
ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದ ಭೀಕರ ಕೊಲೆ ಪ್ರಕರಣವು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಹಣಕಾಸಿನ ಸಣ್ಣ ವಿವಾದದಿಂದ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ನಂತರ ಆರೋಪಿಯು ಮೃತದೇಹವನ್ನು ಕಾರಿನಲ್ಲಿ ಇಟ್ಟುಕೊಂಡೇ ಊರು ಇಡೀ ಸುತ್ತಾಡಿದ ಘಟನೆ ನಡೆದಿದೆ. ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆ ಹಾಗೂ ಗೇಮ್‌ಝೋನ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಟಿಂಕೂ ಶರ್ಮಾ (26) ಎಂಬಾತನ ಹತ್ಯೆ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆ ಪೊಲೀಸರು ಕೆಫೆ ಮಾಲೀಕ ಇಮ್ರಾನ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಟಿಂಕೂ ಶರ್ಮಾ ಸುಮಾರು ಆರು ತಿಂಗಳ ಹಿಂದೆ ಬಿಹಾರದಿಂದ ಸಾಗರಕ್ಕೆ ಬಂದು ಕೆಫೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದನು. ಬುಧವಾರ ತಡರಾತ್ರಿ ಕೆಫೆ ಮಾಲೀಕ ಇಮ್ರಾನ್, ಟಿಂಕೂ ಹಣ ಕಳವು ಮಾಡುತ್ತಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ. ಈ ಜಗಳ ಗುರುವಾರ ಬೆಳಿಗ್ಗೆ ತೀವ್ರವಾಗಿ ವಿಕೋಪಕ್ಕೆ ತಿರುಗಿದೆ. ಆವೇಶಕ್ಕೆ ಒಳಗಾದ ಇಮ್ರಾನ್, ಸ್ನೂಕರ್ ಸ್ಟಿಕ್‌ನಿಂದ ಟಿಂಕೂ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ಟಿಂಕೂ ಶರ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೊಲೆ ಮಾಡಿದ ಬಳಿಕ ಗಾಬರಿಗೊಂಡ ಇಮ್ರಾನ್, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ತನ್ನ ಕೆಎ-15-ಎಂ-7022 ನೋಂದಣಿ ಸಂಖ್ಯೆಯ ಹೊಂಡಾ ಸಿಟಿ ಕಾರಿನಲ್ಲಿ ಇರಿಸಿಕೊಂಡಿದ್ದಾನೆ. ನಂತರ ಶವವನ್ನು ನಿರ್ಜನ ಪ್ರದೇಶಗಳು, ರೈಲ್ವೆ ಹಳಿ ಮುಂತಾದ ಕಡೆಗಳಲ್ಲಿ ಎಸೆಯಲು ಯತ್ನಿಸಿದ್ದಾನೆ. ಆದರೆ ಈ ಯತ್ನದಲ್ಲಿ ವಿಫಲವಾದ ಆತ, ಕಾರಿನಲ್ಲಿ ಶವ ಇಟ್ಟುಕೊಂಡೇ ಪಟ್ಟಣದ ವಿವಿಧ ಭಾಗಗಳಲ್ಲಿ ಸುತ್ತಾಡಿ, ಕೊನೆಗೆ ನೆಹರು ನಗರದಲ್ಲಿರುವ ತನ್ನ ಮನೆಯ ಮುಂದೆ ಕಾರನ್ನು ನಿಲ್ಲಿಸಿದ್ದಾನೆ.
ನೆಹರು ನಗರದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಶವ ಇರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾರು ಸಹಿತ ಆರೋಪಿ ಇಮ್ರಾನ್ ಅನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಬಿ. ನಿಖಿಲ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಡಾ. ಬೆನಕ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿ ನಿಖಿಲ್, “ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಲೀಕ ಮತ್ತು ಕಾರ್ಮಿಕನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಸಾಧ್ಯತೆ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಮೃತ ಟಿಂಕೂ ಶರ್ಮಾ ಬಿಹಾರದ ಪಾಟ್ನಾ ಸಮೀಪದ ಬಲ್ಪಾಪುರದ ನಿವಾಸಿಯಾಗಿದ್ದು, ಆರು ತಿಂಗಳ ಹಿಂದೆ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದಾನೆ. ಶವದ ಮೇಲೆ ಕೆಲವು ಗಾಯಗಳ ಗುರುತುಗಳಿದ್ದು, ಹರಿತವಾದ ಆಯುಧ ಬಳಕೆಯ ಲಕ್ಷಣಗಳು ಕಂಡುಬಂದಿಲ್ಲ. ಮುಂದಿನ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ,” ಎಂದು ತಿಳಿಸಿದ್ದಾರೆ.
ನಗರದ ಹೃದಯಭಾಗದಲ್ಲೇ ನಡೆದ ಈ ಭೀಕರ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಸಣ್ಣ ಹಣಕಾಸಿನ ವಿವಾದವೇ ಹತ್ಯೆಯ ಮಟ್ಟಕ್ಕೆ ತಲುಪಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಪ್ರಸ್ತುತ ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಇನ್ನಷ್ಟು ವಿವರಗಳು ಬಹಿರಂಗವಾಗುವ ಸಾಧ್ಯತೆ ಇದೆ.