ಬೆಳಿಗ್ಗೆ ಎದ್ದು ಬಾಗಿಲು ತೆರೆದರೆ ಕೆಳಮನೆಯಲ್ಲಿ ನೀರೋ ನೀರು!

By Web DeskFirst Published Aug 11, 2019, 11:09 AM IST
Highlights

ಆಶ್ಲೇಷ ಮಳೆ ತನ್ನ ಆರ್ಭಟವನ್ನು ತೋರಿಸುತ್ತಿದೆ. ಕುಂಭದ್ರೋಣ ಮಳೆಗೆ ಉತ್ತರ ಕರ್ನಾಟಕ, ಉತ್ತರ ಕನ್ನಡ, ಮಲೆನಾಡು, ಕರಾವಳಿ ಭಾಗದ ಜನ ತತ್ತರಿಸಿ ಹೋಗಿದ್ದಾರೆ. ಶಿವಮೊಗ್ಗದ ನಿವಾಸಿಯೊಬ್ಬರು ಪ್ರವಾಹದ ಅನುಭವವನ್ನು ಹಂಚಿಕೊಂಡಿದ್ದಾರೆ. 

ಶಿವಮೊಗ್ಗ (ಆ. 11): ರಾತ್ರಿಯಿಡೀ ಒಂದೇ ಸಮನೆ ಮಳೆ ಬರುತ್ತಲೇ ಇತ್ತು. ಕುಶಾವತಿ ನದಿ ದಂಡೆಯ ಮೇಲಿನ ತೋಟದ ನಡುವೆ ಇರುವ ಮನೆಯಲ್ಲಿದ್ದೆ. ನೀರು ಮೇಲೆ ಬರಲಾರದು ಎಂದು ಭಾವಿಸಿದ್ದೆ. ಸಂಜೆ ಸ್ವಲ್ಪ ಮೇಲೆ ಬಂದಂತೆ ಅನಿಸಿದ್ದರೂ ಗಂಭೀರವಾಗಿ ಪರಿಗಣಿಸಲಿಲ್ಲ.

ಮೊದಲೇ ಮುನ್ನೆಚ್ಚರಿಕೆ ವಹಿಸಿದ್ದರೆ ಪ್ರವಾಹದ ಅಪಾಯ ತಪ್ಪುತ್ತಿತ್ತು!

ರಾತ್ರಿ 1 ಗಂಟೆಗೆ ಎಚ್ಚರವಾದಾಗ ಏಕೋ ಭಾರಿ ಸದ್ದಿನಿಂದ ಆತಂಕಗೊಂಡು ಲೈಟ್ ಹಾಕಲು ನೋಡಿದೆ. ವಿದ್ಯುತ್ ಇರಲಿಲ್ಲ. ಮೊಬೈಲ್ ಟಾರ್ಚ್ ಮೂಲಕ ಮುಂಬಾಗಿಲು ತೆರೆದು ಹೊರ ಬಂದೆ. ಗಾಬರಿಯಾಗಿತ್ತು. ಮನೆಯಂಗಳಕ್ಕೆ ನೀರು ನುಗ್ಗಿತ್ತು. ನೀರಿನ ಸಣ್ಣ ಅಲೆಗಳು ಹೊಸಿಲನ್ನು ಮುಟ್ಟಿ ವಾಪಸ್ಸು ಹೋಗುತ್ತಿತ್ತು. ಮನೆಯವರನ್ನು ಎಬ್ಬಿಸಿದೆ. ಪಕ್ಕದಲ್ಲಿ ಹೊಸದಾಗಿ ಕಟ್ಟಲಾದ ಮನೆಯ ಮಹಡಿಗೆ ಹೋಗೋಣ ಎಂದು ಪತ್ನಿ ಮತ್ತು ಮಕ್ಕಳಿಬ್ಬರಿಗೆ ಹೇಳುತ್ತಿದ್ದಂತೆ ನೀರು ಕೆಳ ಮನೆಯೊಳಗೆ ಪ್ರವೇಶಿಸಿತು.

ತಕ್ಷಣವೇ ಮನೆಯಲ್ಲಿದ್ದ ವಸ್ತುಗಳನ್ನು ಮಂಚದ ಮೇಲೆ ಇಡುತ್ತಿದ್ದಂತೆ ನಿಧಾನವಾಗಿ ನೀರು ಮೇಲೇರುತ್ತಿತ್ತು. ಗಾಬರಿಯಿಂದ ಮಕ್ಕಳು ಹಾಸಿಗೆ ಸುತ್ತಿ ಮಂಚದ ಮೇಲೆ ನಿಂತಿದ್ದರು. ಕಾರ್ಗತ್ತಲು, ಇಡೀ ಪ್ರದೇಶಕ್ಕೆ ನಮ್ಮದೊಂದೇ
ಮನೆ. ತಡ ಮಾಡದೆ ಮಹಡಿಗೆ ಹತ್ತಿದೆವು. ಅಷ್ಟರಲ್ಲಾಗಲೇ ಮೊಳಕಾಲುದ್ದ ನೀರು. ಕೊಟ್ಟಿಗೆಯಲ್ಲಿ ಆರು ದನಗಳು ಇದ್ದವು. ಗಾಬರಿಯಿಂದ ಒಂದೇ ಸಮನೇ ಕೂಗುತ್ತಿದ್ದವು. ಏನು ಮಾಡುವುದು ತೋಚಲಿಲ್ಲ. ಕತ್ತಲಲ್ಲಿ ತಡಕುತ್ತಾ ಅವುಗಳ ಕುತ್ತಿಗೆಯಲ್ಲಿ ಇದ್ದ ಹಗ್ಗ ಬಿಚ್ಚಿ ಬಂದೆ. ಆದರೆ ಎಲ್ಲೂ ಹೋಗಲು ಸಾಧ್ಯವಿರಲಿಲ್ಲ. \

45 ವರ್ಷದ ನಂತರ ಮಹಾಮಳೆಗೆ ಮುಳುಗಿದ ಉಪ್ಪಿನಂಗಡಿ

ಸುತ್ತಲೂ ಹಳ್ಳವಿದ್ದು, ಎಲ್ಲೆಡೆ ನೀರು ತುಂಬಿತ್ತು. ಗುಡುಗು ಸಿಡಿಲು ಬೇರೆ. ಆಗಾಗ್ಗೆ ಸಿಡಿಲಿನ ಮಂದ ಬೆಳಕಿಗೆ ಇಡೀ ಪ್ರದೇಶ ಸಮುದ್ರದಂತೆ ಕಾಣುತ್ತಿತ್ತು. ಜೀವ ಕೈಯಲ್ಲಿ ಹಿಡಿದುಕೊಂಡು ಬೆಳಗಾಗುವುದನ್ನೇ ಕಾಯುತ್ತಾ ಕುಳಿತಿದ್ದೆವು. ಗಾಳಿ ಮಳೆಯ ಶಬ್ಧ ಹೆದರಿಕೆ ಉಂಟು ಮಾಡುತ್ತಿತ್ತು. ಬೆಳಗಾಗುವಷ್ಟರಲ್ಲಿ ಕೆಳಗೆ ೫ ಅಡಿ ನೀರು ನಿಂತಿತ್ತು. ದೂರದಲ್ಲಿ ಊರಿನ ಜನ ನಮ್ಮ ರಕ್ಷಣೆಗೆ ಪ್ರಯತ್ನಿಸುತ್ತಿದ್ದರು. ಆದರೆ ಯಾರಿಗೂ ಹತ್ತಿರ ಬರಲಾಗಲಿಲ್ಲ. ಆಗ ಅಗ್ನಿಶಾಮಕ ದಳದವರಿಗೆ ಸುದ್ದಿ ಹೋಯಿತು. ಪೊಲೀಸರೊಂದಗೆ 7 ಗಂಟೆಗೆ ಬಂದರು.

ತೆಪ್ಪದ ಮೂಲಕ ಒಬ್ಬೊಬ್ಬರನ್ನೇ ದಾಟಿಸಿದರಲ್ಲದೆ, ದನಗಳನ್ನು ರಕ್ಷಿಸಿದರು. ರಸ್ತೆಗೆ ಬಂದಾಗ ಮತ್ತೆ ಜೀವ ಬಂದಂತಾಗಿತ್ತು. ಆ ದೇವರೇ ಇವರ ರೂಪದಲ್ಲಿ ಬಂದರು ಎನಿಸಿತ್ತು.

- ಕೆ ಎಸ್ ರಂಗನಾಥ 

 

click me!