ಶಿವಮೊಗ್ಗ: ಮುರುಘಾ ಶ್ರೀಗಳಿಗೆ ಎಲ್ಲ ರೀತಿಯ ಪರೀಕ್ಷೆ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ: ಡಾ. ಶ್ರೀಧರ್

By Girish GoudarFirst Published Sep 22, 2022, 12:38 PM IST
Highlights

ಮುರುಘಾ ಶ್ರೀಗಳ ಆರೋಗ್ಯದ ಮೇಲೆ ನಿಗಾ ಇಡಲು ನಾಲ್ಕು ತಜ್ಞ ವೈದ್ಯರ ತಂಡ ರಚನೆ ಮಾಡಲಾಗಿದೆ. ಇಂದು ವೈದ್ಯರು ಮತ್ತೊಮ್ಮೆ ಎಕೋ, ಇಸಿಜಿ, ರಕ್ತ ಪರೀಕ್ಷೆ ನಡೆಸಲಿದ್ದಾರೆ: ಡಾ. ಶ್ರೀಧರ್ 

ಶಿವಮೊಗ್ಗ(ಸೆ.22): ಮುರುಘಾ ಶ್ರೀಗಳಿಗೆ ತಜ್ಞ ವೈದ್ಯರ ತಂಡ ಎಲ್ಲಾ ರೀತಿಯ ತಪಾಸಣೆ ನಡೆಸಿದೆ. ರಾತ್ರಿ ಆಸ್ಪತ್ರೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದೆವು. ಚೆನ್ನಾಗಿ ನಿದ್ದೆ ಮಾಡಿದ್ದಾರೆ. ಎಕೋ, ಇಸಿಜಿ, ರಕ್ತ ಪರೀಕ್ಷೆ ಎಲ್ಲ ರೀತಿಯ ಪರೀಕ್ಷೆ ಮಾಡಲಾಗಿದೆ. ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಅಂತ ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ. ಶ್ರೀಧರ್ ತಿಳಿಸಿದ್ದಾರೆ.

ಇಂದು(ಗುರುವಾರ) ಮಾಧ್ಯದವರಿಗೆ ಮಾಹಿತಿ ನೀಡಿದ ಡಾ. ಶ್ರೀಧರ್ ಅವರು, ಮುರುಘಾ ಶ್ರೀಗಳ ಆರೋಗ್ಯದ ಮೇಲೆ ನಿಗಾ ಇಡಲು ನಾಲ್ಕು ತಜ್ಞ ವೈದ್ಯರ ತಂಡ ರಚನೆ ಮಾಡಲಾಗಿದೆ. ಇಂದು ವೈದ್ಯರು ಮತ್ತೊಮ್ಮೆ ಎಕೋ, ಇಸಿಜಿ, ರಕ್ತ ಪರೀಕ್ಷೆ ನಡೆಸಲಿದ್ದಾರೆ. ದೈಹಿಕ ಕ್ಷಮತೆಯ ವರದಿ ಬಂದ ನಂತರ ಆಂಜಿಯೋಗ್ರಾಂ ತಪಾಸಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಉಪಹಾರಕ್ಕೆ ಅವರು ಏನು ಕೇಳ್ತಾರೋ ಅದನ್ನು ಕೊಡ್ತೇವೆ ಅಂತ ಹೇಳಿದ್ದಾರೆ. 

ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್, ಮುರುಘಾ ಶ್ರೀಗಳಿಗೆ ಮತ್ತೆ ನಿರಾಸೆ

ಇನ್ನುಳಿದ ಮೂವರು ಆರೋಪಿಗಳಿಗೆ ಪೊಲೀಸರ ಶೋಧ 

ಮುರುಘಾ ಶ್ರೀ ವಿರುದ್ದದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ A1 ಆರೋಪಿ ಮುರುಘಾ ಶ್ರೀ ಹಾಗೂ A2 ಆರೋಪಿ ಲೇಡಿ ವಾರ್ಡನ್ ರಶ್ಮಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇನ್ನುಳಿದ ಮೂವರು ಆರೋಪಿಗಳು ನಾಪತ್ತೆ ಆಗಿದ್ದು ಅವರಿಗಾಗಿ ಪೊಲೀಸರು ಇನ್ನೂ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸದ್ಯ ಸೆಪ್ಟೆಂಬರ್ 27ರವರೆಗೂ ಚಿತ್ರದುರ್ಗ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುರುಘಾ ಶ್ರೀಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಸಂದರ್ಭದಲ್ಲಿ ಮುರುಘಾ ಶ್ರೀ ಪರ ವಕೀಲರು ಮುರುಘಾ ಶ್ರೀಗಳಿಗೆ ಹೃದಯ ಸಂಬಂಧಿ ಕಾಯಿಲೆಯಿದೆ ಹೆಚ್ಚಿನ ಚಿಕಿತ್ಸೆಗಾಗಿ ಅವಕಾಶ ಮಾಡಿಕೊಡಿ ಎಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದರು.

ಮುರುಘಾ ಶ್ರೀ ಪ್ರಕರಣದಲ್ಲಿ ಬಿಜೆಪಿ ಶಾಸಕ ಎಂಟ್ರಿ, ಹೈಕೋರ್ಟ್‌ ಜಡ್ಜ್‌ಗೆ ಪತ್ರ ಬರೆದ ಯತ್ನಾಳ್!

ಅದರಂತೆ ನಿನ್ನೆ(ಬುಧವಾರ) ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಕೆ ಕೋಮಲಾ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಿ ಆದೇಶ ಹೊರಡಿಸಿದ್ದರು. ಸದ್ಯ ಚಿತ್ರದುರ್ಗ ಜಿಲ್ಲೆಯ ಸಮೀಪ ಅಂದ್ರೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾರಿ ಎಂಜೋಗ್ರಾಮ್ ಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ನ್ಯಾಯಾಧೀಶರು ಪರಿಗಣಿಸಿ ಆದೇಶ ಹೊರಡಿಸಿದ್ದರು. ಕೋರ್ಟ್ ಸೂಚನೆ ಮೇರೆಗೆ ಇಂದು ಸಂಜೆ 6 ಗಂಟೆ ಸುಮಾರಿಗೆ ಚಿತ್ರದುರ್ಗ ಜಿಲ್ಲಾ ಕಾರಾಗೃಹ ಅಧೀಕ್ಷಕರು ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಆರೋಪಿ ಮುರುಘಾ ಶ್ರೀ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ಅನುಮತಿ ನೀಡಿದ್ದರು. ಪೊಲೀಸ್ ವ್ಯಾನ್ ನಲ್ಲೇ ಮುರುಘಾ ಶ್ರೀ ಕೂರಿಸಿಕೊಂಡು ಸೂಕ್ತ ಭದ್ರತೆಯೊಂದಿಗೆ ಮುರುಘಾ ಶ್ರೀಗಳನ್ನು ಶಿವಮೊಗ್ಗಕ್ಕೆ ಶಿಫ್ಟ್ ಮಾಡಲಾಗಿತ್ತು.

ಮುರುಘಾ ಮಠದ ಮುಂಭಾಗದಲ್ಲಿಯೇ ಪೊಲೀಸ್ ವ್ಯಾನ್ ನಲ್ಲಿ ಮುರುಘಾ ಶ್ರೀ

ಚಿತ್ರದುರ್ಗದ ಪ್ರಸಿದ್ದ ಮಠಗಳಲ್ಲಿ ಮುರುಘಾ ಮಠವೂ ಒಂದಾಗಿದೆ. ಅದರ ಪೀಠಾಧ್ಯಕ್ಷರಾದ ಮುರುಘಾ ಶ್ರೀಗಳು ಇಂದು ಪೋಕ್ಸೋ ಪ್ರಕರಣ(POCSO case)ದಲ್ಲಿ A1 ಆರೋಪಿ ಆಗಿರುವ ಕಾರಣಕ್ಕೆ, ತಮ್ಮದೇ ಮುರುಘಾ ಮಠದ ಮುಂಭಾಗದಲ್ಲಿಯೇ ಪೊಲೀಸ್ ವ್ಯಾನ್ ನಲ್ಲಿ ಆರೋಪಿಯಾಗಿ ಕುಳಿತು ಸಾಗಿದ್ದು ಮುರುಘಾಶ್ರೀ ಭಕ್ತವೃಂದದಲ್ಲಿ ಕೊಂಚ ನೋವುಂಟು ಮಾಡಿತು ಅಂದ್ರೆ ತಪ್ಪಾಗಲಿಕ್ಕಿಲ್ಲ. ಮುರುಘಾ ಶ್ರೀ ಕರೆದೊಯ್ಯುತ್ತಿದ್ದ ಪೊಲೀಸರ ವ್ಯಾನ್ ಮುರುಘಾ ಮಠದ ಮುಂಭಾಗ ಸಾಗುತ್ತಿದ್ದಂತೆ ಮುರುಘಾ ಮಠದ ಮುಂಭಾಗದಲ್ಲಿ ನಿಂತಿದ್ದ ಸ್ವಾಮೀಜಿಗಳ ಅನುಯಾಯಿಗಳು ವ್ಯಾನ್ ನತ್ತ ನೋಡಿ ಕೈಮುಗಿಯುವ ಮೂಲಕ ಮುರುಘಾ ಶ್ರೀಗಳಿಗೆ ನಮಸ್ಕರಿಸಿದರು. ಇದೆಲ್ಲೋ ಒಂದ್ಕಡೆ ತಮ್ಮದೇ ಮಠದ ಸ್ವಾಮೀಜಿ ತಮ್ಮ ಮಠದ ಮುಂಭಾಗದಲ್ಲಿಯೇ ಈ ರೀತಿ ಆರೋಪಿಯಾಗಿ ಪೊಲೀಸರ ಸರ್ಪಗಾವಲಿನಲ್ಲಿ ಸಾಗಿದರಲ್ಲ ಎಂದು ಭಕ್ತವೃಂದ ಗುನುಗುಡುತಿತ್ತು.
 

click me!