ಸಿಗಂದೂರು ರಸ್ತೆ ಬದಿ ಮಧ್ಯರಾತ್ರಿ ರಹಸ್ಯ ಪೂಜೆ; ನಿಗೂಢ ವಸ್ತುಗಳನ್ನಿಡ್ತಿದ್ದ ವ್ಯಕ್ತಿಗೆ ಕ್ಲಾಸ್

Published : Oct 03, 2026, 09:35 AM IST
Sagar Shivamogga

ಸಾರಾಂಶ

ಶಿವಮೊಗ್ಗದ ಸಾಗರ ಪಟ್ಟಣದ ನಿರ್ಜನ ಪ್ರದೇಶದಲ್ಲಿ ರಾತ್ರಿ ವೇಳೆ ಇಬ್ಬರು ವ್ಯಕ್ತಿಗಳು ರಹಸ್ಯವಾಗಿ ಪೂಜೆ ಮತ್ತು ಹೋಮ ಮಾಡುತ್ತಿದ್ದಾಗ ಸ್ಥಳೀಯರು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಎಚ್ಚರಿಕೆ ನೀಡಿದ ನಂತರ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಶಿವಮೊಗ್ಗ: ಸಾಗರ ಪಟ್ಟಣದ ಸಿಗಂದೂರು ರಸ್ತೆ ಬದಿಯಲ್ಲಿರುವ ಸಿಗಂದೂರು ಚೌಡೇಶ್ವರಿ ಪೆಟ್ರೋಲ್ ಬಂಕ್ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ರಾತ್ರಿ ವೇಳೆ ಮಾಟ-ಮಂತ್ರ ನಡೆಸಲಾಗುತ್ತಿದೆ ಎಂಬ ಭೀತಿ ಉಂಟಾಗಿ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಇಬ್ಬರು ವ್ಯಕ್ತಿಗಳು ಮಾರಕಾಸ್ತ್ರ ಹಾಗೂ ನಿಗೂಢ ವಸ್ತುಗಳನ್ನು ಇಟ್ಟುಕೊಂಡು ರಹಸ್ಯವಾಗಿ ಪೂಜೆ ಮತ್ತು ಹೋಮ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಒಟ್ಟುಗೂಡಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಥಳೀಯರು ಪ್ರಶ್ನೆ ಮಾಡಿದಾಗ ತಾವು 'ಉಚ್ಛಾಟನ ಸುದರ್ಶನ ಹೋಮ' ಮಾಡುತ್ತಿದ್ದೇವೆ ಎಂದು ಆ ವ್ಯಕ್ತಿಗಳು ಸಮರ್ಥಿಸಿಕೊಂಡಿದ್ದಾರೆ. ಈ ಪೂಜೆ ಮಾಡಿದ ವ್ಯಕ್ತಿ ಹೆಸರು ನಾಗರಾಜ್ ಭಟ್ ಎಂದು ತಿಳಿದು ಬಂದಿದ್ದು, ಸಾಗರ ಪಟ್ಟಣದಲ್ಲಿರೋ ನಿವಾಸಿ ಎಂದು ತಿಳಿದು ಬಂದಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಲುಪಿದ್ದರಿಂದ ಸಾರ್ವಜನಿಕರು ತಕ್ಷಣವೇ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ.

ಯಾರು ಇವರು? ಎಲ್ಲಿಂದ ಬಂದರು?

ಮಾಟಮಂತ್ರ ಕಂಡು ಸಾರ್ವಜನಿಕರು ಪ್ರಶ್ನೆ ಮಾಡಿದಾಗ, ನನ್ನ ಹೆಸರು ನಾಗರಾಜ್ ಭಟ್, ಬೈಂದೂರಿನಲ್ಲಿರೋದು. ಆದರೆ ಇಲ್ಲಿಯೇ ಸಾಗರದಲ್ಲಿದ್ದೇನೆ. ಉಚ್ಛಾಟನೆ ಸುದರ್ಶನ ಹೋಮ ಮಾಡಿದ್ದೆ. ಈ ವಸ್ತುಗಳೆಲ್ಲವನ್ನು ಸ್ಮಶಾನದಲ್ಲಿ ಹಾಕಬೇಕಿತ್ತು. ಪೆಟ್ರೋಲ್ ಬಂಕ್ ಸಮೀಪದಲ್ಲಿಯೇ ಪೂಜೆ ಮಾಡಿದ್ದೇನೆ ಎಂದು ಹೇಳಿದ್ದಕ್ಕೆ, ಇಲ್ಲಿ ಸ್ಮಶಾನ ಎಲ್ಲಿದೆ? ಮಕ್ಕಳು ಸೇರಿದಂತೆ ಸಾರ್ವಜನಿಕರು ಓಡಾಡೋ ಜಾಗವಿದೆ. ಯಾರಗಾದ್ರೂ ಇದರ ಪರಿಣಾಮ ತಗುಲಿದ್ರೆ ಹೇಗೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಖಡಕ್ ವಾರ್ನಿಂಗ್ ನೀಡಿದ ಪೊಲೀಸರು

ವಿಷಯ ತಿಳಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಾರ್ವಜನಿಕ ಸ್ಥಳದಲ್ಲಿ ಮೂಢನಂಬಿಕೆ ಬಿತ್ತುವಂತಹ ಕೃತ್ಯಗಳನ್ನು ನಡೆಸಿದರೆ ಗಂಭೀರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ವಾರ್ನಿಂಗ್‌ನಿಂದ ಬೆಚ್ಚಿಬಿದ್ದ ಆ ಇಬ್ಬರು ವ್ಯಕ್ತಿಗಳು ತಮ್ಮ ಪೂಜಾ ಸಾಮಗ್ರಿಗಳು ಹಾಗೂ ಮಾರಕಾಸ್ತ್ರಗಳ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ 9ನೇ ಕ್ಲಾಸ್‌ ಅಜಯ್‌ಗೆ ಬಹುಮಾನ

ಸಿಗಂದೂರು ರಸ್ತೆ ಸುತ್ತಮುತ್ತ ಇತ್ತೀಚೆಗೆ ಇಂತಹ ಅನಿಷ್ಟ ಹಾಗೂ ಮಾಟ-ಮಂತ್ರದ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿರುವ ಸಾರ್ವಜನಿಕರು, ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡಲು ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ನಾಳೆ ಮೈಸೂರಿನಲ್ಲಿ ಎಲ್-ಎತಾಪ್ ಸೈಕ್ಲಿಂಗ್ ಕ್ರೀಡಾಕೂಟ; ನಗರ ಸಂಚಾರ ಮಾರ್ಗ ಬದಲಾವಣೆ
ರಸ್ತೆಯಲ್ಲಿ ಸಿಕ್ಕ ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ 9ನೇ ಕ್ಲಾಸ್‌ ಅಜಯ್‌ಗೆ ಬಹುಮಾನ