
ಮಂಗಳೂರು: ಪ್ರಸ್ತುತ ರೈಲು ಜಾಲಗಳಲ್ಲಿ ಸಂಚರಿಸುವ ರೈಲುಗಳು ‘ಸೂಪರ್ ಫಾಸ್ಟ್’ ಎಂದು ಫಲಕ ಹಾಕಿಕೊಂಡು ಕೇವಲ ಗಂಟೆಗೆ 55 ಕಿ.ಮೀ. ವೇಗದಲ್ಲಿ ಅಷ್ಟೇ ಸಂಚರಿಸುವ ಮೂಲಕ ಪ್ರಯಾಣಿಕರಿಂದ ದುಬಾರಿ ಮೊತ್ತದ ವಸೂಲಿಗೆ ಕಾರಣವಾಗುತ್ತಿವೆ. ಆದ್ದರಿಂದ ‘ಸೂಪರ್ ಫಾಸ್ಟ್’ ಹೆಸರಿನ ವ್ಯಾಖ್ಯಾನವನ್ನು ಪರಿಷ್ಕರಿಸಬೇಕು ಎಂದು ಮುಂಬೈ ರೈಲು ಯಾತ್ರಿ ಸಂಘ ಬೊರಿವಿಲಿಯ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಒಲಿವರ್ ಡಿಸೋಜಾ ರೈಲ್ವೆ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಈ ಕುರಿತು ರೈಲ್ವೆ ಇಲಾಖೆಗೆ ಬರೆದ ಪತ್ರದಲ್ಲಿ ಅವರು, ಇಂದಿನ ವೇಗದ ಜಗತ್ತಿನಲ್ಲಿ ‘ಸೂಪರ್‌ಫಾಸ್ಟ್’ ಎಂದರೆ ಭಾರತೀಯ ರೈಲ್ವೆ ವ್ಯಾಖ್ಯಾನದ ಪ್ರಕಾರ, ಗಂಟೆಗೆ ಕೇವಲ 55 ಕಿ.ಮೀ. ಸರಾಸರಿ ವೇಗವಿದ್ದರೆ ಸಾಕು! ಇದು ನಿಜಕ್ಕೂ ಹಾಸ್ಯಾಸ್ಪದ. ಚೀನಾದ ಮ್ಯಾಗ್ಲೆವ್, ಜರ್ಮನಿಯ ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಜಪಾನ್‌ನ ಶಿಂಕಾನ್ಸೆನ್ ಮತ್ತು ಫ್ರಾನ್ಸ್‌ನ ಜಿಟಿವಿ ರೈಲುಗಳು ಗಂಟೆಗೆ 350 ಕಿ.ಮೀ.ಗೂ ಅಧಿಕ ವೇಗದಲ್ಲಿ ಓಡುವ ಕಾಲದಲ್ಲಿ, ನಮ್ಮಲ್ಲಿ ರೈಲು ಆಟೋ ರಿಕ್ಷಾದ ವೇಗಕ್ಕೆ ಸಮಾನವಾದ 55 ಕಿ.ಮೀ. ವೇಗದಲ್ಲಿ ಸಂಚರಿಸುವುದಕ್ಕೆ ‘ಸೂಪರ್‌ಫಾಸ್ಟ್’ ಎಂದು ಮುದ್ರೆ ಹಾಕಲಾಗುತ್ತಿದೆ ಎಂದಿದ್ದಾರೆ.
‘ಸೂಪರ್‌ಫಾಸ್ಟ್’ ವರ್ಗೀಕರಿಸಿದ ತಕ್ಷಣ ಟಿಕೆಟ್ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಬಹುದು. ಇದೇ ತಂತ್ರದಿಂದ ಇಂದು ದೇಶದಲ್ಲಿ 1,000ಕ್ಕೂ ಹೆಚ್ಚು ರೈಲುಗಳು ‘ಸೂಪರ್‌ಫಾಸ್ಟ್’ ಪಟ್ಟಿಗೆ ಸೇರಿವೆ. ಇತ್ತೀಚೆಗೆ ಸಿಎಜಿ ವರದಿಯೂ ನಿಧಾನಗತಿಯ ರೈಲುಗಳಿಂದಲೂ ಸೂಪರ್‌ಫಾಸ್ಟ್ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಎತ್ತಿ ತೋರಿಸಿದೆ ಎಂದು ಅವರು ಬೊಟ್ಟು ಮಾಡಿದ್ದಾರೆ. ರೈಲ್ವೆ ಇಲಾಖೆ ಈಗಿನ ತಂತ್ರಜ್ಞಾನ ಮತ್ತು ಪ್ರಯಾಣಿಕರ ನಿರೀಕ್ಷೆಗೆ ತಕ್ಕಂತೆ ‘ಸೂಪರ್‌ಫಾಸ್ಟ್’ನ ವ್ಯಾಖ್ಯಾನವನ್ನು ಪರಿಷ್ಕರಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ.ಅನಂತ್ ಅವರು ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ವಿಭಾಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಪರಿಶೀಲಿಸಿ, ವಿಭಾಗದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಮೂಲಸೌಕರ್ಯ ಹಾಗೂ ಪ್ರಯಾಣಿಕರ ಸೌಲಭ್ಯಗಳ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿದರು.
ಪರಿಶೀಲನೆಯ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕ ಅನಂತ್ ಅವರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಂಬಂಧಿಸಿದ ಕಾರ್ಯಾಚರಣೆ ಮತ್ತು ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದರು ಹಾಗೂ ವಿಭಾಗದಲ್ಲಿನ ರೈಲ್ವೆ ಮೂಲಸೌಕರ್ಯದ ಸಿದ್ಧತೆಯನ್ನು ಅವಲೋಕಿಸಿದರು.
ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳ ಪ್ರಗತಿ
ಅವರು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಿಲ್ದಾಣಗಳಲ್ಲಿ ‘ಅಮೃತ ಭಾರತ ನಿಲ್ದಾಣ ಯೋಜನೆ’ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿ ಪರಿಶೀಲಿಸಿದರು. ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳ ಪ್ರಗತಿ, ಪ್ರಯಾಣಿಕರ ಸೌಲಭ್ಯಗಳು, ಪ್ಲಾಟ್‌ಫಾರ್ಮ್ ಸೌಲಭ್ಯಗಳು, ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಹಾಗೂ ಇತರ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
ಇದನ್ನೂ ಓದಿ: ದಾವಣಗೆರೆ ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ವಿಭಾಗೀಯ ಅಧಿಕಾರಿಗಳು ಪರಿಶೀಲನೆಯ ಸಂದರ್ಭದಲ್ಲಿ ಇದ್ದರು. ಅಧಿಕಾರಿಗಳು ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ವಿಭಾಗದ ಕಾರ್ಯಾಚರಣೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಅಗತ್ಯತೆಗಳ ಕುರಿತು ಪ್ರಧಾನ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ರಸ್ತೆಯ ಕೆಸರು ನೀರಿನಲ್ಲಿಯೇ ಶುಂಠಿ ತೊಳೆದು ವ್ಯಾಪಾರಕ್ಕಿಟ್ಟ ವ್ಯಾಪಾರಿ; ಸಾರ್ವಜನಿಕರಿಂದ ಆಕ್ರೋಶ