ್ಯಾಸದ ಖರ್ಚು ನಿಭಾಯಿಸುವುದಕ್ಕೆ ಪೋಷಕರು ಪರಸ್ಪರ ಜಗಳವಾಡುತ್ತಿದ್ದ ಹಿನ್ನೆಲೆ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ವಿದ್ಯಾರ್ಥಿನಿ ಬರೆದಿಟ್ಟಿದ್ದಾಳೆ ಎನ್ನಲಾದ ಪತ್ರದಲ್ಲಿ ಉಲ್ಲೇಖಸಲಿದೆ.
ಕ್ಷಮಿಸಿ ಅಪ್ಪ-ಅಮ್ಮ ಎಂದು ಪತ್ರದಲ್ಲಿ ಬರೆದಿರುವ ಆಕೆ, ತಮ್ಮ ಮತ್ತು ತಂಗಿಯನ್ನು ಪೋಷಕರು ಚೆನ್ನಾಗಿ ಓದಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾಳೆ. ಇದೇ ವೇಳೆ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ, ಜಗಳವಾಡಬೇಡಿ. ನನ್ನ ಸಾವಿಗೆ ನಾನೇ ಕಾರಣ ವಿದ್ಯಾರ್ಥಿನಿ ಎಂದು ಹೇಳಿದ್ದಾಳೆ. ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
‘ನನ್ನ ಸಾವಿಗೆ ನಾನೇ ಕಾರಣ. ಯಾಕೆಂದರೆ ನಾನು ನಮ್ಮ ಮನೆಯವರಿಗೆ ಹೊರೆಹಾಗಿದ್ದೇನೆ. ನನ್ನ ಸ್ಕೂಲಿನ ಫೀಸ್ ಕಟ್ಟಲು, ನನ್ನ ಶಾಲೆಯ ಖರ್ಚನ್ನು ನೋಡಿಕೊಳ್ಳಲು ನನ್ನ ಮನೆಯವರಿಗೆ ಆಗುತ್ತಿಲ್ಲ. ನನ್ನ ಅಪ್ಪ ಅಮ್ಮನ ನಡುವೆ ನಾನು ಮನಸ್ಥಾಪ ಮತ್ತು ಅನುಮಾನವನ್ನು ಉಂಟು ಮಾಡಿದದೇನೆ. ಯಾರಿಗಾದರು ನೋಯಿಸಿದರೆ ಕ್ಷಮಿಸಿ. Sorry pappa, Sorry Amma. ಪಪ್ಪ ಪ್ಲೀಸ್ ಅಮ್ಮನಿಗೆ ನೋಯಿಸಬೇಡಿ. ಅಮ್ಮ ಪಪ್ಪನ ಜೊತೆ ಜಗಳವಾಡಬೇಡಿ. ನನ್ನ ತಂಗಿ, ತಮ್ಮನ ಚೆನ್ನಾಗಿ ನೋಡಿಕೊಳ್ಳಿ. ನಾನು ಮಾಡಿರುವ ಎಲ್ಲಾ ತಪ್ಪನ್ನು ಕ್ಷಮಿಸಿಬಿಡಿ. ನ್ನ ತಂಗಿಗೆ ಚೆನ್ನಾಗಿ ಓದಿಸಿ. ಅವಳು ನಿಮ್ಮನ್ನು ನೋಡಿಕೊಳ್ಳುತ್ತಾಳೆ. ನನಗೆ ನೋವಾಗುವ ವಿಷಯವೆಂದರೆ ನನನ್ನು ಇಷ್ಟಪಡುವವರು ಯಾರು ಸಹ ಇಲ್ಲ. ನನ್ನ ತಂಗಿ ಹುಟ್ಟಿದ ಮೇಲೆ ನನ್ನ ಪೋಷಕರು ತುಂಬಾ ನನನ್ನು ಬಹಳಷ್ಟು ನೋಯಿಸಿದ್ದಾರೆ. Sorry & GoodBye. ಇನ್ನೊಂದು ಬಾರಿ ಹುಟ್ಟಿದರೆ ಮನುಷ್ಯಳಾಗಿ ಮಾತ್ರ ಹುಟ್ಟೋದಿಲ್ಲ’ ಎಂದು ಬರೆದಿದ್ದಾಳೆ.
ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಭೈರನಕಟ್ಟೆ ಸಮೀಪದ ಬಳಿ ಯುವನನೋರ್ವ ಈಜಲು ತೆರಳಿದ್ದ ಸಂದರ್ಭದಲ್ಲಿ ನೀರುಪಾಲಾಗಿದ್ದಾನೆ. 23 ವರ್ಷದ ನಿಖಿಲ್ ಆರ್ ಸಿಂಗ್ ಮೃತ ದುರ್ದೈವಿಯಾಗಿದ್ದು, ಮದ್ಯ ಸೇವಿಸಿ ಈಜಲು ಹೋದ ವೇಳೆ ದುರಂತ ಸಂಭವಿಸಿದೆ.
ನಿನ್ನೆ ಸಂಜೆ ಭದ್ರಾ ಬ್ಯಾಕ್ ವಾಟರ್ ಮೂವರು ಸ್ನೇಹಿತರೊಂದಿಗೆ ಬಂದಿದ್ದ ನಿಖಿಲ್, ಪಾರ್ಟಿ ಬಳಿಕ ನೀರಿಗೆ ಇಳಿದಿದ್ದನಂತೆ. ಮೃತ ನಿಖಿಲ್ ಶಿವಮೊಗ್ಗ ಜಿಲ್ಲೆ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿಯಾಗಿದ್ದು, ಬ್ಯಾಕ್ ವಾಟರ್ ನಿಂದ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.