ಶಿವಮೊಗ್ಗ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅಮಾನತು: ಹೈಕೋರ್ಟ್ ಆದೇಶದ ಬೆನ್ನಲ್ಲೇ ಸರ್ಕಾರದ ಕ್ರಮ

Published : Aug 19, 2026, 10:27 AM IST
Shivamogga SIMS

ಸಾರಾಂಶ

ಲೈಂಗಿಕ ಕಿರುಕುಳ ಆರೋಪಿ ವೈದ್ಯನನ್ನು ರಕ್ಷಿಸಲು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರನ್ನು ಅಮಾನತುಗೊಳಿಸಲಾಗಿದೆ. ಹೈಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಈ ಶಿಸ್ತುಕ್ರಮ ಕೈಗೊಂಡಿದೆ. ಈ ಪ್ರಕರಣವನ್ನು ಸುವರ್ಣ ನ್ಯೂಸ್ ತನ್ನ ತನಿಖಾ ವರದಿಯ ಮೂಲಕ ಬಯಲಿಗೆಳೆದಿತ್ತು.

ಶಿವಮೊಗ್ಗ (ಆ.19): ವೈದ್ಯಕೀಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಪ್ರಕರಣದಲ್ಲಿ ಆರೋಪಿ ವೈದ್ಯನನ್ನು ರಕ್ಷಿಸಲು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ ಆರೋಪದಡಿ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಹೈಕೋರ್ಟ್ ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ಈ ಮಹತ್ವದ ಶಿಸ್ತುಕ್ರಮ ಕೈಗೊಂಡಿದೆ.

ಸಿಮ್ಸ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಡಾ. ಅಶ್ವಿನ್ ಹೆಬ್ಬಾರ್ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರುವಾಗಲೇ, ಅವರನ್ನು ರಕ್ಷಿಸುವ ಹುನ್ನಾರ ನಡೆದಿತ್ತು. ಸಂಸ್ಥೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಲು ಮೂವರು ವೈದ್ಯರಿದ್ದರೂ, ಆಡಳಿತಾತ್ಮಕವಾಗಿ ತಪ್ಪು ವರದಿ ಸೃಷ್ಟಿಸಲಾಗಿತ್ತು. ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿಯ (ಸಿಎಒ) ಯಾವುದೇ ಸಲಹೆ ಪಡೆಯದೆ ಮತ್ತು ಕಡತಗಳನ್ನು ಸಮರ್ಪಕವಾಗಿ ಮಂಡಿಸದೆ, ಆರೋಪಿ ವೈದ್ಯನಿಗೆ ಅನುಕೂಲವಾಗುವಂತೆ ಡಾ. ವಿರೂಪಾಕ್ಷಪ್ಪ ಸರ್ಕಾರಕ್ಕೆ ಸುಳ್ಳು ಮಾಹಿತಿ ರವಾನಿಸಿದ್ದರು. ಈ ಮೂಲಕ ಡಾ. ಅಶ್ವಿನ್ ಹೆಬ್ಬಾರ್‌ನನ್ನು ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರ್ಜರಿ ವಿಭಾಗಕ್ಕೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಿಸಲು ನೆರವಾಗಿದ್ದರು.

ಆರೋಪಿಗೆ ಸಾಥ್ ನೀಡಿದವರಿಗೂ ಶಿಕ್ಷೆ

ಈ ವಿವಾದಾತ್ಮಕ ವರ್ಗಾವಣೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಫೆಬ್ರವರಿ 4ರಂದು ವರ್ಗಾವಣೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಬಳಿಕ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ಆಗಸ್ಟ್ 4ರಂದು ಅಂತಿಮ ತೀರ್ಪು ಪ್ರಕಟಿಸಿದ್ದ ಹೈಕೋರ್ಟ್, ಆರೋಪಿಗೆ ಸಾಥ್ ನೀಡಿ ಸರ್ಕಾರಕ್ಕೆ ತಪ್ಪು ಮಾಹಿತಿ ರವಾನಿಸಿದ್ದ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಈ ಆದೇಶವನ್ನು ಪಾಲಿಸಿರುವ ಸರ್ಕಾರ ಇದೀಗ ನಿರ್ದೇಶಕರನ್ನು ಕರ್ತವ್ಯದಿಂದ ಅಮಾನತುಗೊಳಿಸಿದೆ.

ಸುವರ್ಣ ನ್ಯೂಸ್ ವರದಿ ಬಿಗ್ ಇಂಪ್ಯಾಕ್ಟ್:

ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಡಾ. ಅಶ್ವಿನ್ ಹೆಬ್ಬಾರ್ ನೀಡುತ್ತಿದ್ದ ಲೈಂಗಿಕ ಕಿರುಕುಳದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಮೊದಲಿಗೆ ಸರಣಿ ತನಿಖಾ ವರದಿಗಳನ್ನು ಬಿತ್ತರಿಸಿ ಭ್ರಷ್ಟ ಜಾಲವನ್ನು ಬಯಲಿಗೆಳೆದಿತ್ತು. ವರದಿಯ ಬೆನ್ನಲ್ಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ಆದರೂ ಆರೋಪಿಯನ್ನು ರಕ್ಷಿಸಲಾಗುತ್ತಿದೆ ಎಂಬ ವರದಿ ಬೆನ್ನಲ್ಲೇ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದರು. ಬಳಿಕ ಅಶ್ವಿನ್ ಹೆಬ್ಬಾರ್ ಅಮಾನತುಗೊಂಡಿದ್ದನು. ಇದೀಗ ಆರೋಪಿಗೆ ಬೆನ್ನೆಲುಬಾಗಿ ನಿಂತು ತಪ್ಪು ಮಾಹಿತಿ ನೀಡಿದ್ದ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರೂ ಅಮಾನತಾಗುವ ಮೂಲಕ ಸುವರ್ಣ ನ್ಯೂಸ್ ವರದಿಗೆ ಮತ್ತೊಂದು ಬೃಹತ್ ಜಯ ಸಿಕ್ಕಂತಾಗಿದೆ.

PREV
Read more Articles on
click me!

Recommended Stories

25 ವರ್ಷಗಳ ಬಳಿಕ ದಂತ ವೈದ್ಯರ ಸಮ್ಮಿಲನ; 2001ರ ಬ್ಯಾಚ್‌ ವಿದ್ಯಾರ್ಥಿಗಳಿಗೆ ಸನ್ಮಾನ
55 km ವೇಗದಲ್ಲಿ ಸಂಚರಿಸುವ ರೈಲಿಗೆ ಸೂಪರ್‌ಫಾಸ್ಟ್ ಹೆಸರ‍್ಯಾಕೆ? ವಂದೇ ಭಾರತ್‌ ಪ್ರಾಯೋಗಿಕ ಸಂಚಾರ